ಜನಮನ

ಕಾಫ್ಕಾ, ಕಳೆದೋದ ಗೊಂಬೆ ಮತ್ತು ಹುಡುಗಿ

ಮನೋಹರ ಪಟೇಲ್


ಬೋಹೀಮಿಯನ್ ಕಾದಂಬರಿಕಾರ ಮತ್ತು ಸಣ್ಣಕಥೆಗಾರ ಫ್ರಾಂಜ್ ಕಾಫ್ಕಾ (1883-1924),
ಒಂದು ದಿನ ಎಂದಿನಂತೆ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನ ಮೂಲಕ ಅಡ್ಡಾಡುತ್ತಿದ್ದಾಗ, ಪಾರ್ಕನಲ್ಲಿ ತನ್ನ ನೆಚ್ಚಿನ ಗೊಂಬೆಯನ್ನು ಕಳೆದುಕೊಂಡಿದ್ದ ಕಾರಣ ಕಣ್ಣೀರು ಹಾಕುತ ಗೊಂಬೆಯನ್ನು ಹುಡುಕುತ್ತಿದ್ದ ಪುಟ್ಟ ಹುಡುಗಿಯನ್ನು ಕಂಡರು.

ಆಗ ಆ ಹುಡುಗಿಯೊಂದಿಗೆ ತಾವೂ ಕೂಡ ಸೇರಿಕೊಂಡು ಗೊಂಬೆಯನ್ನು ಹುಡುಕಲು ವಿಫಲ ಪ್ರಯತ್ನಗಳನ್ನು ಮಾಡಿದ ಕಾಫ್ಕಾ ಕೊನೆಗೆ ತಾವು ಮತ್ತು ಆಕೆ ಮರುದಿನ ಅದೇ ಜಾಗದಲ್ಲಿ ಭೇಟಿಯಾಗಿ ಕಳೆದುಹೋದ ಗೊಂಬೆಯನ್ನು ಪುನಃ ಹುಡುಕುವ ಒಟ್ಟು ನಿರ್ಧಾರಕ್ಕೆ ಬರುತ್ತಾರೆ.

ಮರುದಿನ, ಇಬ್ಬರೂ ಸೇರಿ ಗೊಂಬೆಯನ್ನ ಹುಡುಕಲು ಹೊರಡುತ್ತಾರೆ. ಆದರೆ ಕೊನೆಗೂ ಗೊಂಬೆಯನ್ನು ಕಂಡುಹಿಡಿಯಲು ಆಗುವುದಿಲ್ಲ. ಆಗ ಕಾಫ್ಕಾ ತಮ್ಮ ಜೇಬಿನಲ್ಲಿ ಮುಂಚೆಯೇ ಬರೆದಿಟ್ಟಿಕೊಂಡಿದ್ದ ಪತ್ರವನ್ನು ತೆಗೆದು ಇದು ಗೊಂಬೆ “ಬರೆದ” ಪತ್ರ ಸಿಕ್ಕಿತು ಎಂದು ಕಾಫ್ಕಾ ಆ ಹುಡುಗಿಗೆ ನೀಡಿದರು. ಆ ಪತ್ರದಲ್ಲಿ “ದಯವಿಟ್ಟು ಅಳಬೇಡ” , ನಾನು ಜಗತ್ತನ್ನು ನೋಡಲು ಪ್ರವಾಸಕ್ಕೆ ಹೋಗಿದ್ದೇನೆ. ನನ್ನ ಸಾಹಸಗಳ ಬಗ್ಗೆ ನಾನು ನಿಮಗೆ ಬರೆಯಲಿದ್ದೇನೆ. ” ಎಂದು ಒಕ್ಕಣೆಯಿತ್ತು.

ಹೀಗೆ ಆರಂಭವಾದ ಅವರಿಬ್ಬರ ಕಥೆ ಕಾಫ್ಕಾರ ಕೊನೆಯ ದಿನಗಳವರೆಗೂ ಮುಂದುವರಿದಿತ್ತು.

ಅವರು ಪುನಃ ಭೇಟಿಯಾದಾಗೆಲ್ಲಾ, ಕಾಫ್ಕಾ ಅವರು ತಾವು ಬಹು ಜಾಗೂರುಕವಾಗಿ ಸಂಯೋಜಿಸಿದ ಹುಡುಗಿಯ ಪ್ರೀತಿಯ ಗೊಂಬೆಯ ಸಾಹಸ ಪತ್ರಗಳನ್ನು ಮತ್ತು ಸಂಭಾಷಣೆಗಳನ್ನು ಆಕೆಯೊಂದಿಗೆ ಗಟ್ಟಿಯಾಗಿ ಓದುತ್ತಿದ್ದರುರು, ಅದು ಆ ಪುಟ್ಟ ಹುಡುಗಿಗೆ ಮನಸನ್ನು ಮೋಡಿಮಾಡಿದಂತಾಗುತ್ತಿತ್ತು.

ಅಂತಿಮವಾಗಿ, ಒಂದು ದಿನ ಕಾಫ್ಕಾ ತಾವೇ ಬರ್ಲಿನ್ ನಿಂದ ಖರೀದಿಸಿ ತಂದ ಒಂದು ಗೊಂಬೆಯೊಂದನ್ನು ಆಕೆಗೆ ಕೊಟ್ಟು ಗೊಂಬೆಯ ಕಥೆಯಿರುವ ಒಂದು ಪತ್ರವೊಂದನ್ನು ಆಕೆಗೆ ಓದಿದರು. ಆ ಹುಡುಗಿ “ಇದು ನನ್ನ ಗೊಂಬೆಯಂತೆ ಕಾಣ್ತಾಯಿಲ್ಲ” ಎಂದು ಹೇಳಿದಾಗ. ಕಾಫ್ಕಾ ಆಕೆಗೆ ಮತ್ತೊಂದು ಪತ್ರವನ್ನು ಹಸ್ತಾಂತರಿಸಿದರು, ಅದರಲ್ಲಿ “ನನ್ನ ಪ್ರವಾಸಗಳು, ನನ್ನನ್ನು ಬದಲಾಯಿಸಿಬಿಟ್ಟಿದೆ” ಎಂದು ಬರೆದಿತ್ತು. ಹುಡುಗಿ ಸಂತೋಷದಿಂದ ತನ್ನ ಗೊಂಬೆಯನ್ನು ತಬ್ಬಿಕೊಂಡು ತನ್ನೊಂದಿಗೆ ಮನೆಗೆ ಕರೆದೊಯ್ದಳು.

ತದನಂತರ ಹಲವು ವರ್ಷಗಳ ಬಳಿಕ, ಬೆಳೆದ ದೊಡ್ಡವಳಾದ ಆ ಹುಡುಗಿ ತನ್ನ ಗೊಂಬೆಯಲ್ಲಿ ಎಂದೂ ಗಮನಿಸದ ಬಿರುಕಿನಲ್ಲಿ ಸಿಕ್ಕಿಸಿದ ಸಣ್ಣ ಪತ್ರವೊಂದನ್ನು ಕಂಡುಳು. ಕಾಫ್ಕಾ ಸಹಿ ಮಾಡಿದ್ದ ಆ ಸಣ್ಣ ಪತ್ರದಲ್ಲಿ, “ನೀವು ಪ್ರೀತಿಸುವ ಪ್ರತಿಯೊಂದುವೂ ಕಳೆದುಹೋಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ, ಆ ಪ್ರೀತಿ ಬೇರೆ ರೀತಿಯಲ್ಲಿಯೆ ಮರಳಿಬರುತ್ತದೆ” ಎಂದು ಬರೆದಿತ್ತು.

Image courtesy ; @Kafka’s doll

Comment here