ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಕಾನೂನುಗಳನ್ನು ಸಂಹಿತೆಗಳನ್ನಾಗಿಸಲು ಹೊರಟಿದ್ದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಟೀಕಾಪ್ರಹಾರ ನಡೆಸಿದರು
ತುಮಕೂರಿನ ಗಾಜಿನಮನೆಯಲ್ಲಿ ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ಸಿಐಟಿಯು 14ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು.
.
ಬಂಡವಾಳ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗುತ್ತಿದೆ. ಕ್ರೂರ ವ್ಯವಸ್ಥೆ ನಮ್ಮನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಜನರನ್ನು ಒಡೆದು ಸೌಹರ್ದತೆಯನ್ನೇ ನಾಶ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇಂತಹ ಲೋಪದೋಷ ಪ್ರಶ್ನಿಸುವವರನ್ನು ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಜೈಲಿಗೆ ಹೋದವರನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಮಾತನಾಡಿ, ಮಹಿಳೆಯರಿಗೆ ಸಮಾನ ವೇತನ ಸಿಗುತ್ತಿಲ್ಲ. ಹಲವು ಹೋರಾಟ ಮಾಡಿದರೂ ಮಹಿಳೆಯರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಕೀಂ ನೌಕರರಿಗೆ ಕೆಲವೊಂದು ಸೌಲಭ್ಯ ಸಿಗುತ್ತದೆಯಾದರೂ ಬಿಸಿಯೂಟ ಮಹಿಳಾ ಕಾರ್ಮಿಕರಿಗೆ ತಿಂಗಳ ರಜೆ, ಹೆರಿಗೆ ರಜೆ ಸೇರಿದಂತೆ ಯಾವುದೇ ರಜೆಗಳು ಸಿಗುತ್ತಿಲ್ಲ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ದೇಶದಲ್ಲಿ ಜನರ ಐಕ್ಯತೆ ಮುರಿಯುವ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕರು ಅವಕಾಶ ನೀಡಬಾರದು ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ನೆರೆ ಬಂದು ಬದುಕು ಕೊಚ್ಚಿ ಹೋಗಿದ್ದರೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲುತ್ತಿರುವ ಜನರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಜನರ ಬದುಕನ್ನು ಬೀದಿಪಾಲು ಮಾಡಿದೆ. ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಶೋಷಣೆ ಹೆಚ್ಚುತ್ತಿದೆ. ಸಾಮಾಜಿಕ ಭದ್ರತೆಗೆ ಧಕ್ಕೆ ಬಂದಿದೆ. ಸರ್ಕಾರವೇ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ ಎಂದು ಹೇಳಿದರು.
ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಟಿಪ್ಪು ವಿಷಯವನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದೆ. ಚುನಾವಣೆಗಳು ಬರುತ್ತಿದ್ದಂತೆಯೇ ಇಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದರ ಬಗ್ಗೆ ಎಲ್ಲಾ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಮುಖಂಡರಾದ ವಿಜೆಕೆ ನಾಯರ್, ಕೆಎನ್.ಉಮೇಶ್, ಸೈಯದ್ ಮುಜೀಬ್ ಗುಲ್ಜಾರ್ ಬಾನು, ಶಂಕರ್, ವಸಂತಾಚಾರಿ, ವೀರಾಸ್ವಾಮಿ ಬಿ.ಷಣ್ಮುಖಪ್ಪ, ಎ.ಲೋಕೇಶ್, ಹೆಚ್.ಡಿ.ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಸ್ವಾಗತಿಸಿದರು. ಸಿಐಟಿಯು ಖಜಾಂಚಿ ಜಿ.ಕಮಲ ವಂದಿಸಿದರು.