ತುರುವೇಕೆರೆ: ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಕೊಬ್ಬರಿಗೆ ₹10300 ರೂಪಾಯಿಗಳ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿರುವುದು ಸಂತೋಷದಾಯಕವಾಗಿದ್ದು; ಇದಕ್ಕೆ ತಾಲ್ಲೂಕಿನ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಮಸಾಲ ಜಯರಾಂ ತಿಳಿಸಿದರು.
ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಟಿ.ಕ್ರಾಸ್ ಬಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕಿನ ಜನತೆ ತೆಂಗು ಬೆಳೆಯನ್ನೇ ನಂಬಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಲಾಕ್ಡೌನ್ ಹಾಗು ಕೋವಿಡ್-19ರಿಂದಾಗಿ ಕೊಬ್ಬರಿಯ ಸಹಜ ಮಾರುಕಟ್ಟೆಯ ಬೆಲೆ ಸಂಪೂರ್ಣ ಕುಸಿದು ಕೊಬ್ಬರಿಗೆ ಬೇಡಿಕೆಯಿಲ್ಲದಾಗಿ ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರ ಸಮಸ್ಯೆಯನ್ನು ಆಲಿಸಿದ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಟ್ಟುಗೂಡಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದಿಂದ ಬೆಂಬಲ ಕೊಡಿಸಬೇಕೆಂದು ವಿನಂತಿಸಿಕೊಂಡಿದ್ದೆವು. ಇದರ ಫಲಶ್ರುತಿಯಾಗಿ ಪ್ರಧಾನಿಯವರು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನವಿಗೆ ಸ್ಪಂದಿಸಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ ಎಂದರು.
ಕೇಂದ್ರದಂತೆಯೇ ರಾಜ್ಯ ಸರ್ಕಾರವೂ ಕೂಡ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಸಧನದಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಘೋಷಣೆ ಮಾಡಲಿದ್ದಾರೆ. ತುರುವೇಕೆರೆ ಸೇರಿದಂತೆ ರಾಜ್ಯದಾದ್ಯಂತ ಕೊಬ್ಬರಿಗೆ ನಫೆಡ್ ಕೇಂದ್ರ ತೆರೆದಿದ್ದು ನಾಳೆಯಿಂದಲೇ ರೈತರು ಬೆಂಬಲ ಬೆಲೆ ಪಡೆಯಲು ನಫೆಡ್ ಕೇಂದ್ರದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವಿ.ಬಿ.ಸುರೇಶ್, ಸೋಮಣ್ಣ, ಮಂಜಣ್ಣ, ಅಪ್ಪಿ, ಸುರೇಶ್, ಜಯಣ್ಣ, ಪಾಂಡು ಮತ್ತು ಕಾರ್ಯಕರ್ತರುಗಳು ಇದ್ದರು.