Publicstory.in
Tumkuru; ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಸಂಘಟಿತ ಮತ್ತು ಅಸಂಘಟಿತ ವಲಯವೂ ಸೇರಿದಂತೆ ಸಾಮಾನ್ಯ ಜನರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರಗಳು ಅವರ ನೆರವಿಗೆ ಬರಬೇಕು ಎಂದು ಸಿಪಿಎಂ ಮುಖಂಡ ಬಿ.ಉಮೇಶ್ ಒತ್ತಾಯಿಸಿದರು.
ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಕೊರೊನ ವೈರಸ್ ವಿರುದ್ದ ಹೋರಾಟಕ್ಕೆ ಜನತೆಯ ಸೌಹಾರ್ದತಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊರೊನ ವೈರಸ್ ನಿಂದ ಜನರು ಭೀತರಾಗಿದ್ದಾರೆ. ಜನರಲ್ಲಿರುವ ಭೀತಿ ಹೋಗಲಾಡಿಸಲು ಸರ್ಕಾರಗಳು ಕ್ರಮ ವಹಿಸಬೆಕು ಎಂದು ತಿಳಿಸಿದರು.
ಕೊರೋನ ವೈರಸ್ ಬಗ್ಗೆ ಸಾಮಾನ್ಯ ಜನರಿಗೆ ಇರುವ ಅನುಮಾನಗಳನ್ನು ಬಗೆಹರಿಸಬೇಕು. ಇಂದು ಟಿವಿ ಮಾಧ್ಯಮಗಳು ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡುತ್ತಿವೆ. ಸರ್ಕಾರ ಕೇವಲ ಚರ್ಚೆ ನಡೆಸುತ್ತಿದೆಯೇ ಹೊರತು ಕೊರೊನಾ ವೈರಸ್ ತಡೆಗೆ ವ್ಯಾಪಕ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೇರಳ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಹಣವನ್ನು ಕೊರೋನ ತಡೆಯಲು ಮೀಸಲಿಟ್ಟಿದೆ. ಜನರಿಗೆ ಎರಡು ತಿಂಗಳು ಪಡಿತರ ವಿತರಿಸುವ ಕೆಲಸಕ್ಕೆ ಮುಂದಾಗಿದೆ. ಆರೋಗ್ಯಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ಹರಡದಂತೆ ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಬಹುತೇಕ ಕಡೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು. ರೈತರು ಯುಗಾದಿ ಹಬ್ಬದ ಸಮಯದಲ್ಲಿ ಕುರಿ, ಕೋಳಿ ಮತ್ತು ಮೇಕೆಗಳನ್ನು ಮಾರಾಟ ಮಾಡಿ ಜೀವನ ನಡೆಸಲು ಹಣ ಗಳಿಸುತ್ತಿದ್ದರು. ಆದರೆ ಕೊರೊನ ವ್ಯಾಪಾರ ಸ್ಥಗಿತಗೊಂಡಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ಹಣವಿಲ್ಲದೆ ತೊಂದರೆ ಅನುಭವಿಸುತ್ತಿವೆ.ಇವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡ ಎ. ಲೋಕೇಶ್ ಮಾತನಾಡಿ ಕೈಗಾರಿಕೆ, ಗಾರ್ಮೆಂಟ್ಸ್ ಕಾರ್ಮಿಕರು ಸಾವಿರಾರು ಮಂದಿ ಒಂದೇ ಕಡೆ ದುಡಿಯುತ್ತಿದ್ದಾರೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಮಿಕರಿಗೂ ವೇತನ ಸಹಿತ ರಜೆಯನ್ನು ನೀಡಬೇಕು. ಪ್ರತಿಯೊಬ್ಬ ಕಾರ್ಮಿಕರಿಗೆ ಮಾಸ್ಕ್ ನೀಡಬೇಕು. ಸ್ಯಾನಿಟೈಜ್ ಕೊಟ್ಟು ರೋಗ ಹರಡದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ಕೊರೊನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಇದೆ. ಸಂಕಷ್ಟ ಎದುರಿಸುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಮಾತನಾಡಿ, ಕೊರೋನ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಯುವಕರು ಕೆಲಸವಿಲ್ಲದೆ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಇವರಿಗೆ ನೆರವಾಗುವ ಸಂಬಂಧ ಯಾವುದೇ ಪರಿಹಾರೋಪಾಯಗಳನ್ನು ಕಂಡುಕೊಂಡಿಲ್ಲ ಎಂದು ತಿಳಿಸಿದರು.
ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಈ.ಶಿವಣ್ಣ, ಸಿಪಿಎಂ ಮುಖಂಡ ಸೈಯದ್ ಮುಜೀಬ್, ರಂಗಧಾಮಯ್ಯ, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮೊದಲಾದವರು ಉಪಸ್ಥಿತರಿದ್ದರು.