Thursday, July 18, 2024
Google search engine
Homeಜನಮನಕೊರೊನಾ ನಿರ್ವಹಣೆ: ತುಮಕೂರಿನ ಆಸ್ಪತ್ರೆಗಳು, ಪೊಲೀಸರು ಒಂದು ಒಳನೋಟ...

ಕೊರೊನಾ ನಿರ್ವಹಣೆ: ತುಮಕೂರಿನ ಆಸ್ಪತ್ರೆಗಳು, ಪೊಲೀಸರು ಒಂದು ಒಳನೋಟ…

ಡಾ.ಜಿ.ಅಚ್ಯುತರಾವ್
ಜನಾಭಿವೃದ್ಧಿ ಪರಿಣಿತರು,ಸರ್ಕಾರದ ಸಾಮಾಜಿಕ ಬದ್ಧತಾ ಕಾರ್ಯಕ್ರಮಗಳ ಸಲಹೆಗಾರರು
ನಿರೂಪಣೆ: ತುರುವೇಕೆರೆ ಪ್ರಸಾದ್


ಕರೋನಾ ವೈರಸ್ ಸೊಂಕಿನ ಭೀತಿಯ ಸಂಕಷ್ಟದ ಸಮಯದಲ್ಲಿ ನಾನು ನಾಡಿನಾದ್ಯಂತ ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಹಲವು ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಂಚರಿಸಿದ್ದೇನೆ.

ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಮತ್ತು ಕುಂದುಕೊರೆತೆಗಳ ಸೂಕ್ಷ್ಮ ಅಧ್ಯಯನ ನಡೆಸಿದ್ದೇನೆ.

ನನ್ನ ಅನುಭವ ಹಾಗೂ ನಾನು ಕಂಡುಕೊಂಡು ಕೆಲವು ವಾಸ್ತವಾಂಶಗಳನ್ನು ಸರ್ಕಾರ, ಜನಪ್ರತಿನಿಧಿಗಳು ಹಾಗೂ ನಾಗರಿಕರಾದ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ರೆಡ್‍ಕ್ರಾಸ್ ಸಂಸ್ಥೆ ಸರ್ಕಾರ ಹಾಗೂ ಹಾಲು ಒಕ್ಕೂಟ ನೀಡುತ್ತಿದ್ದ ಹಾಲನ್ನು ಸುಮಾರು 1200 ಬಡವರು,ಕಡುಬಡವರು ಮತ್ತು ನಿರಾಶ್ರಿತರಿಗೆ ತಲುಪಿಸುವ ಗುರುತರವಾದ ಜವಾಬ್ಧಾರಿ ವಹಿಸಿತ್ತು.

ಇದನ್ನು ನಾವು ಸಮರ್ಥವಾಗಿ ನಿರ್ವಹಿಸಿದ್ದೇವೆ. ಹಾಲು ವಿತರಣೆಯನ್ನು ನಾವು ಒಂದು ನೆವವಾಗಿಸಿಕೊಂಡು ಜನರಲ್ಲಿದ್ದ ಕೊರೊನಾ ಕುರಿತ ಆತಂಕ ಹಾಗೂ ತಲ್ಲಣಗಳನ್ನು ದೂರ ಮಾಡಲು ಪ್ರಯತ್ನಿಸಿದ್ದೇವೆ.

ಲಾಕ್‍ಡೌನ್ ಪ್ರಾರಂಭದ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕಗಳಿತ್ತು. ಅವಶ್ಯ ವಸ್ತುಗಳ ಕೊರತೆಯಿಂದ ಎಲ್ಲಿ ಅರಾಜಕತೆ ನಿರ್ಮಾಣವಾಗುತ್ತದೋ ಎಂಬ ಗಾಬರಿಯಿತ್ತು.

ನಾವು ಹಾಲು ವಿತರಿಸುವ ನೆಪದಲ್ಲಿ ಪ್ರತಿದಿನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾರಂಭಿಸಿದೆವು, ಅವರಿಗೆ ಸಾಂತ್ವನ ಹೇಳುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದೆವು.

ಇದರ ಪರಿಣಾಮವಾಗಿ ಅವರಲ್ಲಿದ್ದ ಆತಂಕ, ಗೊಂದಲಗಳು ಮಾಯವಾಗಿ ಸಾಮಾಜಿಕ ಸಮಾನತೆ, ಪ್ರಬುದ್ಧತೆ ಹಾಗೂ ತಮ್ಮ ಕಷ್ಟ ಮರೆತು ಇತರರಿಗೆ ಸಹಾಯ ಮಾಡುವ ಅಂತಃಕರಣ, ತಮಗೆ ತಾವೇ ಸಹಾಯಮಾಡಿಕೊಳ್ಳುವ ಪ್ರವೃತ್ತಿ ಮೂಡಲಾರಂಭಿಸಿತು.

ಜನ ತಾವೇ ಸ್ವಯಂ ಸೇವಕರಾಗಿ ತಮಗಿಂತ ಕಷ್ಟದಲ್ಲಿರುವವರಿಗೆ ಸ್ವಯಂಪ್ರೇರಣೆಯಿಂದ ಸಹಾಯ ಮಾಡಲಾರಂಭಿಸಿದರು.
ಜನರ ಈ ಸಹಭಾಗಿತ್ವವನ್ನೇ ನಾವು ಸಾಮಾಜಿಕ ಕುಂದುಕೊರತೆಗಳನ್ನು ಬಗೆಹರಿಸಲೂ ಬಳಸಿಕೊಂಡೆವು.

ಕರೋನ ವಿರುದ್ಧ ಹೋರಾಟದಲ್ಲಿ ನೈರ್ಮಲ್ಯ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ನಾವು ಹಾಲು ಹಂಚುತ್ತಿದ್ದ ಪ್ರದೇಶಗಳಲ್ಲಿ ನಡೆಯುತ್ತಿದ್ದ ರೇಶನ್ ವಿತರಣೆ, ಅಲ್ಲಿನ ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಸಾಮಾಜಿಕ ಸ್ಥಿತಿಗತಿ ಮೊದಲಾದವುಗಳ ಕುರಿತು ಅವರಲ್ಲಿ ಜಾಗೃತಿ ಮೂಡಿಸಿದೆವು,

ತತ್ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರೇ ತಮ್ಮ ತಮ್ಮ ಪ್ರದೇಶಗಳ ಕೊಂದುಕೊರತೆಗಳನ್ನು ನಿವಾರಿಸಿಕೊಳ್ಳುವತ್ತ ಗಮನ ಹರಿಸಿದರು. ಸಾಮಾಜಿಕ ಅಭಿವೃದ್ಧಿಯ ಪರಿಕಲ್ಪನೆ ಜನರಲ್ಲೇ ಮೂಡಲಾರಂಭಿಸಿತು.

ಇಂತಹ ಕ್ರಿಯೆ ಮತ್ತು ಪ್ರತಿಕ್ರಿಯೆಯ ಪರಿಣಾಮವಾಗಿ ನಮ್ಮ ಜವಾಬ್ಧಾರಿಯೂ ಸಹ ಹೆಚ್ಚಾಗುತ್ತಾ ಹೋಯಿತು. ಜನ ಮತ್ತು ವಿತರಣಾ ವ್ಯವಸ್ಥೆಯ ಮಧ್ಯೆ ನಾವು ಕೊಂಡಿಯಾಗಿ ಕೆಲಸ ಮಾಡಿದೆವು.

ಇಂತಹ ಸಮುದಾಯ ಅಭಿವೃದ್ಧಿ ಕಾರ್ಯಗಳಿಂದ ಸೃಷ್ಟಿಯಾಗುವ ಸಾಮಾಜಿಕ ಬಂಡವಾಳ ಅತ್ಯಂತ ಮೌಲ್ಯಯುತವಾದದ್ದು ಎಂಬುದನ್ನು ನಾವು ಮರೆಯಬಾರದು.

ನಾನು, ಮನೀಶ್ವರ ಶಿಕ್ಷಣ ಟ್ರಸ್ಟ್ ನ ಮಹಾಪೋಷಕರಾದ ಶಿವಪ್ಪ, ಡಾ.ಶರತ್, ಗಿರೀಶ್, ಮೆಂಟರ್ ಗೋಪಿಕೃಷ್ಣ ಹಾಗೂ ಶೈಕ್ಷಣಿಕ ನಿರ್ದೇಶಕಿ ಡಾ.ಶೀಲಾ ಖರೆ ಇವರೆಲ್ಲಾ ಒಂದು ತಂಡವಾಗಿ ಸಂಚಾರಿ ರೇಡಿಯೋ ಕೇಂದ್ರದೊಂದಿಗೆ ಹಳ್ಳಿಗಳಿಗೆ ಹೋಗುತ್ತಿದ್ದೇವೆ. ಹಾಡುಗಳು, ಲಾವಣಿಗಳು, ಪ್ರಕಟಣೆಗಳೊಂದಿಗೆ ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ.

ಊರ ಮುಖಂಡರು, ಯುವಕರು, ಗೃಹಿಣಿಯರು, ಆಟೋ ಚಾಲಕರು, ಕೂಲಿ ಕಾರ್ಮಿಕರು,ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ರೇಡಿಯೋ ಮೂಲಕ ತಮ್ಮ ಅಭಿಪ್ರಾಯ, ಕಷ್ಟಕಾರ್ಪಣ್ಯವನ್ನು ಹಂಚಿಕೊಳ್ಳುತ್ತಾರೆ. ಕೊರೊನಾ ಅಲ್ಲದೆ ಇತರೆ ಕಾಯಿಲೆಗಳಿಂದ ನರಳುವವರಿಗೆ, ಔಷಧೋಪಚಾರ ಬೇಕಾಗಿರುವವರಿಗೆ ಸಲಹೆ,ಉಪಚಾರ, ಮಾರ್ಗದರ್ಶನ,ಸಹಾಯಹಸ್ತವನ್ನು ಡಾ.ಶರತ್ ತಂಡ ನೀಡುತ್ತದೆ.

ಇದೇ ವೇಳೆ ಹಳ್ಳಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ಪಾಳ್ಯಗಳಲ್ಲಿ ವಾಸಿಸುವವರು, ಬುಡಕಟ್ಟು ಜನಾಂಗದವರು,ಅಲೆಮಾರಿಗಳು, ವಲಸೆ ಕಾರ್ಮಿಕರು ಹೀಗೆ ಜನಜೀವನದ ಒಂದು ಸಮೀಕ್ಷೆಯೂ ಸಮಾನಾಂತರವಾಗಿ ನಡೆಯುತ್ತದೆ. ಸಂಜೆ ವೇಳೆಗೆ ಒಂದು ಹಳ್ಳಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ‘ ಅರಳೀಕಟ್ಟೆ’ ಮಾದರಿಯಲ್ಲಿ ಒಂದು ಚಿಕ್ಕ ಸಂವಾದ ಏರ್ಪಡಿಸಲಾಗುತ್ತದೆ.

ಅಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹಳ್ಳಿಯ ಬಡಜನರ ಸಮಸ್ಯೆಗಳ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಊರಿನ ರಾಜಕೀಯ ವ್ಯಕ್ತಿಗಳು, ಮುಖಂಡರೊಂದಿಗೆ ಚರ್ಚೆ ನಡೆಯುತ್ತದೆ. ಇದೆಲ್ಲದರ ಫಲಶೃತಿಯಾಗಿ ಸುತ್ತ ನಾಲ್ಕೈದು ಹಳ್ಳಿಗಳ ಒಂದು ಹೊಸ ಯುವತಂಡವೇ ಕೊರೋನಾ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತಿವೆ.

ಇನ್ನು ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಒಂದಿಷ್ಟು ಅನುಭವಗಳನ್ನು ನಾನು ನಿಮ್ಮ ಗಮನಕ್ಕೆ ತರಲೇಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರ ಬಡವರಿಗೆ, ಕಡುಬಡವರಿಗೆ ಅಗತ್ಯಕ್ಕೆ ಮೀರಿ ಸಹಾಯ ಮಾಡಿದೆ.

ತನ್ನ ಸಂಗ್ರಹದಲ್ಲಿದ್ದ ಸಾಕಷ್ಟು ಆಹಾರಧಾನ್ಯಗಳನ್ನು ಜನರಿಗೆ ವಿತರಿಸಿದೆ. ಸರ್ಕಾರದ ಬಳಿ ಇನ್ನು ಕೇವಲ 7-8 ತಿಂಗಳಿಗಾಗುವಷ್ಟು ಆಹಾರ ಧಾನ್ಯ ಇರಬಹುದು.

ಕೃಷಿ ಚಟುವಟಿಕೆಗಳೂ ಸ್ಥಬ್ಧಗೊಂಡಿರುವ ಈ ಹೊತ್ತಿನಲ್ಲಿ ಮುಂದಿನ ಪರ್ಯಾಯ ಏನು ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ. ಇದು ಕೇವಲ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ, ಇದು ಜಾಗತಿಕ ಸಮಸ್ಯೆ. ಯಾವ ಆಹಾರ ಧಾನ್ಯವನ್ನೂ ಅಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ.

ನಮಗೆ ಬೇಕಾದ ಪ್ರಮಾಣದ ಆಹಾರ ಧಾನ್ಯಗಳನ್ನು ನಾವೇ ಬೆಳೆಯಬೇಕಿದೆ.ಮುಂಗಾರು ಪ್ರಾರಂಭವಾಗಿದೆ, ಅಲಸಂಡೆ, ಹೆಸರುಕಾಳು ಬೆಳೆಯಲು ರೈತರು ಉತ್ಸುಕರಾಗಿದ್ದಾರೆ. ಬೀಜ, ಗೊಬ್ಬರ ಇದೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ ದರ ನಿಗಧಿಮಾಡಿಲ್ಲ ಎಂದು ರೈತರನ್ನು ವಾಪಸ್ ಕಳಿಸಲಾಗುತ್ತಿದೆ.

ಗೊಬ್ಬರದ ದಾಸ್ತಾನನ್ನೂ ಸಹ ಅಧಿಕಾರಿಗಳು ಧೃಡೀಕರಿಸುತ್ತಿಲ್ಲ. ಉತ್ಪಾದಕ ಚಟುವಟಿಕೆಗಳು ಕುಂಠಿತವಾದರೆ ರೈತರ ಆತ್ಮವಿಶ್ವಾಸ ಮತ್ತು ರೋಗನಿರೋಧಕ ಶಕ್ತಿ ಎರಡೂ ಕುಂಠಿತವಾಗುತ್ತದೆ ಎಂಬುದನ್ನು ನಾವು ಮರೆಯಬಾರದು
ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆ ಸಾಮಾಜಿಕ ಅಂತರದ ಕಲ್ಪನೆಯನ್ನು ತೀವ್ರವಾಗಿ ಹೇರಲಾಗದು.

ಅದು ಅಷ್ಟು ಕಾರ್ಯಸಾಧುವಲ್ಲ. ಕೃಷಿಕರ ಭೂಮಿ, ತೋಟಗಳಲ್ಲಿ ಕೊರೊನಾ ವೈರಸ್ ಇಲ್ಲ. ಮಧ್ಯಮವರ್ಗ ಮತ್ತು ಮೇಲ್ವರ್ಗಗಳ ಜನರು ಒಂಟಿಯಾಗಿ ಬದುಕುವ ಪ್ರವೃತ್ತಿ ಹೊಂದಿದ್ದಾರೆ.ಆದರೆ ಕೃಷಿಕರು ಭೌತಿಕವಾಗಿ ಹಾಗೂ ಮಾನಸಿಕವಾಗಿ ಪರಸ್ಪರ ಅವಲಂಭಿಗಳಾಗೇ ಬದುಕುತ್ತಾರೆ.ಅದೇ ಅವರ ಜೀವನ ಶೈಲಿ, ಹೀಗಾಗಿ ಸಾಮಾಜಿಕ ಅಂತರ ಎಂಬುದೇ ಒಂದು ಗುಮ್ಮ ಎನ್ನುವಂತಾದರೆ ಅವರು ಕೃಷಿ ಚಟುವಟಿಕೆಗಳಿಂದ ದೂರವಿರುವ ಅಪಾಯವಿದೆ. ಇದರಿಂದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ. ಅವರಲ್ಲೇ ಕರೋನ ಬಗ್ಗೆ ಜಾಗೃತಿ ಮೂಡಿಸಿ ತಮ್ಮನ್ನು ತಾವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿ ಬರುವಂತೆ ಮಾಡಬೇಕಿದೆ.

ಇಂತಹ ಜಾಗೃತಿಯನ್ನು ಕೇವಲ ಪೋಲೀಸ್ ಇಲಾಖೆ ಅಥವಾ ಕಂದಾಯ ಇಲಾಖೆ ಮಾಡಲಾಗುವುದಿಲ್ಲ. ಅದು ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಖಾತರಿಯೂ ಇಲ್ಲ. ಹಾಗಾಗಿ ನೈರ್ಮಲ್ಯತೆ ಮತ್ತು ರೋಗ ತಡೆಗಟ್ಟುವ ವಿಷಯದಲ್ಲಿ ಸರ್ಕಾರ ಮತ್ತು ಜನರು ಸ್ಥಳೀಯ ಗ್ರಾಮ ಪಂಚಾಯಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಗ್ರಾಮಪಂಚಾಯಿತಿಗಳು ಈಗ ಸರ್ಕಾರ ಹೇಳಿದ್ದಷ್ಟನ್ನೇ ಮಾಡುವ ಕೀಲುಬೊಂಬೆಗಳಾಗಿವೆ. ಈ ವ್ಯವಸ್ಥೆ ಹೋಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರವೇ ರಚಿಸಿರುವ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿ ಈ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು. ಸರ್ಕಾರ ಇದಕ್ಕಾಗಿ ಪ್ರತಿವರ್ಷ ಕೊಡುವ ರೂ. 10ಸಾವಿರ ಅನುದಾನ ಮತ್ತು ಇತರೆ ಸ್ಥಳೀಯ ಸಂಪನ್ಮೂಲಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು.

ಹಾಗೆಯೇ ಇಂತಹ ರಚನಾತ್ಮಕ ಕಾರ್ಯದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಜನರ ಸಶಕ್ತೀಕರಣ ಮಾಡುವ ಜವಾಬ್ಧಾರಿ ಸರ್ಕಾರದ ಮೇಲಿದೆ.

ವಿಕೋಪದ ಸಂದರ್ಭದಲ್ಲೂ ಜನಾಭಿವೃದ್ಧಿಯ ಕಡೆ ಗಮನಹರಿಸದಿದ್ದರೆ ಮತ್ತೆ ಯಾವಾಗ ಇಂತಹ ಕೆಲಸ ಮಾಡಲು ಸಾಧ್ಯ? ಹಳ್ಳಿಗಳಲ್ಲಿ ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ಬೆಲೆಗೆ ಮಾರಲಾಗುತ್ತಿದೆ.

ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಗಳನ್ನು ಪ್ರತಿ ಕಿರಾಣಿ ಅಂಗಡಿಯ ಮುಂಭಾಗ ಅಂಟಿಸಬೇಕು.

ಸಮುದಾಯದ ಆರೋಗ್ಯ ನಿರ್ವಹಣೆ ಜವಾಬ್ಧಾರಿ 30-35 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲಿದೆ. ಆದರೆ ಎಲ್ಲದಕ್ಕೂ ಇವರು ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳತ್ತ ಕೈ ತೋರಿಸಿ ತಮ್ಮ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಈ ತಾಲ್ಲೂಕು ಆಸ್ಪತ್ರೆಗಳದ್ದು ಇನ್‍ಸ್ಟಿಟ್ಯೂಶನಲ್ ಸರ್ವೀಸ್, ಅವರು ತಮ್ಮಲ್ಲಿ ದಾಖಲಾಗುವ ಪ್ರಕರಣಗಳನ್ನು ನಿರ್ವಹಿಸಲೇ ಸಾಕಷ್ಟು ಹೈರಾಣಾಗುವ ಪರಿಸ್ಥಿತಿ ಇದೆ.

ಸುಮಾರು ಇನ್ನೂ ಎರಡು ವರ್ಷಗಳ ಕಾಲ ಕರೋನಾ ವೈರಸ್ ಹೆಚ್ಚು ಅಪಾಯಕಾರಿಯಾಗಿಯೇ ಇರುವ ಸಂಭವ ಇರುತ್ತದೆ. ಹಾಗಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ವೈರಸ್, ಬ್ಯಾಕ್ಟೀರಿಯಾ ಮೊದಲಾದವುಗಳನ್ನು ಎದುರಿಸಲು ಬೇಕಾದ ಸಿದ್ಧತೆಗಳು ಇರಬೇಕು. ಆದರೆ ಈಗ ಪಿಎಚ್‍ಸಿಗಳ ಸ್ಥಿತಿಗತಿ ತುಂಬಾ ಶೋಚನೀಯವಾಗಿದೆ. ಒಬ್ಬ ಗರ್ಭಿಣಿಗೆ ಸಾಮಾನ್ಯ ತಪಾಸಣೆ ನಡೆಸಲೂ ಅವರು ಆಸ್ಪತ್ರೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಈ ರೀತಿ ಜನರಿಗೆ ಸುರಕ್ಷತೆಯೇ ಇಲ್ಲವೆಂದ ಮೇಲೆ ಸರ್ಕಾರದ ಜನಾಭಿವೃದ್ದಿ ಆಶಯಕ್ಕೆ ಯಾವ ಅರ್ಥವಿದೆ?

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ ಬಂದು 10 ವರ್ಷಕ್ಕೂ ಹೆಚ್ಚು ಸಮಯವಾಯ್ತು. ಕೊರೊನಾದಂತಹ ವೈರಸ್ ಸೊಂಕಿನ ಈ ಪರ್ವಕಾಲದಲ್ಲಿ ವಿಪತ್ತು ನಿರ್ವಹಣೆಯ ಕಾರ್ಯಕ್ರಮಗಳನ್ನು ಪಿಎಚ್‍ಸಿಗಳಲ್ಲಿ ಅನುಷ್ಠಾನಗೊಳಿಸಬೇಕು. ಈಗಿರುವ ಪರಿಸ್ಥಿತಿಯಲ್ಲಿ ಅದೆಲ್ಲಿ ಸಾಧ್ಯ?


ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಸೇರಿ ಕನಿಷ್ಟ 11 ಮಂದಿ ಸಿಬ್ಬಂದಿ ಇರಬೇಕು. ಬಹುತೇಕ ಪಿಎಚ್‍ಸಿಗಳಲ್ಲಿ ವೈದ್ಯರೇ ಇಲ್ಲ, ಎಎನ್‍ಎಮ್‍ಗಳು, ದಾದಿಯರು, ಫಾರ್ಮಾಸಿಸ್ಟ್, ಪೆಥಾಲಜಿಸ್ಟ್ ಯಾರೂ ಇಲ್ಲ. ಇದೆಲ್ಲಾ ಸರಿ ಹೋಗುವುದು ಯಾವಾಗ? ನಮ್ಮ ಗ್ರಾಮೀಣ ಜನರಿಗೆ ಆರೋಗ್ಯ ಸುರಕ್ಷತೆ ಸಿಗುವುದು ಯಾವಾಗ?


ಇನ್ನು ಪೋಲೀಸರು ಲಾಕ್‍ಡೌನ್ ಸಮಯದಲ್ಲಿ ಅತ್ಯಂತ ಶ್ರಮಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೆಲವು ಪೋಲೀಸ್ ಸಿಬ್ಬಂದಿ ಹಳ್ಳಿ ಜನರಿಗೆ ಅನಗತ್ಯ ಕಿರುಕುಳ ಕೊಡುತ್ತಿದ್ದಾರೆ. ಅವರ ಕಷ್ಟ ಸುಖ ವಿಚಾರಿಸದೆ ಬೈಗಳು ಅಥವಾ ಲಾಠಿ ಪ್ರಯೋಗ ಮಾಡುತ್ತಿದ್ದಾರೆ.

ಮಾತ್ರೆ ತರಲು ಪಟ್ಟಣಕ್ಕೆ ಬರುವ ಗ್ರಾಮಸ್ಥರಿಗೆ ಹೊಸ ಪ್ರಿಸ್ಕ್ರಿಪ್ಶನ್ ತೋರಿಸಲು ಒತ್ತಾಯಿಸಲಾಗುತ್ತಿದೆ. ಬಿ,ಪಿ, ಶುಗರ್ ಕಾಯಿಲೆಗಳಿಗೆ ಯಾರು ಪ್ರತಿದಿನ ಪ್ರಿಸ್ಕ್ರಿಪ್ಶನ್ ಬರೆಸುತ್ತಾರೆ? ದ್ವಿಚಕ್ರವಾಹನ ಕಿತ್ತು ಇಟ್ಟುಕೊಂಡು ಆರೋಗ್ಯ ಸಮಸ್ಯೆ ಇರುವವರನ್ನು ಬೀದಿ ಬೀದಿಗಳಲ್ಲಿ ನಡೆಸಲಾಗುತ್ತಿದೆ. ಇದು ಅತಿರೇಕದ ನಡವಳಿಕೆ ಹಾಗೂ ಅತ್ಯಂತ ಅಮಾನವೀಯವಾದುದು.

ವಿಪತ್ತಿನ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅವಕಾಶ ಕಾನೂನಿನಲ್ಲಿದೆ. ಪೋಲೀಸ್ ಇಲಾಖೆಯ ಮೇಲೆ ತೀವ್ರ ಒತ್ತಡ ಇದ್ದರೆ ರೆಡ್‍ಕ್ರಾಸ್ ಯುವ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು, ಎನ್‍ಸಿಸಿ ಪಡೆ, ರೋಟರಿ, ಲಯನ್ಸ್ ಇತರೆ ಸ್ವಯಂ ಸೇವಾಸಂಸ್ಥೆಯ ಸಹಾಯ ಪಡೆಮರೆಯಬಾರದು.

ಕೊರೊನಾ ಭೀತಿಯ ಸಮಯದಲ್ಲಿ ನಾವು ಜನರನ್ನು ಗೊಂದಲಕ್ಕೆ, ಆತಂಕಕ್ಕೆ ತಳ್ಳುವ ಸಂದರ್ಭ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು.


ನಂ.6, ಪಂಚವಟಿ
13ನೇ ವಾರ್ಡ್, ಗಾಂಧಿನಗರ
ತುರುವೇಕೆರೆ-572227
ತುಮಕೂರು ಜಿಲ್ಲೆ
ಮೊಬೈಲ್:9448677560

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?