ಜನಮನ

ಕೊರೊನಾ: ಪತ್ರಕರ್ತರ ಕಡೆಗಣನೆ ಎಷ್ಟು ಸರಿ?

ರಾಘವೇಂದ್ರ, ಪಾವಗಡ


ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಜನತೆಯನ್ನು ತಲ್ಲಣಗೊಳಿಸಿದೆ. ಕೋವಿಡ್ 19 ಎಂಬ ಹೆಸರಿನ ವಿಧ್ವಂಸಕ ಸೋಂಕು ಮಾಧ್ಯಮ ಕ್ಷೇತ್ರಕ್ಕೂ ಮುಳುವಾಗಿ ಪರಿಣಮಿಸಿದೆ.

ಲಾಕ್ ಡೌನ್ ನಿಂದಾಗಿ ಪತ್ರಕರ್ತರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಗರ, ಗ್ರಾಮೀಣ ಸೇರಿದಂತೆ ಎಲ್ಲ ಪ್ರದೇಶದ ಮಾಧ್ಯಮ ಸಿಬ್ಬಂದಿ ಆರ್ಥಿಕ ಸಂಕಷ್ಠಕ್ಕೊಳಗಾಗಿದ್ದಾರೆ.

ಜಾಹಿರಾತುಗಳಿಲ್ಲದೆ ಕಂಪನಿಗಳು ಅಧೋಗತಿಯತ್ತ ಸಾಗುತ್ತಿವೆ. ವೇತನ ಕೊಡಲೂ ಶಕ್ತಿಯಿಲ್ಲದೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕೆಲವು ಸಣ್ಣಪುಟ್ಟ ಕಂಪನಿಗಳ ಮಾಲೀಕರು ಕಂಪನಿ ಉಳಿಸಿಕೊಳ್ಳಲು ಹೊಸ ಹಾದಿಗಳನ್ನು ಹುಡುಕುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹಸಿದ ಪತ್ರಕರ್ತರ ನೋವು ಮಾಲೀಕರಿಗೆ ಕಾಣುವುದಾದರೂ ಹೇಗೆ?

ಇಂತಹ ಕ್ಲಿಷ್ಠ, ಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಪತ್ರಕರ್ತರ ಕಷ್ಟ ಕೇಳುವವರಿಲ್ಲದಂತಾಗಿದೆ. ಕೊರೊನಾ ಅಟ್ಟಹಾಸದ ನಡುವೆಯೂ ಜೀವವನ್ನೂ ಲೆಕ್ಕಿಸದೆ ಸುದ್ಧಿ ಸಂಗ್ರಹಿಸಿ ಹಸಿವೆಯಿಂದಲೇ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ.

ಪಕ್ಷಗಳ ಪ್ರಚಾರ, ಕಾರ್ಯಕ್ರಮಗಳು, ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು, ಸೂಚನೆಗಳು, ಸಾಧನೆ, ಇತ್ಯಾದಿ ಗಳ ಪ್ರಚಾರಕ್ಕೆ ಮಾದ್ಯಮಗಳೇ ಬೇಕು. ಮಾಧ್ಯಮಗಳು, ಪತ್ರಕರ್ತರ ಕಷ್ಟಗಳ ಬಗ್ಗೆ ಮಾತ್ರ ಇವರುಗಳು ಚಕಾರ ಎತ್ತುತ್ತಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯರಿಂದ ಪ್ರಧಾನಮಂತ್ರಿ, ರಾಷ್ಟ್ರಪತಿಗಳು ಸಮಾಜಕ್ಕೆ ತಮ್ಮ ಸಂದೇಶ, ಕಾರ್ಯ ವೈಖರಿ, ಸಾಧನೆ ತಿಳಿಸಲು ಮಾದ್ಯಮವನ್ನು ಅವಲಂಬಿಸಿದ್ದಾರೆ. ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಪತ್ರಿಕೋದ್ಯಮ, ವರದಿಗಾರರ ಭದ್ರತೆಯ ಪ್ರಶ್ನೆಗಳನ್ನು ಇಟ್ಟುಕೊಂಡು ಹೊಸ ನೀತಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸುವಂತೆ ಇವರುಗಳು ದನಿ ಎತ್ತಬೇಕಾಗಿದೆ.

ಯಾಕ್ರಿ ನನ್ನ ಹೆಸರು ಬಿಟ್ಟಿದ್ದೀರಿ? ನಾನಿರುವ ಫೋಟೋ ಏಕೆ ಹಾಕಿಲ್ಲ? ಸುದ್ದಿ ತುಂಬಾ ಚಿಕ್ಕದಾಗಿ ಪ್ರಕಟವಾಗಿದೆ. ಕಾರ್ಯಕ್ರಮಕ್ಕೆ ತಡವಾಗಿ ಬಂದಿರೀ. ಸುದ್ದಿ ಮುಖ ಪುಟದಲ್ಲಿ ಪ್ರಕಟವಾಗಿಲ್ಲ. ನಿಮಗೆ ಸುದ್ದಿ ಮಾಡೋಕೆ ಬರುತ್ತಾ? ನೀವು ತಾರತಮ್ಯ ಮಾಡುತ್ತೀರಿ? ಆ ಜನಾಂಗದ, ಈ ಪಕ್ಷದ ಸುದ್ದಿ ಹೆಚ್ಚು ಹಾಕುತ್ತೀರಿ…… ಇತ್ಯಾದಿಯಾಗಿ ಪ್ರಶ್ನಿಸುತ್ತಿದ್ದವರು ಎಲ್ಲರೂ ಇಂದು ಕೊರೊನಾ ಭಯದಿಂದ ಮನೆ ಸೇರಿದ್ದಾರೆ. ಆದರೆ ಪತ್ರರ್ತರು ಸುದ್ದಿಯೆಂಬ ಬೇಟೆ ಹರಸಿ ಓಡಾಡುತ್ತಿದ್ದಾರೆ.

ವ್ಯಕ್ತಿಯ ಸಾಧನೆ, ಸಕಾರಾತ್ಮಕ ಸುದ್ದಿ ಪ್ರಕಟಿಸಿದಾಗ ಹೊಗಳಿ ಅಟ್ಟಕ್ಕೇರಿಸುವವರು, ನಕಾರಾತ್ಮಕ ಅಥವಾ ಅವರ ತಪ್ಪುಗಳನ್ನು ಸಮಾಜದ ಮುಂದೆ ಬೆತ್ತಲಾಗಿಸಿದಾಗ ನಿನ್ನ ನೋಡಿಕೊಳ್ಳುತ್ತೇನೆ! ನನ್ನ ಬಗ್ಗೆಯೇ ಬರೆದಿದ್ದೀಯಾ ಇರಲಿ ನೋಡಿಕೊಳ್ತೀನಿ ಎಂಬಿತ್ಯಾದಿಯಾಗಿ ಸೇರಿಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ.

ವ್ಯಕ್ತಿಯ ಸಾಧನೆ, ಉತ್ತಮ ಕೆಲಸವನ್ನು ಹೊಗಳುವುದರಿಂದಾಗಲಿ, ಅಧಿಕಾರಿಗಳ ಭ್ರಷ್ಟಾಚಾರ, ರಾಜಕಾರಣಿಗಳ ದೌರ್ಜನ್ಯ, ಬೇಜವಾಬ್ಧಾರಿ, ಅವ್ಯವಹಾರ ಇತ್ಯಾದಿ ತಪ್ಪುಗಳ ಬಗ್ಗೆ ಸುದ್ದಿ ಪ್ರಕಟಿಸಿದಾಗ ಪತ್ರಕರ್ತರಿಗೆ ಅವರ ಕುಟುಂಬಕ್ಕೆ ಯಾವುದೇ ಲಾಭವಿಲ್ಲ.

ಉತ್ತಮ ಕೆಲಸದ ಬಗ್ಗೆ ಸಮಾಜಕ್ಕೆ ಮಾದ್ಯಮದ ತಿಳಿಸಿದಾಗ ಇತರರು ಪ್ರೇರೇಪಣೆಗೊಂಡು ಸಮಾಜಮುಖಿ ಕೆಲಸಗಳತ್ತ ತೊಡಗಿಕೊಳ್ಳುತ್ತಾರೆ. ಒಂದು ವರದಿ ಲಕ್ಷಾಂತರ ಮಂದಿಗೆ ಪ್ರೇರಣೆಯಾಗುತ್ತದೆ. ಅವ್ಯವಹಾರ, ಭ್ರಷ್ಟಾಚಾರ, ಸುಲಿಗೆ, ದೌರ್ಜನ್ಯಗಳ ಬಗೆಗಿನ ವರದಿ ತಪ್ಪು ಮಾಡುವವರಿಗೆ ಎಚ್ಚರಿಕೆ ಸಂದೇಶವಾಗಿ ಪರಿಣಮಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಾಯವಾಗುತ್ತದೆ.

ತನಿಖಾ ವರದಿಗಳ ಹಿಂದೆ ಬಿದ್ದು ಅದೆಷ್ಟೊ ವರದಿಗಾರರು ತಮ್ಮ ಕುಟುಂಬಗಳನ್ನು ತಬ್ಬಲಿಯಾಗಿಸಿದ್ದಾರೆ. ವರದಿಗಳಿಗಾಗಿ ಪ್ರಾಣವನ್ನೇ ಬಲಿಕೊಟ್ಟ ವರದಿಗಾರರ ಕುಟುಂಬಗಳಿಗೆ ಸಿಕ್ಕಿರುವುದಾದರೂ ಏನು?

ಕೊರೊನಾ 19 ತುರ್ತು ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿಮೆ ಘೋಷಿಸಲಾಗಿದೆ. ಪೊಲೀಸರಿಗೆ, ಇತರೆ ಇಲಾಖೆ ಅಧಿಕಾರಿಗಳಿಗೆ ವೇತನ ಬರುತ್ತದೆ. ವರದಿಗಾರರಿಗೆ ಯಾವ ಸವಲತ್ತು ಕೊಡಲಾಗಿದೆ?

ಸ್ವತಃ ಪ್ರಧಾನ ಮಂತ್ರಿಗಳು ಮಾದ್ಯಮದ ಕಾರ್ಯ ವೈಖರಿಯನ್ನು, ಕೊರೊನಾ ತಡೆಗಟ್ಟಲು ಅಗತ್ಯವಿರುವ ಮಾರ್ಗಸೂಚಿಯನ್ನು, ವಿಶ್ವದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು, ಸರ್ಕಾರದ ನಿರ್ಧಾರಗಳನ್ನು ಪ್ರಕಟಿಸುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾದ್ಯಮಗಳ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಕೆಲ ಸಚಿವರು, ಮುಖ್ಯಮಂತ್ರಿಗಳು ಮಾದ್ಯಮಗಳ ಕೆಲಸಕ್ಕೆ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಸೂಚನೆ ನೀಡಿದರು. ಅಂದರೆ ಎಲ್ಲರಿಗೂ ಮಾದ್ಯಮಗಳು ಬೇಕು. ವರದಿಗಾರರು ಕೆಲಸ ಮಾಡಬೇಕಷ್ಟೆ.

ವರದಿಗಾರರನ್ನು ನೆಚ್ಚಿಕೊಂಡಿರುವ ಕುಟುಂಬ ಏನಾದರೇನು? ಕೊರೊನಾ ಕಾರ್ಯಚರಣೆಯಲ್ಲಿ ಸೋಂಕು ತಗುಲಿದರೂ ಚಿಕಿತ್ಸೆ ಹೊರತುಪಡಿಸಿ ಯಾವುದೇ ಸೌಲಭ್ಯ ಕೊಡುವುದಾಗಿ ಸರ್ಕಾರ ಘೋಷಿಸಿಲ್ಲ. ಪೌರ ಕಾರ್ಮಿಕರಿಂದ ಅಧಿಕಾರಿಗಳವರೆಗೆ ಮಾಸ್ಕ್, ಸ್ಯಾನಿಟೈಸರ್ ಕೊಡಲಾಗಿದೆ. ಆದರೆ ಸರ್ಕಾರ ಕನಿಷ್ಠ ಸೌಕರ್ಯ ಕೊಡುವ ಭರವಸೆಯನ್ನೂ ಕೊಟ್ಟಿಲ್ಲ.

ಬೇರೆ ಬೇರೆ ಕಾರಣಗಳಿಂದ ಪತ್ರಿಕಾ ಕಂಪನಿಗಳು ನಷ್ಟದಲ್ಲಿವೆ. ಪತ್ರಕರ್ತರನ್ನು ಕೆಲಸದಿಂದ ತೆಗೆಯುತ್ತಿವೆ. ತಾಲ್ಲೂಕು ಮಟ್ಟದ ಅರೆಕಾಲಿಕ ವರದಿಗಾರರ ಸ್ಥಿತಿಯೂ ಕಷ್ಟದಲ್ಲೇ ಇದೆ. ಹೀಗಾಗಿ ಸರ್ಕಾರ ಪತ್ರಕರ್ತರ ಕಲ್ಯಾಣ. ನಿಧಿ ಸ್ಥಾಪನೆ ಮೂಲಕ ಜನಪರ, ವೃತ್ತಿ ಬದ್ಧತೆಯ ಪತ್ರಿಕೋದ್ಯಮ ಬೆಂಬಲಿಸುವ ಅಗತ್ಯವಿದೆ. ಯಂಗ್ ಟ್ಯಾಲೆಂಟ್‌ ಸೆಳೆಯಲು ಇದು ಅಗತ್ಯವೂ ಆಗಿದೆ. ಇಲ್ಲದಿದ್ದರೆ ಪತ್ರಿಕೋದ್ಯಮ ಸೊರಗಿ ಹೋಗುವುದರಲ್ಲಿ ಅನುಮಾನವಿಲ್ಲ.

Comment here