ಕೆ.ಇ.ಸಿದ್ದಯ್ಯ, ಮಹೇಂದ್ರ ಕೃಷ್ಣಮೂರ್ತಿ
ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ. ಶಿರಾ ಮೂಲದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಬೇಕಾಗಿದೆ. ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕೆಂಬ ಒತ್ತಾಯ ಜನಸಾಮಾನ್ಯರ ನಡುವೆ ಕೇಳಿ ಬರುತ್ತಿದೆ.
ತುಮಕೂರಿನಲ್ಲಿ 200ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇಟ್ಟಿದ್ದರೂ ಸಚಿವರು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಕೇವಲ ಅಧಿಕಾರಿಗಳು ಮಾತ್ರ ಸಭೆ ನಡೆಸುತ್ತಿದ್ದಾರೆಯೇ ಹೊರತು ಸಚಿವರು, ಸಂಸದರು, ಆಯಾ ಶಾಸಕರು ಸಭೆ ನಡೆಸಿದ ಬಗ್ಗೆ ಇಲ್ಲಿಯವರೆಗೂ ಬಹಿರಂಗವಾಗಿ ಎಲ್ಲಿಯೂ ವರದಿಯಾಗಿಲ್ಲ.
ಸಭೆಗಳಿಗೆ ಹಾಜರಾಗಿ ಅಧಿಕಾರಿಗಳಲ್ಲಿ ಉತ್ಸಾಹ ಮೂಡಿಸುವ ಕೆಲಸವನ್ನು ಜನಪ್ರತನಿಧಿಗಳು ಮಾಡುತ್ತಿಲ್ಲ ಎಂಬ ಮಾತುಗಳು ಅಧಿಕಾರಿಗಳ ಮಟ್ಟದಲ್ಲೇ ಕೇಳಿ ಬರುತ್ತಿವೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಂದ 63 ವೆಂಟಿಲೇಟರ್ ಗಳಿವೆ. ಅಗತ್ಯ ಬಿದ್ದರೆ ಈ ವೆಂಟಿಲೇಟರ್ ಬಳಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕರೊನಾ ಪೀಡಿತರಾಗಿಯೇ ಪ್ರತ್ಯೇಕವಾಗಿ ಎಷ್ಟು ವೆಂಟಿಲೇಟರ್, ICU ಲಭ್ಯವಿವೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ.
ಈವರೆಗೂ ಜಿಲ್ಲೆಯಲ್ಲಿ ಸೋಂಕಿತರು ಕಂಡುಬಂದಿಲ್ಲ ಎಂದೇ ಹೇಳುತ್ತಿದ್ದ ಆರೋಗ್ಯ ಇಲಾಖೆ ಈಗ ಸರಿಯಾದ ಉತ್ತರ ಜನರಿಗೆ ತಿಳಿಸಬೇಕಾಗಿದೆ. ಒಂದು ವೇಳೆ ಹೆಚ್ಚು ಜನರಿಗೆ ಕಂಡು ಬಂದರೆ ಇಲ್ಲಿಯೇ ಚಿಕಿತ್ಸೆ ನೀಡುವಷ್ಟು ನಮ್ಮ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸನ್ನದ್ಧವಾಗಿವೆಯೇ? ಇಲ್ಲವೇ, ಬೆಂಗಳೂರಿಗೆ ಕಳುಹಿಸಲಾಗುತ್ತದೆಯೇ ಎಂಬ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ ತುಟಿ ಬಿಚ್ಚಿಲ್ಲ. ಇಲ್ಲ, ಈ ಪ್ರಶ್ನೆಯೇ ಅವರ ಮುಂದೆ ಬಂದಿಲ್ಲವೇನೋ? ಈ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕಾಗಿದೆ.
ಮೊದಲ ಒಂದೆರಡು ದಿನಗಳನ್ನು ಬಿಟ್ಟರೆ ಜಿಲ್ಲಾಡಳಿತ ಒಂದು ರೀತಿಯಲ್ಲಿ ದಕ್ಷತೆಯಿಂದಲೇ ಕೆಲಸ ನಿರ್ವಹಿಸುತ್ತಿದೆ. ಸಾಮಾಜಿಕ ಅಂತರ ಕಾದು ಕೊಳ್ಳುವ ನಿಟ್ಟಿನಲ್ಲೂ ಸಮಾಧಾನದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಆದರೆ, ಇನ್ನೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂಬ ಮಾತುಗಳು ತುಮಕೂರು ನಗರ ಹೊರತುಪಡಿಸಿ ಬೇರೆಡೆ ಕೇಳಿಬರುತ್ತಿವೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆರೋಗ್ಯ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ವೈದ್ಯರೊಂದಿಗೆ ಮಾತುಕತೆ ನಡೆಸಿ ಅದನ್ನು ಸಾರ್ವಜನಿಕಗೊಳಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಅಯಾ ಶಾಸಕರು ಈ ಕೆಲಸವನ್ನು ಅಯಾ ಕ್ಷೇತ್ರಗಳಲ್ಲಿ ಮಾಡಬೇಕಾಗಿದೆ. ಉಸ್ತುವಾರಿ ಸಚಿವರನ್ನು ಕಂಡು ಆಯಾ ಕ್ಷೇತ್ರಗಳ ಸ್ಥಿತಿ ಗತಿ, ಸ್ಥಳೀಯ ಆರೋಗ್ಯ ಕ್ಷೇತ್ರ, ಆಸ್ಪತ್ರೆಗಳನ್ನು ಬಲಪಡಿಸುವ ಸಂಬಂಧ ಕೆಲಸ ಮಾಡಬೇಕಾಗಿದೆ.
ಜನರಲ್ಲಿ ಧೈರ್ಯ, ಸಾಮಾಜಿಕ ಅಂತರದ ತಿಳುವಳಿಕೆ, ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳಬೇಕಾದ ಎಚ್ಚರಿಕೆ ಬಗ್ಗೆ ತಿಳಿ ಹೇಳುವುದು, ಮನವಿ ಮಾಡುವುದು ಪ್ರಧಾನಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರುಗಳ ಕೆಲಸವಷ್ಟೇ ಅಲ್ಲ ಎಂಬುದನ್ನು ಎಲ್ಲ ಜನಪ್ರತಿನಿಧಿಗಳು ಅರಿತುಕೊಳ್ಳಬೇಕು. ಶಾಸಕರುಗಳು ತೋರುವ, ಮಾಡುವ ಕೆಲಸಗಳು ಈ ಸಂದಿಗ್ದ ಸ್ಥಿತಿಯಲ್ಲಿ ಪ್ರಮುಖವಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಸಚಿವರು ಜನರ ಗಮನಕ್ಕೆ ಬರುವಂತೆ ಕೆಲಸ ಮಾಡಬೇಕಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಇರುವ ಎರಡು ವೆಂಟಿಲೇಟರ್ ಗಳು ಬೇರೆ ರೋಗಿಗಳನ್ನು ಇಡಲು ಅವಕಾಶವಿದೆ. ಬೇರೆ ಆಸ್ಪತ್ರೆಗಳಲ್ಲೂ ಸಾಮಾನ್ಯ ರೋಗಿಗಳು ಬಂದರೆ ಮಾತ್ರ ಇರಿಸಲು ವೆಂಟಿಲೇಟರ್ ಗಳು ಇವೆ. ವಿಶೇಷವಾಗಿ ಕೊರೊನ ರೋಗಿಗಳನ್ನು ವೆಂಟಿಲೇಟರ್ ಗಳ ಕೊರತೆ ಇದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿ ಕ್ರಮಕೈಗೊಂಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿರುವ ಎಲ್ಲಾ 63 ವೆಂಟಿಲೇಟರ್ ಗಳು 61 ಕೂಡ ಖಾಸಗಿ ನರ್ಸಿಂಗ್ ಹೋಂಗಳಲ್ಲಿಯೇ ಇವೆ. ತುರ್ತು ಸಂದರ್ಭದಲ್ಲಿ ಅವಗಳನ್ನು ರೋಗಿಗಳಿಗಾಗಿ ಬಳಸಿಕೊಳ್ಳಲು ಮುಂದಾಗಬೇಕು. ಇದುವೆರೆಗೆ ಸಿದ್ದಗಂಗಾ ಆಸ್ಪತ್ರೆ ಮತ್ತು ಸಿದ್ದಾರ್ಥ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲವು ಹಾಸಿಗೆಗಳನ್ನು ಮಾತ್ರ ಕೊರೊನ ಸೋಂಕು ಪೀಡಿತರನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಸರಿಯಾದ ಕ್ರಮ. ಆದರೆ ವೆಂಟಿಲೇಟರ್ ಗಳ ಕೊರತೆ ಇದ್ದು, ಹೆಚ್ಚು ವೆಂಟಿಲೇಟರ್ ಗಳನ್ನು ಜಿಲ್ಲಾಸ್ಪತ್ರೆಗೆ ತರಿಸುವ ಸಂಬಂಧ ಚರ್ಚೆಗಳಾಗಬೇಕಾಗಿದೆ.
ಖಾಸಗಿ ನರ್ಸಿಂಗ್ ಹೋಂನಲ್ಲಿ ಕೊರೊನ ಸೋಂಕಿತರನ್ನು ಇಟ್ಟುಕೊಳ್ಳುವುದು ಅಪರೂಪ. ಯಾಕೆಂದರೆ ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡು ನರ್ಸಿಂಗ್ ಹೋಂಗಳು ಅಷ್ಟು ಸುಲಭವಾಗಿ ವೆಂಟಿಲೇಟರ್ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಜೊತೆಗೆ ನರ್ಸಿಂಗ್ ಹೋಂಗಳಲ್ಲಿ ಒಂದು ದಿನ ವೆಂಟಿಲೇಟರ್ ನಲ್ಲಿಡಲು 10 ರಿಂದ 20 ಸಾವಿರ ರೂಪಾಯಿ ನಿಗದಿ ಮಾಡುತ್ತಾರೆ. ಈ ಬಗ್ಗೆಯೂ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.
ತುಮಕೂರು ಜಿಲ್ಲೆಯ ಮೂಲಕ 23 ಜಿಲ್ಲೆಗಳಿಗೆ ಜನರು ಪ್ರಯಾಣಿಸುತ್ತಾರೆ. ಇದು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಮಾತೂ ಇದೆ.. ಜೊತೆಗೆ ತುಮಕೂರು ನಗರದ ಬಹುತೇಕರು ಬೆಂಗಳೂರು ನಗರವನ್ನು ಕೆಲಸಕ್ಕಾಗಿ ಆಶ್ರಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಂಡು ಬಂದಿದ್ದು, ಅಲ್ಲಿನ ಸಂಪರ್ಕ ಹೊಂದಿರುವ ತುಮಕೂರು ನಗರದ ಜನತೆಗೂ ಕೊರೊನ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಿದ್ದ ಜನರು ತುಮಕೂರಿಗೆ ಆಗಮಿಸಿದ್ದಾರೆ ಮತ್ತು ವಿದೇಶಗಳಿಂದಲೂ ತುಮಕೂರಿಗೆ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಎಲ್ಲ ಶಾಸಕರು ಅಧಿಕಾರಿಗಳ ಸಭೆ ಕರೆದು ಸಮನ್ವಯತೆ ಸಾಧಿಸುವಂತಹ ಕೆಲಸ ಮಾಡಬೇಕಿತ್ತು. ಅಂತಹ ಕೆಲಸ ಇದುವರೆಗೂ ನಡೆದಿಲ್ಲ.
ಎಲ್ಲವನ್ನೂ ಅಧಿಕಾರಿಗಳೇ ನಿಭಾಯಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಸ್ಪತ್ರೆಗೆ 10 ಮಂದಿ ಶಂಕಿತ ಕೊರೊನ ವೈರಸ್ ಸೋಂಕಿತರು ದಾಖಲಾಗಿದ್ದು ಅವರ ರಕ್ತ ಮತ್ತು ಕಫಾ ಮಾಧರಿಗಳನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಇನ್ನು ವರದಿ ಬಂದಿಲ್ಲ ಎನ್ನುತ್ತಿದ್ದಾರೆ.
ಜಿಲ್ಲೆಯ ಸರ್ಕಾರಿ, ಖಾಸಗಿ ಆರೋಗ್ಯ ಜಾಲವನ್ನು ಗಟ್ಟಿಯಾಗಿ ಕಟ್ಟುವ ಬಗ್ಗೆ, ಯಾವುದೇ ಸ್ಥಿತಿಯಲ್ಲಿ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ನೀಡುವ ಬಲವನ್ನು ಗಳಿಸಿಕೊಳ್ಳುವ ಬಗ್ಗೆ ಕೆಲಸ ಮಾಡಲು ಎಲ್ಲರೂ ಪಣ ತೊಡಬೇಕಾಗಿದೆ.