ತುಮಕೂರು ಲೈವ್

ಕೊರೋನಾ: ತುಮಕೂರಿನಲ್ಲಿ 83 ಮಂದಿಗೆ ಗೃಹಬಂಧ‌‌ನ-DC

Publicstory. in


ಚಿತ್ರ: Jp

ತುಮಕೂರು: ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಭಯಬೇಡ ಮುಂಜಾಗ್ರತೆ ಇರಲಿ ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ನಿಯಂತ್ರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಿಂದ ಜಿಲ್ಲೆಗೆ 94 ಜನ ಪ್ರಯಾಣ ಬೆಳೆಸಿದ್ದು, ಅವರಲ್ಲಿ ಮನೆಯಲ್ಲಿರಿಸಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ಮರಳಿ ವಿದೇಶಕ್ಕೆ ಪ್ರಯಾಣ ಮಾಡಿರುವವರ ಸಂಖ್ಯೆ 3, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ ಸಂಖ್ಯೆ 8. ಇವರಲ್ಲಿ ಸೋಂಕು ಇಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ 3 ಹಂತದ ತರಬೇತಿ ನೀಡಲಾಗಿದೆ.

ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವಿದೇಶದಿಂದ ಪ್ರಯಾಣ ಬೆಳೆಸಿರುವವರ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ.

ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿಸಲ್ಲಿಸಬೇಕು ಎಂದು ತಿಳಿಸಿದರು.

ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಜನದಟ್ಟಣೆ ಸೇರುವ ಸಂತೆ, ಜಾತ್ರೆ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಬ್, ಕ್ಲಬ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಿ ಪದೇ ಪದೇ ಕಣ್ಣು, ಮೂಗು ಬಾಯಿಗಳನ್ನು ಮುಟ್ಟಿಕೊಳ್ಳಬಾರದು. ನೆಗಡಿ, ಕೆಮ್ಮು ಇರುವ ವ್ಯಕ್ತಿಗಳಿಂದ ದೂರ ಉಳಿಯುವುದು ಸೂಕ್ತ ಎಂದರು.

ಯಾವುದೇ ಒಬ್ಬ ವ್ಯಕ್ತಿ ಕೆಮ್ಮು, ಜ್ವರದಿಂದ ಬಳುತ್ತಿದ್ದರೆ, ಶಂಕಿತ ವ್ಯಕ್ತಿಯೆಂದು ಗುರುತಿಸಿ ಅವರ ರಕ್ತ ಮತ್ತು ಗಂಟಲು ಸ್ರಾವದ ಪರೀಕ್ಷೆಯ ನಂತರ ದೃಢಪಟ್ಟರೇ ಮಾತ್ರ ಸೋಂಕಿತ ವ್ಯಕ್ತಿಯೆಂದು ಪರಿಗಣಿಸಲಾಗುವುದು ಎಂದರು.

Comment here