Publicstory.in
ತುಮಕೂರು: ಮಹಾತ್ಮ ಗಾಂಧೀಜಿ ಈ ದೇಶದ ಆತ್ಮ, ಅಂತಃಶಕ್ತಿ. ಜಗತ್ತಿನ ಸರ್ವ ಸಮಸ್ಯೆಗಳಿಗೂ ಗಾಂಧಿ ತತ್ವ ಒಂದೇ ಪರಿಹಾರವಾಗಿದೆ ಎಂದು ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ತಿಳಿಸಿದರು.
ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ನಗರದ ರವೀಂದ್ರ ಕಲಾನಿಕೇತನದಲ್ಲಿ `ಬಾ-ಬಾಪೂ 150 ಮತ್ತು ಸರ್ವೋದಯ’, ಪರಿಚಯ ದರ್ಶಿನಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಎಂಬ ವ್ಯಕ್ತಿ ಹುಟ್ಟಿದ್ದರೆ? ಈ ನೆಲದಲ್ಲಿ ಬದುಕಿದ್ದರೆ? ಎಂದು ಮುಂದಿನ ಪೀಳಿಗೆಗೆ ಪ್ರಶ್ನಾರ್ಥಕ ಚಿಹ್ನೆ ಮೂಡಬಹುದು ಎಂದರು.
ಆ ರೀತಿ ಬದುಕಲು ಸಾಧ್ಯವೇ ಎಂಬ ಅನುಮಾನವೂ ಕೆಲವರಲ್ಲಿ ಮೂಡಬಹುದು. ತಮ್ಮ ಪ್ರಾಮಾಣಿಕತೆ, ಸತ್ಯ, ಸರಳತೆ ಮೂಲಕ ಗಾಂಧೀಜಿ ಮಹಾತ್ಮರಾಗಿ ಬೆಳೆದರು. ಅಹಿಂಸೆ ಮೂಲಕ ಸಾಮಾನ್ಯ ಜನರನ್ನು ಕೂಡ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದ ಗಾಂಧೀಜಿ, ಉಪ್ಪು, ಚರಕ, ಖಾದಿಯಂತಹ ವಸ್ತುಗಳನ್ನೆ ಶಸ್ತ್ರಗಳನ್ನಾಗಿ ಪರಿವರ್ತಿಸಿದರು. ಸ್ವಚ್ಛತೆ ಎಲ್ಲಿರುತ್ತದೋ ಅಲ್ಲಿ ಭಗವಂತ ಇರುತ್ತಾನೆ ಎಂದು ಸ್ವಚ್ಛತೆಗೆ ಗಾಂಧೀಜಿ ಕರೆ ನೀಡಿದರು. ಗಾಂಧಿ ಮಾರ್ಗ ಮನುಷ್ಯರನ್ನು ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳನ್ನೂ ಬದುಕಿಸುತ್ತದೆ. ದೇಶವನ್ನು ಸ್ವಚ್ಛಗೊಳಿಸುವ ಜತೆಗೆ ಮನಸ್ಸುಗಳನ್ನೂ ಸ್ವಚ್ಛಗೊಳಿಸಿಕೊಳ್ಳಬೇಕಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಎಂ.ಗೋವಿಂದರಾಯ ಮಾತನಾಡಿ, ಯುವ ಪೀಳಿಗೆಗೆ ಮಹಾತ್ಮ ಗಾಂಧೀಜಿ ಅವರ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆ ಕುರಿತಾದ ಲೇಖನ ಈ ಪರಿಚಯ ದರ್ಶಿನಿ ಒಳಗೊಂಡಿದೆ. ಪ್ರಸ್ತುತ ಪ್ರೀತಿ, ಸಹನೆ ದೂರ ಮಾಡಿ ದ್ವೇಷ ಅಸೂಹೆ ಹುಟ್ಟು ಹಾಕುತ್ತಿರುವ ಸಂದರ್ಭದಲ್ಲಿ ಮುಂದಿನ ಪೀಳಿಗೆಯಲ್ಲಿ ಗಾಂಧಿ ತತ್ವ ಪ್ರವಹಿಸಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇ ಬೇಕಾದ ಸಂಪಾದಿತ ಕೃತಿ ಇದು. ಕುತೂಹಲ-ಉತ್ಸಾಹದಿಂದ ಓದಿಸಿಕೊಂಡು ಹೋಗುತ್ತದೆ. ಪ್ರಸ್ತುತ ಹೊಸ ಪೀಳಿಗೆಗೆ ಗಾಂಧೀಜಿ ಅವರ ಸತ್ಯ, ಅಹಿಂಸೆ ತತ್ವಗಳನ್ನು ತಿಳಿಸಿಕೊಡುವ ಅವಶ್ಯಕತೆ ಬಹುಮುಖ್ಯವಾಗಿದೆ ಎಂದರು.
ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಎಲ್.ನರಸಿಂಹಯ್ಯ ತೊಂಡೋಟಿ ಮಾತನಾಡಿ, ಮಹಾತ್ಮ ಗಾಂಧೀಜಿ ಏನು ಅಂತ ಯುವಕರಿಗೆ ತಿಳಿ ಹೇಳಬೇಕು. ಗಾಂಧೀಜಿ ಒಂದು ಪ್ರೇರಕ ಶಕ್ತಿ ಆಗುತ್ತಾರೆ ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಎಂ.ಬಸವಯ್ಯ, ಕಾರ್ಯದರ್ಶಿ ಹೆಚ್.ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ, ಸಿ.ಡಿ.ಚಂದ್ರಶೇಖರ್, ಆರ್.ಅನಿತಾ ಉಪಸ್ಥಿತರಿದ್ದರು.