ತುಮಕೂರ್ ಲೈವ್

ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್

Publicstory. in


ತುಮಕೂರು: ಎಲ್ಲಾ ವಿಭಾಗದ ರೈತರು, ಕೃಷಿಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸುವ ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲಬೆಲೆ ಖಾತರಿಕಾಯ್ದೆ ಜಾರಿ, ಪ್ರವಾಹಪೀಡಿತ ಜನರಿಗೆ ಸೂಕ್ತಪರಿಹಾರ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್‍ಗೆ ರೈತ-ಕೃಷಿಕೂಲಿಕಾರರ ಸಂಘಟನೆಗಳು ಕರೆ ನೀಡಿವೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ ತಿಳಿಸಿದರು.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ದೇಶದಲ್ಲಿ ಕೃಷಿಬಿಕ್ಕಟ್ಟು ಹೆಚ್ಚಿದ್ದು ರೈತ ಸಮುದಾಯ ಸಂಕಷ್ಟ ಅನುಭವಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಜನರ ನೆರವಿಗೆ ಬರುತ್ತಿಲ್ಲ ಎಂದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಬಿಟ್ಟು ಬೇರೆ ವಿಷಯಗಳನ್ನು ಪ್ರಸ್ತಾಪಿಸುತ್ತ ಕಾಲ ಕಳೆಯುತ್ತಿದೆ. ಹೀಗಾಗಿ ರೈತ ಸಮಸ್ಯೆಗಳನ್ನು ನಿವಾರಿಸುವಂತೆ ಗಮನ ಸೆಳೆಯಲು ಬಂದ್ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಎಐಕೆಎಸ್‍ಸಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೃಷಿಬಿಕ್ಕಟ್ಟು ತೀವ್ರವಾಗಿದೆ. ರೈತರು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೂ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಯಿತು. ಅಮೂಲ್ಯವಾದ ಮಳೆನೀರನ್ನು ಸಂಗ್ರಹಿಸಿಡುª ಕೆಲಸವನ್ನು ಯಾರೂ ಮಾಡಲಿಲ್ಲ. ಸಣ್ಣನೀರಾವರಿ ಸಚಿವರು ಇದೇ ಜಿಲ್ಲೆಯವರು. ಅವರು ಹೇಮಾವತಿ ನೀರನ್ನು ಸಮರ್ಪಕವಾಗಿ ಕೆರೆಗಳಿಗೆ ತುಂಬಿಸುವಂತೆಹ ಕೆಲಸವನ್ನು ಮಾಡಲಿಲ್ಲ ಎಂದು ಆರೋಪಿಸಿದರು.

ಈ ಬಾರಿಯ ಮಳೆಯ ನೀರನ್ನು ಸಂಗ್ರಹಿಸಿದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಈಗ ಕೆರೆಯ ನೀರು ಬತ್ತಿಹೋಗಿದೆ. ಇದರಿಂದ ರೈತರು ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಆಜ್ಜಪ್ಪ, ಅಖಿಲ ಭಾರತ ಕಿಸಾನ್ ಸಭಾದ ಶಶಿಕಾಂತ್, ರೈತ ಮುಖಂಡ ಬಿ.ಉಮೇಶ್, ರೈತ ಸಂಘದ ರಂಗಹನುಮಯ್ಯ ಉಪಸ್ಥಿತರಿದ್ದರು.

Comment here