Tuesday, September 10, 2024
Google search engine
Homeಪೊಲಿಟಿಕಲ್ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದಿದೆ ಲೆಕ್ಕಾಚಾರ...

ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದಿದೆ ಲೆಕ್ಕಾಚಾರ…

ತುಳಸೀತನಯ


ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶಗೌಡ ನೇಮಕ ನಂತರ ಬಿಜೆಪಿ ಕಟ್ಟಿಹಾಕಲು ಜೆಡಿಎಸ್, ಕಾಂಗ್ರೆಸ್‌ನಲ್ಲಿ ಹೊಸ ಸಾರಥಿಗಳ ಹುಡುಕಾಟ‌ ಆರಂಭವಾಗಿದೆ.‌ ಇದು‌ ಈ ಎರಡೂ ಪಕ್ಷಗಳ ಕಾರ್ಯಕರ್ತರ ಒತ್ತಾಸೆಯಂತೆಯೂ ಕಾಣ ತೊಡಗಿದೆ.

ತಮ್ಮ‌ ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಆಯ್ಕೆ ಹಿಂದೆ ಜೆಡಿಎಸ್, ಕಾಂಗ್ರೆಸ್ ಸಮಾನ ಎದುರಾಳಿಯನ್ನು ಎದುರಿಸಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆ ಭದ್ರಕೋಟೆಯಾಗಲಿದೆ ಎಂಬುದು ಈ ಎರಡೂ ಪಕ್ಷಗಳ ನಾಯಕರಿಗೂ ಗೊತ್ತಿದೆ.

ಕಾಂಗ್ರೆಸ್, ಜೆಡಿಎಸ್ ಕಟ್ಟಿ ಹಾಕಲು ಬಿಜೆಪಿ ನೀರಿನ ಅಸ್ತ್ರ ಬಳಸಲಿದೆ. ಲೋಕಸಭಾ ಚುನಾವಣೆಯಲ್ಲಿ ಗಂಗೆಯ ಶಾಪ( ಹೇಮಾವತಿ ನೀರು) ಪದ ಬಳಸಿ ದೇವೇಗೌಡರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು ಬಿಜೆಪಿ. ಇದನ್ನು ವಿಧಾನಸಭೆ ಚುನಾವಣೆಗೂ ಬಳಸಿಕೊಳ್ಳಲಿದೆ.

ಹೇಮಾವತಿ ಎಕ್ಸ್ ಪ್ರೆಸ್ ಕಾಲುವೆ ಮೂಲಕ ನೇರವಾಗಿ ತಮ್ಮ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುವ ಕೆಲಸಕ್ಕೆ ಡಿ.ಕೆ.ಶಿವಕುಮಾರ್ ಕೈಹಾಕಿ ಬಿಜೆಪಿಗೆ ಸಿಕ್ಕಿ ಬಿದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಅವರು ಮುಖ್ಯಮಂತ್ರಿ ಅಭ್ಯರ್ಥಿ ಯೂ ಹೌದು.

ಆದರೆ ಹೇಮಾವತಿ ನೀರಿನಲ್ಲಿ ಜಿಲ್ಲೆಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ಹುಯ್ಯಲೆಬ್ಬಿಸಿದರೆ ಡಿಕೆಶಿಗೂ ಜಿಲ್ಲೆ ರಾಜಕಾರಣ ಕಷ್ಟವಾಗಲಿದೆ. ದೇವೇಗೌಡರನ್ನೇ ಕೈ ಬಿಟ್ಟ ಜನ ಇನ್ನೂ ಡಿಕೆಶಿ ಅವರನ್ನು ಕೈ ಹಿಡಿಯಲಿದ್ದಾರೆ ಎಂದು ಹೇಗೆ ನಂಬುದು ಅಲ್ಲವೇ?

ಇನ್ನೂ, ಮೊನ್ನೆ ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ & ಆಯ್ಕೆ ಕೂಗು ಬಹು ಜೋರಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಜೆಡಿಎಸ್ ವಲಯದಲ್ಲಿ ಜಿಲ್ಲಾಧ್ಯಕ್ಷ ಪದವಿಗೆ ಲಾಭಿ ನಡೆಯಬೇಕಿದ್ದರ ಬದಲಾಗಿ ಬಹು ಗಂಭೀರವಾದಂತಹ ಚರ್ಚೆಗಳು ನಡೆಯಲಾರಂಭಿಸಿವೆ.

ಕಾರಣವೆಂದರೆ ಮಾಜಿ ಪ್ರಧಾನಿ ದೇವೆಗೌಡರ ಲೋಕಸಭಾ ಚುನಾವಣಾ ಸೋಲು ಮತ್ತು ಪಕ್ಷ ದುರ್ಬಲವಾಗಿರುವಂತಹ ಈ ಸಂಧರ್ಭದಲ್ಲಿ ರಾಜಕೀಯ ಅನುಭವ & ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವಂತಹ, ಅದರಲ್ಲೂ ಜಿಲ್ಲೆಯ ರಾಜಕಾರಣದ ಮೂಲವಸ್ತುವಾದಂತಹ “ನೀರಾವರಿ ಯೋಜನೆಯ” ಸಮಗ್ರ ಪರಿಚಯವಿರುವಂತಹ ಮುತ್ಸದಿಯನ್ನು ಜಿಲ್ಲಾಧ್ಯಕ್ಷ ಪದವಿಗೆ ಕೂರಿಸುವ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ಧಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕರಾದ ಹೆಚ್. ನಿಂಗಪ್ಪನವರ ಹೆಸರು ಮುಂಚೂಣಿಯಲ್ಲಿದೆ.

ರಾಜ್ಯ ನಾಯಕರ & ಜಿಲ್ಲಾ ನಾಯಕರ ಚರ್ಚೆ ಹಿನ್ನೆಲೆಯಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲಿ ಕುತೂಹಲ ಹುಟ್ಟಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವೇ ಸೋತಿದ್ದರೂ ಧೃತಿಗೆಡದೇ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಸ್ ಬಸವರಾಜು ಗೆಲುವಿನ ಹಿಂದೆ ಸಾಕಷ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದ ಮಾಜಿ ಶಾಸಕರಾದ ಸುರೇಶ್ ಗೌಡ ಅವರಿಗೆ ಸರಿಸಮವಾಗಿ ಅವರಿಗೆ ಪ್ರತಿಹಂತದಲ್ಲೂ ಸವಾಲು ಒಡ್ಡುವರು ಬೇಕು ಎಂಬ ಬೇಡಿಕೆ ಜೆಡಿಎಸ್ ಕಾರ್ಯಕರ್ತರದ್ದಾಗಿದೆ.

ತನ್ನ ಚುನಾವಣೆಯನ್ನಷ್ಟೇ ನೋಡದ ಪಕ್ಷ ಬೆಳೆಸುವ ನಾಯಕರು ಮೊದಲಿನಿಂದಲೂ ಜೆಡಿಎಸ್ ನಲ್ಲಿ ಇಲ್ಲವಾಗಿದ್ದಾರೆ.

ಚುನಾವಣೆ ಸಂಧರ್ಭದಲ್ಲಿ ಆರೋಪ ಮಾಡುವಾಗ ಪ್ರತಿ ಹಂತದಲ್ಲೂ ನೀರಾವರಿ ವಿಚಾರವಾಗಿ ಅಪಪ್ರಚಾರ & ತಿರುಚುವ ತಂತ್ರಗಾರಿತೆಯಲ್ಲಿ ಬಿಜೆಪಿ ಸಫಲತೆ ಹೊಂದುತ್ತಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ.

ಜೊತೆಗೆ ಜಾತಿ ಲೆಕ್ಕಚಾರದಲ್ಲೂ ಮೇಲುಗೈ ಸಾಧಿಸಿದೆ. ನೈಜ ನೀರಾವರಿ ಹೋರಾಟ ಅನುಭವದ ರಾಜಕಾರಣಿಗಳನ್ನು ಜೆಡಿಎಸ್ & ಕಾಂಗ್ರೆಸ್ ನಲ್ಲಿ ವಿಶ್ವಾಸಕ್ಕೆ ತಗೆದುಕೊಳ್ಳದಿರುವುದೇ ಈ ಆಘಾತಕಾರಿ ಬೆಳವಣಿಗೆಗೆ ಕಾರಣ ಎಂದು ಜಿಲ್ಲೆಯ ಹಿರಿಯರು, ಬುದ್ದಿವಂತ ಮತದಾರರ ವಿಶ್ಲೇಷಣೆಯೂ ಕೂಡಾ ಆಗಿದೆ.

ನೀರಾವರಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿ.ಬಿ ಜಯಚಂದ್ರ & ಜೆಡಿಎಸ್ ನಲ್ಲಿ ಹೆಚ್ ನಿಂಗಪ್ಪನವರ ಅನುಭವವಷ್ಟೆ ಬಿಜೆಪಿಗರನ್ನು ಕಟ್ಟಿಹಾಕುವ ಶಕ್ತಿ ಹೊಂದಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಬಹುಮುಖ್ಯ ಕಾರಣ ಹೇಮಾವತಿ ನೀರಿನ ವಿಚಾರದಲ್ಲಿ ಅವರ ಮೇಲೆ ಆರೋಪ ಮತ್ತು ಅಪಪ್ರಚಾರ. ಇದಕ್ಕೆ ಪ್ರತ್ಯುತ್ತರವಾಗಿ ಯಾವೊಬ್ಬ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೂಡ ಚಕಾರ ಎತ್ತದಿರುವುದು & ಪಕ್ಷದೊಳಗಿನ ಗುಂಪುಗಾರಿಕೆ & ಒಡಕು ದೇವೇಗೌಡರ ಸೋಲಿಗೆ ಬಹುಮುಖ್ಯ ಕಾರಣವಾಯಿತು ಎಂಬುದನ್ನು ಈಗ ಸಣ್ಣ ಹುಡುಗ ಸಹ ಹೇಳಬಲ್ಲ.

ಸತ್ಯದ ವಿಷಯವೆಂದರೆ ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರ ತ್ಯಾಗ ಸ್ಮರಣೀಯವಾದದ್ದು “ನವಿಲೂರು ಸುರಂಗದ” ವಿಚಾರದಲ್ಲಿ ಹಾಸನದ ಜನತೆಯ ವಿರೋಧ ಕಟ್ಟಿಕೊಂಡು ತುಮಕೂರಿಗೆ ನೀರು ತರಲು ಶ್ರಮಿಸಿದಂತಹ ದೇವೆಗೌಡರ ಬಗ್ಗೆ ಒಂದು ಚಕಾರವನ್ನೆತ್ತದೇ, ಒಂದು ಒಳ್ಳೆಯ ಮಾತಾಡದೇ & ವಾಸ್ತವವನ್ನೇಳದೇ ಇರುವುದು ಜೆಡಿಎಸ್ ನ ಜಿಲ್ಲಾ ನಾಯಕತ್ವದ ವೈಫಲ್ಯಕ್ಕೆ ಹಿಡಿದ ಕನ್ನಡಿಯೇ ಆಗಿತ್ತು.

ಮಾಜಿ ಪ್ರಧಾನಿಗಳ ಸೋಲು ಕಾರ್ಯಕರ್ತರಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿರುವ ಸಂಧರ್ಭದಲ್ಲಿ ಹೈಕಮಾಂಡ್ ನಿರ್ಧಾರವೇ ಪಕ್ಷವನ್ನು ಮತ್ತೆ ಸಂಘಟಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ಪಕ್ಷದಲ್ಲಿನ ಒಡಕು, ಗುಂಪುಗಾರಿಕೆ ಹೆಚ್ಚಾಗಿರುವ & ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಳೆದುತೂಗಿ ಅಧ್ಯಕ್ಷರ ಆಯ್ಕೆ ಮಾಡಿದರೆ ಮಾತ್ರ ಕಾರ್ಯಕರ್ತರು ನಮ್ಮ ಧ್ವನಿಗೆ ಬೆಲೆ ಸಿಗುತ್ತದೆಂಬ ಆಶಾಭಾವನೆಯಿಂದ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ.

ಹಲವಾರು ಹೋರಾಟದ ಹಿನ್ನೆಲೆಯಲ್ಲಿ ಬಂದಂತಹ
ಮಾಜಿ ಶಾಸಕರಾದ ಎಚ್. ನಿಂಗಪ್ಪನವರು ವಕೀಲರಾಗಿದ್ದು, ಈ ಹಿಂದೆ ಸತತ ಹತ್ತು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅವರ ಅವಧಿಯಲ್ಲಿ 2004ರ ಚುನಾವಣಾ ಸಂಧರ್ಭದಲ್ಲಿ 11 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕೀರ್ತಿ ನಿಂಗಪ್ಪವರಿಗೆ ಸೇರಬೇಕಾಗುತ್ತದೆ. ಹೀಗಾಗಿ ಅವರೇ ಇರಲಿ ಎಂಬುದು ಕೆಲವರ ಲೆಕ್ಕಾಚಾರವೂ ಆಗಿದೆ.

ಜೆಡಿಎಸ್ ನಿಂದ ಜಿಲ್ಲೆಯ ಮೂವರು ಪ್ರಮುಖರು ಈಗಾಗಲೇ ಹೊರಗೆ ಕಾಲಿಟ್ಟಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಶಾಸಕ ಬಿ.ಸಿ.ಗೌರಿಶಂಕರ್ ಜಿಲ್ಲೆಯ ಜೆಡಿಎಸ್ ಹೈ ಕಮಾಂಡ್ ಆಗಲಿದ್ದಾರೆ ಎಂಬ ಮಾತುಗಳು ಆ ಪಕ್ಷದೊಳಗೆ ಕೇಳಿ ಬರುತ್ತಿವೆ.

ಹೀಗಾಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕದ ಹಿಂದೆ ಅವರು ಅಳೆದು ತೂಗಿ ಕೆಲಸ ಮಾಡಬೇಕಾಗಿದೆ. ಸುರೇಶಗೌಡ ಅವರನ್ನು ಕಟ್ಟಿ ಹಾಕುವ ನಾಯಕನಿಗಾಗಿ ಅವರು ಹುಡುಕಾಟ ನಡೆಸಬೇಕಾಗಿದೆ.

ಈ ನಿಟ್ಟಿನಲ್ಲಿ ಎಚ್. ನಿಂಗಪ್ಪ ಅವರ ಪರ ಗೌರಿಶಂಕರ್ ವಾಲಬಹುದು. ಆದರೆ ಉಳಿದ ಜೆಡಿಎಸ್ ಮುಖಂಡರ ಅಭಿಪ್ರಾಯವೂ ಮುಖ್ಯವಾಗಲಿದೆ.

ನಿಜಕ್ಕೂ ನೀರಾವರಿ ವಿಚಾರದಲ್ಲಿ ಸಂಸದ ಜಿ.ಎಸ್.ಬಸವರಾಜ್, ಮಾಜಿ ಶಾಸಕ ಬಿ.ಸುರೇಶಗೌಡ ಅವರನ್ನು ಕಟ್ಟಿ ಹಾಕುವ ಸಾಮರ್ಥ್ಯ ಜಿಲ್ಲೆಯಲ್ಲಿ ಟಿ.ಬಿ.ಜಯಚಂದ್ರ, ಎಚ್.ನಿಂಗಪ್ಪ ಅವರಿಗೆ ಬಿಟ್ಟರೆ ಉಳಿದವರಿಗೆ ಇಲ್ಲ.

ಪಕ್ಷದ ಅಧ್ಯಕ್ಷ ಸ್ಥಾನ ಏನೇ ಇರಲಿ, ಜಿಲ್ಲೆಯಲ್ಲಿ ಈ ಎರಡೂ ಪಕ್ಷಗಳು ಉಳಿಯಬೇಕಾದರೆ ಈ ಇಬ್ಬರೂ ಮುಖಂಡರು ನೀರಿನ ದನಿ ತೆಗೆಯಬೇಕಾಗಿದೆ.

RELATED ARTICLES

2 COMMENTS

  1. ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಎಂಬಂತಿದೆ ನಿಮ್ಮ ಲೇಖನ ಅಣ್ಣಾ. ಇದರ ಉದ್ದೇಶವನ್ನರಿತರೆ ಕಾಂಗ್ರೆಸ್ ಜೆಡಿಎಸ್ ಗೆ ಒಶಿತಾಗಲಿದೆ.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?