ತುಮಕೂರು: ವಿದ್ಯಾರ್ಥಿಗಳೇ ಪ್ರದರ್ಶಿಸಿದ ಯಕ್ಷಗಾನ ಏಕಾದಶಿ ದೇವಿ ಮಹಾತ್ಮೆ ಹಾಗೂ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಗದಾಯುದ್ಧ ತುಮಕೂರಿನ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾದವು.
ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಯಕ್ಷದೀವಿಗೆಯ ಸಹಕಾರದೊಂದಿಗೆ ಎಸ್.ಎಸ್.ಪುರಂನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಿದ ಒಂದು ದಿನದ ವಿಚಾರ ಸಂಕಿರಣದ ಅಂಗವಾಗಿ ಎರಡು ಯಕ್ಷಗಾನ ಪ್ರದರ್ಶನಗಳು ನಡೆದವು.
ಯಕ್ಷದೀವಿಗೆಯ ಅಧ್ಯಕ್ಷೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಅವರಿಂದ ತರಬೇತಿ ಪಡೆದ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಬಣ್ಣಹಚ್ಚಿ ಗೆಜ್ಜೆ ತೊಟ್ಟು ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶಿಸಿದರು.
ಮಾರುತಿ ವಿದ್ಯಾಕೇಂದ್ರ, ಬಿಷಪ್ ಸಾರ್ಜೆಂಟ್ ಶಾಲೆ, ಶ್ರೀ ಗುರುಕುಲ್, ಚೇತನ ವಿದ್ಯಾಮಂದಿರ, ವಿದ್ಯಾವಾಹಿನಿ ಕಾಲೇಜು, ಶ್ರೀಚೈತನ್ಯ ಟೆಕ್ನೋ ಸ್ಕೂಲ್, ಎಚ್‍ಎಂಎಸ್ ಐಟಿ, ತುಮಕೂರು ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.