ಕೆ.ಇ.ಸಿದ್ದಯ್ಯ
ತುಮಕೂರು: ಹಸಿರು ಕನವರಿಕೆಯ ನಡುವೆಉಸಿರು ಬೆವರುತ್ತಿದೆಹಸಿರು ಇಲ್ಲ. ಹಸಿರು ಬೆಳೆಸಬೇಕು, ಉಳಿಸಬೇಕು. ಹಸಿರಲ್ಲದೆ ಜೀವ ನರಳುತ್ತಿವೆ. ದೂಳು ಅಡಗಲು ಹಸಿರು ಬೇಕು. ಶುದ್ಧಗಾಳಿಗೆ ಹಸಿರು ಬೇಕು. ನೆಮ್ಮದಿ ಸಿಗಲು ಹಸಿರು ಬೇಕು. ತಂಗಾಳಿ ಬೀಸಲು ಹಸಿರು ಬೇಕು. ಖಗ ಸಂಕುಲದ ಆಶ್ರಯಕ್ಕೆ ಹಸಿರು ಬೇಕು.ಉಸಿರಾಡಲು ಹಸಿರು ಬೇಕು.
ಆರೋಗ್ಯವಾಗಿರಲು ಹಸಿರು ಬೇಕು. ಕಾಯಿಲೆ ನಾಶಕ್ಕೆ ಹಸಿರು ಬೇಕು. ಹಸಿರುಜಲ ಹೆಚ್ಚಬೇಕು. ‘ಹಸಿರತ್ತಲ್, ಹಸಿರಿತ್ತಲ್, ಹಸಿರೆತ್ತಲ್, ಎಂದು ಕುವೆಂಪು ಬಣ್ಣಿಸುತ್ತಾರೆ. ಹಸಿರೇ ಎಲ್ಲೆಲ್ಲೂ ಇದ್ದರೆ ಅದು ಭವಿಷ್ಯದ ಪೀಳಿಗೆಯ ಉಸಿರಾಟಕ್ಕೆ ನಾಂದಿಯಾಘುತ್ತದೆ ಇಲ್ಲದಿದ್ದರೆ ಹೊಸ ಪೀಳಿಗೆ ಉಸಿರಾಟವೇ ನಿಂತು ಹೋಗುತ್ತದೆ. ಇದನ್ನು ಆದಷ್ಟು ಬೇಗ ಮನುಕುಲ ಅರ್ಥ ಮಾಡಿಕೊಂಡರೆ ಒಳ್ಳೆಯದು.
ನಗರಗಳು ಬೆಳೆಯುತ್ತಿವೆ.. ಬೆಳೆದಂತೆ ಕೊಳೆಯುತ್ತಿವೆ. ಕೊಳೆಯುವ ಕಾಲಕ್ಕೆ ನರಳುತ್ತಿವೆ. ಇಂತಹ ಪರಿಸ್ಥಿತಿ ತುಮಕೂರಿಗೂ ಬಂದಿದೆ. ತುಮಕೂರು ಈಗ ಹಿಂದಿನಂತಿಲ್ಲ. ಕಾಂಕ್ರೀಟ್ ಕಾಡಿನ ನಡುವೆ ಮರವೆಂಬುದು ಬೆರಳೆಣಿಕೆಯಾಗಿದೆ.
ಮರಗಳು ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ. ರಸ್ತೆಗಳು ವಿಸ್ತರಿಸಿಕೊಳ್ಳುತ್ತಿವೆ. ನಗರ ರಸ್ತೆಗಳಿಂದಲೇ ತುಂಬಿಹೋಗಿದೆ. ಟಾರು ಮೆತ್ತಿಕೊಂಡಿವೆ. ಮಣ್ಣಿನಿಂದ ಕೂಡಿವೆ. ಇದೇ ಕಾರಣಕ್ಕೆ ಮರಗಳು ಗರಗಸಕ್ಕೆ ಬಲಿಯಾಗಿವೆ. ಇದನ್ನು ಯಾರಿಗೆ ಹೇಳಬೇಕು. ಹೇಳಬೇಕಾದವರೇ ನರಳುತ್ತಿದ್ದಾರೆ. ಅವರೇ ಜನರ ಉಸಿರನ್ನೂ ಕಿತ್ತುಕೊಳ್ಳುತ್ತಿದ್ದಾರೆ.
ಜನರೋ ಯಾವುದಕ್ಕೂ ಕಿವಿಗೊಡುತ್ತಿಲ್ಲ. ಹೇಳುವುದೂ ಒಂದೇ ಬಿಡುವುದೂ ಒಂದೇ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರೆ ಏನು ಮಾಡುವುದು?
ಹಸಿರಿನ ಕೊರತೆಯನ್ನು ತುಮಕೂರು ಎದುರಿಸುತ್ತಿದೆ. ಹಸಿರು ತುಮಕೂರು ಉಸಿರಿಲ್ಲದಾಗಿದೆ. ಇದು ಕಾಗದ ದಲ್ಲಿ ಮೆರಗುಡುತ್ತಿದೆ. ನಗರದಲ್ಲಿ ಮಾತ್ರ ಹಸಿರೆಂಬುದು ಕೊನೆಯಾಗಿದೆ. ಬಿ.ಎಚ್.ರಸ್ತೆಯ ನಡುವೆ ಬೇವಿನ ಸಸಿಗಳನ್ನು ನೆಟ್ಟಿದ್ದಾರೆ. ಯಾವ ಕಾರಣಕ್ಕೆ ರಸ್ತೆ ನಡುವೆ ಇಟ್ಟರೋ ಗೊತ್ತಿಲ್ಲ. ಯಾರು ಹೇಳಿದರೋ ಹೀಗೆ ಮಾಡಿ ಎಂದು! ಬೇವಿನ ಮರಗಳು ನಾಳೆ ಬೆಳೆದು ದೊಡ್ಡವಾದರೆ ಹರಡಿಕೊಂಡರೆ ಕತ್ತರಿಸುವುದಿಲ್ಲವೇ? ರಸ್ತೆಯ ಬದಿಯಲ್ಲಿ ಹಾಕಿದ ಮರಗಳನ್ನೇ ಬಿಡುತ್ತಿಲ್ಲ. ವಿದ್ಯುತ್ ತಂತಿಗೆ ತಗಲುತ್ತವೆ ಎಂಬ ಕಾರಣಕ್ಕೆ ಕತ್ತರಿ ಬೀಳುತ್ತಿದೆ.
ರಸ್ತೆ ಅಗಲೀಕರಣಕ್ಕೆ ಮರಗಳಿಗೆ ಕತ್ತರಿ ಬೀಳುತ್ತದೆ. ‘ಹರ ಕೊಲ್ಲಲ್ ಪರ ಕಾಯ್ವನೇ’ ಎನ್ನುವಂತಹ ಪರಿಸ್ಥಿತಿ ಬಂದಿದೆ. ಅಂದರೆ ರಕ್ಷಣೆ ಮಾಡಬೇಕಾದವರೇ ಕೊಡಲಿ ಹಿಡಿದು ನಿಂತರೆ ಏನು ಮಾಡುವುದು?
ಮುಂದಿನ ದಿನಗಳಲ್ಲಿ ಹಸಿರು ಬೆಳೆಸದಿದ್ದರೆ, ಹಸಿರು ಉಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ದೆಹಲಿ ನಗರ ಶುದ್ದ ಗಾಳಿಯ ಕೊರತೆ ಅನುಭವಿಸುತ್ತಿದೆ. ಜನರು ಬೆಳಗ್ಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡರೆ ಅದನ್ನು ಬಿಚ್ಚುವುದು ಊಟ ಮಾಡುವಾಗಲೇ ಎನ್ನುವಂತಹ ಸ್ಥಿತಿ ಇದೆ.
ತುಮಕೂರು ನಗರ ದೆಹಲಿಗಿಂತ ಭಿನ್ನವೇನೂ ಇಲ್ಲ. ಮರಗಳಿಲ್ಲದ ತುಮಕೂರು ಬೋಳಾಗಿ ಕಾಣುತ್ತಿದೆ. ಆಮ್ಲಜನಕದ ಕೊರತೆಗೆ ತುಮಕೂರು ಸಾಕ್ಷಿಯಾಗಿ ನಿಂತಿದೆ. ವಾಹನ ಸವಾರರು, ಅಂಗಡಿಯಲ್ಲಿ ಕುಳಿತವರು ಮೂಗಿಗೆ ಮಾಸ್ಕ್ ಧರಿಸುವುದು ಬದುಕಿನ ಭಾಗವಾಗಿಬಿಟ್ಟಿದೆ.
ಇಂತಹ ಪರಿಸ್ಥಿತಿಯನ್ನು ತಂದೊಡ್ಡಿದವರು ನಾಮ್ಮ ನಾಯಕರು. ನಮ್ಮನ್ನು ಆಳುವವರು. ಇವರಿಗೇನು ದಾಡಿ ಬಂತು. ಒಬ್ಬರಿಗೂ ಚಿಂತೆಯಿಲ್ಲ. ಹಾಳಾಗಿ ಹೋಗಲಿ ಬಿಡಿ ಎನ್ನುತ್ತವೆ ಹಿರಿಯ ಜೀವಗಳು.ದೂಳು ಹೆಚ್ಚಾಯ್ತು.
ನಗರದಲ್ಲಿದ್ದ ಮರಗಳೆಲ್ಲವೂ ಹೇಳಹೆಸರಿಲ್ಲದಂತಾದವು. ಹೀಗಾಗಿ ನೆರಳೇ ಇಲ್ಲದಂತೆ ಆಗುತ್ತಿದೆ. ಹಿಂದೆ ಇದ್ದ ಮರಗಳು ಈಗ ಇಲ್ಲ. ಹಾಳಾದೋರು, ಊರೆಲ್ಲಾ ಹಾಳ್ ಮಾಡಿದ್ರು. ಮರಗಳನ್ನು ಕತ್ತರಿಸಿ ಹಾಕಿದರು. ಮರಗಳಿದ್ದರೆ ಒಂದಿಷ್ಟು ಒಳ್ಳೆಯ ಗಾಳಿ, ಆಮ್ಲಜನಕ ಸಿಗುತ್ತಿತ್ತು. ವಾಹನಗಳು ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಯ್ತು. ಬಿಸಿ ಏರುತ್ತಿದೆ. ಬಿಸಿಲು ಜಾಸ್ತಿ ಆಗುತ್ತಿದೆ.
ಅಬ್ಬಾ ಉಸಿರಾಡುವುದೇ ಕಷ್ಟ. ಮರಗಳನ್ನು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಬೆಳೆಸ್ತಾರೆ. ರಸ್ತೆ ನಡುವೆ ನೆಟ್ಟರೆ ಏನು ಬಂತು. ಆ ಮರಗಳು ದೊಡ್ಡವಾಗುತ್ತಿದ್ದಂತೆ ಕಡಿಯಬೇಕಾಗುತ್ತದೆ. ಇದು ಪಲಿಕೆಯವರಿಗೆ, ಪರಿಸರ ಇಂಜಿಯರ್ ಗಳಿಗೆ ತಿಳಿದಿಲ್ಲವೇ? ಎನ್ನುತ್ತಾರೆ ನಾಗರಿಕರು.ಹಸಿರೆಂಬ ಉಸಿರನ್ನು ಕೊಲ್ಲುವ ಜನ ಹೆಚ್ಚಾಗುತ್ತಿದ್ದಾರೆ.
ನಾವೇ ಮಾಡಿಕೊಂಡ ತಪ್ಪಿಗೆ ನಾವೇ ಕಷ್ಟಅನುಭವಿಸಬೇಕು. ಇನ್ನು ಗರ್ಭದಲ್ಲಿರುವ ಶಿಶುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು. ಊಹಿಸಲೂ ಅಸಾಧ್ಯ. ಗರ್ಭದೊಳಗಿನ ಶಿಶುಗಳೂ ಕೂಡ ನಮ್ಮ ತಪ್ಪಿನ ಪರಿಣಾಮವನ್ನು ಎದುರಿಸಬೇಕಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೂ ಮಾನವ ಹಕ್ಕುಗಳ ಸಂಘಟನೆಗಳು ಈ ಕುರಿತು ಚಕಾರ ಎತ್ತುತ್ತಿಲ್ಲ.
ಹಸಿರು ಕಾಣೆಯಾಗುವ ಮುನ್ನ ಉಸಿರೆತ್ತುವುದು ಒಳ್ಳೆಯದು. ಇಲ್ಲಿದಿದ್ದರೆ ನಮ್ಮ ಗೋಳನ್ನು ಕೇಳುವವರೂ ಇಲ್ಲದಂತೆ ಆಗುತ್ತದೆ. ಕೊಡಲಿ ಹಿಡಿದು ನಿಂತವರು ಅದನ್ನು ಬಿಸುಟು ಹಸಿರ ಹಾಡಬೇಕು. ಇಲ್ಲದಿದ್ದರೆ ಜೀವಗಳು ಉಳಿಯಲಾರವು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.