ತುರುವೇಕೆರೆ : ತಾಲ್ಲೂಕಿನ ಗಡಿಭಾಗದ ಎ.ಹೊಸಹಳ್ಳಿ ಸಮೀಪದ ಡಿ.8 ನಾಲೆಯ ಮೂಲಕ ಹೇಮಾವತಿ ನಾಲಾ ನೀರು ಭಾನುವಾರ ಹರಿಯುತ್ತಿದ್ದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಅಬಿನಂಧನೆ ಸಲ್ಲಿಸುವುದಾಗಿ ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪೂರ್ವ ಮುಂಗಾರು ತೀವ್ರವಾಗಿ ಕ್ಷೀಣಿಸುತ್ತಿರುವುದರಿಂದ ಮಳೆಯಿಲ್ಲದೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ತುಂಬಾ ಬಿಗಡಾಯಿಸಿದೆ. ಇದೇ ರೀತಿ ಜಿಲ್ಲೆಯಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾದ್ದರಿಂದ ಜಿಲ್ಲೆಗೆ ಬಾಕಿ ಇರುವ 6 ಟಿಎಂಸಿ ನೀರ ಬಿಡುವಂತೆ ನಾನೂ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಒಟ್ಟುಗೂಡಿ ಈಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಜಿಲ್ಲೆಗೆ ಬಾಕಿ ಇರುವ ಹೇಮೆ ನೀರನ್ನು ಬಿಡುವಂತೆ ಕಳಕಳಿಂದ ಮನವಿ ಮಾಡಿಕೊಂಡ ಫಲವಾಗಿ ಇಂದು ತಾಲ್ಲೂಕಿನ ಮೂಲಕ ಹೇಮೆಯ ನೀರು ಹರಿದು ರೈತರಲ್ಲಿ ಸಂತಸ ಉಂಟು ಮಾಡಿದೆ ಎಂದರು.
ಕ್ಷೇತ್ರದಾದ್ಯಂತ ಈಗಾಗಲೇ ಕುಡಿಯುವ ನೀರಿಗಾಗಿ ಹತ್ತಾರು ಕೊಳವೆ ಬಾವಿ ಕೊರೆಯಿಸಿದರೂ ವಿಫಲವಾಗುತ್ತಿವೆ. ತಾಲ್ಲೂಕಿಗೆ ಹೇಮೆ ನೀರು ಹರಿದರೆ ನಾಲಾ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬಿ ಅಂರ್ತಜಲ ವೃದ್ದಿಯಾಗುತ್ತದೆ ಹಾಗು ತಾಲ್ಲೂಕಿನ ರೈತರ ಕೊಳವೆಬಾವಿಗಳಲ್ಲಿಯೂ ಉತ್ತಮ ನೀರು ಸಂಗ್ರಹವಾಗುತ್ತದೆ. ಮೊದಲ ಆದ್ಯತೆಯಲ್ಲಿ ತುಮಕೂರಿಗೆ ನೀರು ಹರಿದ ನಂತರ ತುರುವೇಕೆರೆ ತಾಲ್ಲೂಕಿಗೆ ಜೂನ್.4ರಿಂದ 13ರವರೆಗೆ ನೀರು ಹರಿಯಲಿದೆ ಎಂದರು.