Publicstory.in
ತುರುವೇಕೆರೆ: ಚುನಾವಣೆ ಸಮೀಪಿಸಿದಂತೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ರಂಗೇರಿದ್ದು ಡಿ.15ರಂದು ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಬೆಳಗ್ಗೆ 7: 30 ರಿಂದ 4 ಗಂಟೆಯ ವರೆಗೆ ಮತದಾನ ನಡೆಯಲಿದೆ.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಷಣ್ಮುಖಪ್ಪ ಹಾಗು ಕಂಚಿರಾಯಪ್ಪ-ರತೀಶ್ ಕುಮಾರ್ ಈ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಸ್ಪರ್ಧಿತ ಶಿಕ್ಷಕರುಗಳು ಎನ್ಪಿಎಸ್ ರದ್ದತಿ, ಸಿ ಅಂಡ್ ಆರ್ ನಿಯಮಗಳ ಬದಲಾವಣೆ ಸೇರಿದಂತೆ ಶಿಕ್ಷಕರ ಮೂಲಭೂತ ಸಮಸ್ಯೆ ಹೋಗಲಾಡಿಸಲು ಕೆಲಸ ಮಾಡುವುದಾಗಿ ಈಗಾಗಲೇ ಪ್ರಚಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ತಾಲ್ಲೂಕಿನಲ್ಲಿ 621 ಮತದಾರ ಶಿಕ್ಷಕರಿದ್ದು ತಲಾ 50 ಶಿಕ್ಷಕರೊಬ್ಬರಂತೆ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ 12 ಶಿಕ್ಷಕರ ಕ್ಷೇತ್ರದ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಆ ಪೈಕಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಷಣ್ಮುಖಪ್ಪ ಬಣದ ಮಹಿಳಾ ಮೀಸಲು ಅಭ್ಯರ್ಥಿಗಳಲ್ಲಿ ನಾಲ್ವರೂ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದ 8 ಪುರುಷ ಸ್ಥಾನಗಳಿಗೆ ಚುನಾವಣೆ ನಡೆಯ ಬೇಕಿದ್ದು ಪ್ರಸ್ತುತ ಒಟ್ಟು 13ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಕಳೆದ ಬಾರಿ ತಾಲ್ಲೂಕಿನ ಶಿಕ್ಷಕರು ಗುಂಪುಗಾರಿಗೆ, ಸ್ವಹಿತಾಸಕ್ತಿ ಬದಿಗಿರಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ವೇಳೆ ಎಲ್ಲ ಶಿಕ್ಷಕರುಗಳೂ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿಕೊಂಡಿದ್ದರು. ಈ ಸಲವೂ ಅವಿರೋಧ ಆಯ್ಕೆ ಆಗುತ್ತದೆಂದು ಬಹುಪಾಲು ಶಿಕ್ಷಕರು ಬಾವಿಸಿದ್ದರು. ಆದರೆ ಅವಿರೋಧ ಸಾಧ್ಯವಾಗದೇ ಎರಡು ಬಣಗಳು ತಮ್ಮ ಅದೃಷ್ಟವನ್ನು ಚುನಾವಣೆಗೆ ಒಡ್ಡಿಕೊಂಡಿದ್ದಾರೆ.
ಫಲಿತಾಂಶ ಸಹ ಕುತೂಹಲ ಮೂಡಿಸಿದೆ.