ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಶುಕ್ರವಾರ ಸಭೆ ನಡೆಯಿತು.
ಮಕ್ಕಳು, ವೃದ್ದರೂ ಸೇರಿದಂತೆ ಎಲ್ಲರೂ ಮನೆಯ ಹೊರಗಡೆ ಬರಬೇಡಿ. ನಾನು ನಿಮ್ಮ ಮನೆಯ ಮಗನಾಗಿ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ದಯಮಾಡಿ ಪಾಲಿಸಿ. ತುರುವೇಕೆರೆಯನ್ನು ಕಾಪಾಡಿ ಎಂದು ಶಾಸಕರು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ನಮ್ರತೆಯಿಂದ ಬೇಡಿಕೊಂಡರು.
ಹೊರ ಜಿಲ್ಲೆ ಮತ್ತು ಬೆಂಗಳೂರಿನಿಂದ ಈಗಾಗಲೇ ನೂರಾರು ಜನರು ತಾಲ್ಲೂಕಿಗೆ ಆಗಮಿಸಿರುವುದರಿಂದ ಅವರೆಲ್ಲರಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು ಒಂದು ಸವಾಲಾಗಿ ಪರಿಣಮಿಸಿದೆ. ಪಟ್ಟಣದಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ಬಿಸಿ ತೋರಿಸಿ. ಪಟ್ಟಣದಲ್ಲಿ ಭಾಗಶಃ ಜನರ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದರಲ್ಲಿ ಪೊಲೀಸರ ಶ್ರಮವಿದೆ ಎಂದು ಸಿಪಿಐ.ಲೋಕೇಶ್ ಅವರನ್ನು ಅಭಿನಂದಿಸಿದರು.
ತರಕಾರಿ, ದಿನಸಿ, ಹಣ್ಣು ಮೊದಲಾದ ಅಗತ್ಯ ವಸ್ತುಗಳಿಗೆ ಕಿಂಚಿತ್ತೂ ಊನಬಾರದಂತೆ ಕ್ರಮವಹಿಸಲಾಗಿದೆ. ಎಲ್ಲರಿಗೂ ಗ್ಯಾಸ್ ಮತ್ತು ಪಡಿತರ ಅಕ್ಕಿಯನ್ನು ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳಲಾಗಿದೆ. ಪಟ್ಟಣಿಗರ ಮನೆಬಾಗಿಲಿಗೆ ದಿನಸಿ ಮತ್ತು ತರಕಾರಿಗಳನ್ನು ತಲುಪಿಸುವ ಕೆಲಸವನ್ನು ತಹಶೀಲ್ದಾರ್ ಆರ್.ನಯೀಂಉನ್ನೀಸಾ ಮಾಡುತ್ತಿದ್ದಾರೆ.
ಖಾಸಗಿ ಕ್ಲಿನಿಕ್ ಮುಚ್ಚಿದರೆ ಕಠಿಣ ಕ್ರಮ: ಇಲ್ಲಿನ 12 ಖಾಸಗಿ ಕ್ಲಿನಿಕ್ಗಳು ಕೊರೊನಾ ಭೀತಿಯಿಂದ ಜನ ಸಾಮಾನ್ಯರಿಗೆ ಚಿಕಿತ್ಸೆ ನೀಡುವಲ್ಲಿ ಪಲಾಯಾನ ಮಾಡಿವೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇವರೆಲ್ಲರೂ ಬಾಗಿಲು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡದಿದ್ದರೆ ಅಂತಹವರ ಪರವಾನಗಿಯನ್ನು ರದ್ದುಪಡಿಸಲಾಗುವುದೆಂದು ನೋಟೀಸ್ ನೀಡಿ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ.ಸುಪ್ರಿಯಾಗಿ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಆರ್.ನಯೀಂಉನ್ನೀಸಾ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಯಕುಮಾರ್, ಸಿಪಿಐ.ಲೋಕೇಶ್, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಟಿಎಚ್ಒ.ಸುಪ್ರಿಯಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಶ್ರೀಧರ್, ಡಾ.ಪವನ್ಕುಮಾರ್ ಇದ್ದರು.