ತುಮಕೂರು ಲೈವ್

ತುರ್ತು ಆರೋಗ್ಯ ಸೇವೆಗೆ ನೆರವಾದ ಮಾಜಿ ಡಿಸಿಎಂ; ಕೊರಟಗೆರೆಗೆ ಬಂದಿದ್ದಾರೆ 10 ಸಾವಿರ ಜನರು

ತುಮಕೂರು: ಕೊರೊನಾ ತುರ್ತು ಸೇವೆಯಲ್ಲಿ ನಿರತರಾಗಿರುವ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ, ಪತ್ರಕರ್ತರು ಹಾಗೂ ತುರ್ತು ಸೇವೆಯಲ್ಲಿ ತೊಡಗಿರುವವರ ಇತರರಿಗೆ ನೀಡುವಂತೆ ವೈಯಕ್ತಿಕವಾಗಿ 10 ಲಕ್ಷ ಮೌಲ್ಯದ ಮಾಸ್ಕ್, ಸ್ಯಾನಿಟೈಸರ್ ನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ ಅವರು ತಹಶೀಲ್ದಾರ್ ಅವರಿಗೆ ಮಂಗಳವಾರ ನೀಡಿದರು.

ತಾಲ್ಲೂಕಿನಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನ ರೆಡ್ಡಿಕಟ್ಟೆ ಬಾರೆಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಕೊರೊನಾ ತುರ್ತು ಸೇವೆಗಾಗಿ ಕಟ್ಟಡವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಐಸಿಯು ವಾರ್ಡ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚನೆ ಮಾಡಿ ಪ್ರತಿಯೊಂದು ಮನೆಯ ಸದಸ್ಯರ ಆರೋಗ್ಯ ತಪಾಸಣೆ ನಡೆಸಬೇಕು. ಕ್ಷೇತ್ರದಲ್ಲಿ ಯಾರಿಗೂ ಆಹಾರಕ್ಕೆ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕ್ಷೇತ್ರದ ಪ್ರತಿ ದಿನದ ಮಾಹಿತಿಯನ್ನು ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಕೊರೊನಾ ಶಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗೆ ಹೊಂದಿಕೊಂಡಂತಿರುವ ನಮ್ಮ ಕ್ಷೇತ್ರಕ್ಕೆ ಯಾರೂ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡದರು.

ತಾಲ್ಲೂಕನ್ನು ಸಂಪರ್ಕಿಸುವ ಗಡಿಯಲ್ಲಿ ಹಾಕಲಾಗಿರುವ ಚೆಕ್ ಪೋಸ್ಟ್ ಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಕ್ಷೇತ್ರದೊಳಗೆ ಯಾರೂ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು.

ಬೆಂಗಳೂರಿನಿಂದ ತಾಲ್ಲೂಕಿಗೆ ಸುಮಾರು 10 ಸಾವಿರ ಜನ ಬಂದಿರುವ ಮಾಹಿತಿ ಇದೆ. ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ ಯಾರೂ ಮನೆಯಿಂದ ಹೊರಬಾರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಪಪಂ. ಸಿಓ ಲಕ್ಷ್ಮಣಕುಮಾರ, ಸಿಪಿಐ ಎಫ್.ಕೆ.ನದಾಫ್, ಟಿಎಚ್ಓ ಡಾ. ವಿಜಯ್ ಕುಮಾರ್, ವೈದ್ಯಾಧಿಕಾರಿ ಡಾ. ಪ್ರಕಾಶ್, ಡಾ. ನಾಗಭೂಷಣ್, ಬೆಸ್ಕಾಂ ಎಇಇ ಮಲ್ಲಣ್ಣ, ಬಿಸಿಎಂ ಇಲಾಖೆಯ ಅನಂತರಾಮ್, ಎಇಇ ರಂಗಪ್ಪ, ಪಿಎಸೈಗಳಾದ ಎಚ್.ಮುತ್ತುರಾಜು, ನವೀನ್ ಇತರರು ಇದ್ದರು.

Comment here