ತುಮಕೂರ್ ಲೈವ್

ದಲಿತರ ಪ್ರತಿಭಟನೆ

ಸಭೆಗೆ ಹಾಜರಾಗದ ಅಧಿಕಾರಿಗಳು ದಲಿತ ಮುಖಂಡರ ಪ್ರತಿಭಟನೆ, ಧರಣಿ
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾರ್ವಜನಿಕ ಕುಂದು ಕೊರತೆ ಸಭೆಗೆ ಬಹುತೇಕ ಅಧಿಕಾರಿಗಳು ಗೈರುಹಾಜರಾಗಿರುವುದನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ\nರು. ಸಭಾಂಗಣದ ಬಳಿಕ ಜಿಲ್ಲಾ ಪಂಚಾಯಿತಿ ಬಾಗಿಲಲ್ಲಿ ಧರಣಿ ಕೂತು ಸಭೆಗೆ ಬಾರದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಗಳು, ಎಸಿಗಳನ್ನು ಬಿಟ್ಟರೆ ಸುಮಾರು 26ಕ್ಕೂ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನಾಧಿಕಾರಿಗಳನ್ನು ಕಳಿಸಿ ತಾವು ಸಭೆಯಿಂದ ದೂರ ಉಳಿದಿದ್ದರು. ಇದನ್ನು ಗಮನಿಸಿದ ದಲಿತ ಮುಖಂಡರು ಅಧಿಕಾರಿಗಳಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಭೆಗೆ ಬಾರದೆ ನಮಗೆ ಅವಮಾನ ಮಾಡಿದ್ದಾರೆ. ಯಾರೆಲ್ಲಾ ಸಭೆಗೆ ಬಂದಿಲ್ಲವೋ ಅಂಥವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದು ಕುಳಿತರು.

ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣಿ ದಲಿತ ಮುಖಂಡರನ್ನು ಸಮಾಧಾನಪಡಿಸಲು ಮಾಡಿದ ಯತ್ನ ವಿಫಲವಾಯಿತು. ಬಳಿಕ ಧರಣಿರ ಬಳಿಗೆ ಬಂದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠ ಡಾ.ವಂಶಿಕೃಷ್ಣ ನಾವು ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದೆವು. ಬೆಳಗ್ಗೆಯೇ ದುರಂತ ನಡೆದಿದ್ದರಿಂದ ಸಭೆಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ಮುಂದೆ ಸಭೆ ನಡೆಸೋಣ ಎಂದು ಧರಣಿನಿರತ ದಲಿತ ಮುಖಂಡರನ್ನು ಸಮಾಧಾನಪಡಿಸಿದರು.
ಬಳಿಕ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ನ್ಯಾಯಾಲಯದಲ್ಲಿ ಬಾಕಿಯಿರುವ ದಲಿತ ಸಮುದಾಯದವರ ದೂರು ಪ್ರಕರಣಗಳ ನಿಖರ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಗೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂದಿನ ಸಭೆಯೊಳಗಾಗಿ ನಿಖರ ಮಾಹಿಯೊಂದಿಗೆ ಬರಬೇಕು ಎಂದು ನಿರ್ದೇಶಿಸಿದರು.

ಕೋರಾ ಹೋಬಳಿ ಬಿಟ್ಟನಕುರಿಕೆ ಗ್ರಾಮದಲ್ಲಿ ಅಲ್ಪ-ಸ್ಪಲ್ಪ ಜಮೀನು ಹೊಂದಿರುವ 30 ರಿಂದ 40 ದಲಿತರ ಕುಟುಂಬಗಳಿದ್ದು, ಇವರ ಜಮೀನಿಗೆ ಗೊಬ್ಬರ ಗಾಡಿಗಳು ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಲಿತರ ಸ್ಮಶಾನದ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮುಖಂಡರೊಬ್ಬರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಸ್ಮಶಾನದ ಜಾಗ ಒತ್ತುವರಿ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ಗೆ ಸೂಚಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ದಲಿತ ಕಾಲೋನಿಗಳಿವೆ. ಅಲ್ಲಿ ವಾಸವಿರುವ ದಲಿತ ನಿವಾಸಿಗಳಿಗೆ ಪಾಲಿಕೆಯಿಂದ ನಿವೇಶನ ಖಾತೆ ನೀಡುವಾಗ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕೊಳಗೇರಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ ದೂರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Comment here