ತುಮಕೂರು ಲೈವ್

ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ: ಸಚಿವ ಮಾಧುಸ್ವಾಮಿ

ತುಮಕೂರು: ಸಂವಿಧಾನ ಜಾರಿಗೆ ಬಂದ ನಂತರ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 71ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಪ್ರಪಂಚದಲ್ಲಿ ಉತ್ಕಷ್ಟ ಮಟ್ಟದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಕತೃಗಳು ಈ ದೇಶದ ಜನರ ಬದುಕು, ಜೀವನದ ಬದಲಾವಣೆಗೆ ತಕ್ಕಂತೆ ಕಾನೂನುಗಳನ್ನು ಬದಲಾಯಿಸುವ ಬಹುದೊಡ್ಡ ಅವಕಾಶ ನೀಡಿದ್ದಾರೆ ಎಂದರು.

ದೇಶದಲ್ಲಿ ಬೇಕಾದಷ್ಟು ಧರ್ಮಗಳು, ಭಾಷೆಗಳು, ಪ್ರಾಂತ್ಯಗಳು ಇದ್ದರೂ ಜನರು ನೆಮ್ಮದಿಯಾಗಿ ಬದುಕುವ ಸ್ಥಿತಿ ಹಾಗೂ ಸಮಾಜವಾದ, ಸಮತಾವಾದ ಹಾಗೂ ಅಶಕ್ತರನ್ನು ಶಕ್ತರನ್ನಾಗಿಸುವ ಹಾಗೂ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರದ ಕೊರತೆ ಇಲ್ಲ. ಆಹಾರ ಭದ್ರತೆ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆಹಾರವನ್ನು ಪಡೆಯುತ್ತಿವೆ. ಕಡ್ಡಾಯ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದು ಉಚಿತವಾಗಿ 0-14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಾಗಿ ಶೇ.30ರಷ್ಟಿದ್ದ ಸಾಕ್ಷರತಾ ಪ್ರಮಾಣ 80% ರಷ್ಟರವರೆಗೆ ಏರಿಕೆಯಾಗಿ ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ ಎಂದರು ಅವರು ತಿಳಿಸಿದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು, ಸ್ವಾತಂತ್ರ್ಯ ನಂತರ ದೇಶ ರಕ್ಷಣಾ ಶಕ್ತಿಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದೆ. ವೈಜ್ಞಾನಿಕ ಸಂಶೋಧನೆಯಲ್ಲೂ ಭಾರತ ಮುಂದಿದೆ ಎಂದು ಅವರು ತಿಳಿಸಿದರು.

ಹೇಮಾವತಿ ತುಮಕೂರು ನಾಲೆ 0-70 ಕಿ.ಮೀ. ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಈಗಿನ ಎರಡರಷ್ಟು ನೀರನ್ನು ಪಡೆಯಬಹುದಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕಾಂತರಾಜ್ ಬಿಎಂಎಲ್, ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮೇಯರ್ ಲಲಿತ ರವೀಶ್, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಎಸ್‍ಪಿ ಡಾ: ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ತುಮಕೂರು ನಗರದ ವಿವಿಧ ಕಾಲೇಜು ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪೊಲೀಸ್, ಎನ್‍ಸಿಸಿ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಕವಾಯಿತು ನಡೆಯಿತು.

Comment here