Friday, September 6, 2024
Google search engine
Homeಜನಮನದೋಣಿ ಮುಳುಗುವ ಭಯದಲ್ಲೇ ಸಾಗುತ್ತಿದೆ ನನ್ನ ಪತ್ರಿಕಾ ಪಯಣ

ದೋಣಿ ಮುಳುಗುವ ಭಯದಲ್ಲೇ ಸಾಗುತ್ತಿದೆ ನನ್ನ ಪತ್ರಿಕಾ ಪಯಣ

ಹುಳಿಯಾರು ಮಹೇಶ್


1998 ಗ್ರಾಮೀಣ ಪ್ರದೇಶಗಳ ಸುದ್ದಿಗಳು ಪತ್ರಿಕೆಗಳಲ್ಲಿ ಆಗೊಮ್ಮೆಹೀಗೊಮ್ಮೆ ಪ್ರಕಟಣೆಯಾಗುತ್ತಿದ್ದವು. ಇಂದು ಕಳುಹಿಸಿದ ಸುದ್ದಿಗಳು ವಾರಕ್ಕೆ ಪ್ರಸಾರ ಮಾಡಲಾಗುತ್ತಿತ್ತು.

ಅಂಚೆ ಮೂಲಕ ಕಳುಹಿಸಿದ ಸುದ್ದಿಗಳು ಡಿಟಿಪಿಗಳಿಗೆ ಒಳಪಟ್ಟು ಪ್ರಸಾರಕ್ಕೆ ಯೋಗ್ಯವೆನಿಸಿದ ಸುದ್ದಿಗಳು ಮಾತ್ರ ಪ್ರಕಟಗೊಳ್ಳುತ್ತಿದ್ದವು. ಈ ವೇಳೆಗೆ ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಸಹ ಅಗಮನವಾಗಿತ್ತು.

ಇಂತಹ ಸಂದರ್ಭದಲ್ಲಿ ಅನಿವಾರ್ಯ ಸ್ಥಿತಿಯಲ್ಲಿ ನಾನು ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟೆ. ಆರಂಭದಲ್ಲಿ ಚಿ.ನಾ.ಹಳ್ಳಿ ಸುದ್ಧಿ ವಾರಪತ್ರಿಕೆಯಲ್ಲಿ ಸುದ್ದಿ ಬರೆಯುವ ಮೂಲಕ ನನ್ನ ಪತ್ರಿಕಾ ಜೀವನ ಆರಂಭಗೊಂಡಿತು.

ಒಂದೆರಡು ವರ್ಷ ಅದೇ ಪತ್ರಿಕೆಯಲ್ಲಿ ಕೆಲಸ ನಡೆಯುತ್ತಿತ್ತು. ಯಾವುದೇ ಪಗಾರ ಬರದಿದ್ದರೂ ಪತ್ರಿಕೆಯಲ್ಲಿ ಸುದ್ದಿ ಬರುತ್ತದೆ ಎಂಬು ಜೋಶ್ ಮಾತ್ರ ಇತ್ತು.

ರಾಜ್ಯ ಮಟ್ಟದ ಪತ್ರಿಕೆಗೆ ಸುದ್ದಿ ಬರೆಯಬೇಕು ಎಂಬ ತುಡಿತ ಒಂದೇ ಸಮನೇ ಮನಸ್ಸನ್ನು ಕಾಡುತ್ತಿತ್ತು. ಆಗ ತಾನೇ ವಿಜಯ ಕರ್ನಾಟಕ ಪತ್ರಿಕೆ ಆರಂಭ ಆಗಿತ್ತು. ಈ ವೇಳೆಗೆ ವಿಜಯ ಕರ್ನಾಟಕ ಪತ್ರಿಕೆಯ ಚಿಕ್ಕನಾಯಕನಹಳ್ಳಿ ಏಜೆನ್ಸಿ ಹಾಗೂ ಸುದ್ದಿಗಾರರು ಆದ ಹಿರಿಯರಾದ ಮೇರುನಾಥ್ ಅವರು ಅಂದಿನ ವಿಜಯ ಕರ್ನಾಟಕ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿಸಿ ಪತ್ರಿಕೆಗೆ ಹುಳಿಯಾರು ಭಾಗದಿಂದ ಸುದ್ಧಿ ಕಳುಹಿಸುತ್ತಾನೆ ಎಂದು ಪರಿಚಯಿಸಿದರು.

ಆದ್ರೆ ಭಟ್ಟರು 6 ತಿಂಗಳು ಸುದ್ದಿ ಕಳುಹಿಸಿ ಆಮೇಲೆ ಯಾವುದನ್ನು ತೀರ್ಮಾನ ಮಾಡುತ್ತೇವೆ ಅಂದು ಬಿಟ್ಟರು. ಆದ್ರೂ ಛಲ ಬಿಡದ ತ್ರಿವಿಕ್ರಮನಂತೆ 2 ವರ್ಷಗಳ ಕಾಲ ಯಾವುದೇ ಪಗಾರವಿಲ್ಲದೆ ನನ್ನದೇ ಅಂಚೆ, ಕೊರಿಯರ್, ಹಾಗೂ ಪ್ಯಾಕ್ಸ್ ವೆಚ್ಚಗಳನ್ನು ಭರಿಸಿ ಸುದ್ದಿ ಕಳುಹಿಸಿದೆ.

ಆದರೆ ಕಳುಹಿಸಿದ ನಾಲ್ಕೈದು ಸುದ್ದಿಗಳಲ್ಲಿ 1 ಸುದ್ದಿ ಬಂದ್ರೆ ಬಂತು ಇಲ್ಲವಾದರೆ ಅದು ಇಲ್ಲ. ಸುದ್ದಿ ಬರೆಯುವುದು ಸಹ ಆಗ ಸವಾಲಿನ ಕೆಲಸ ಆಗಿತ್ತು. ಪತ್ರಿಕೆಯೊಂದಿಗಿನ ನಡಿಗೆ ಮುಳ್ಳಿನ ಹಲಗೆಯಾಗಿತ್ತು. ಸ್ವಲ್ಪ ಎಚ್ಚರ ತಪ್ಪಿದರೆ ದೊಡ್ಡ ವಿರೋಧವನ್ನು ಎದುರಿಸಬೇಕಾಗಿತ್ತು.

ನಮ್ಮದೇ ಹಣದಲ್ಲಿ ಫೋಟೋಗಳನ್ನು ಪ್ರಿಂಟ್ ಹಾಕಿಸಿ ಕೊರಿಯರ್ ಮೂಲಕ ಸುದ್ದಿ ಕಳುಹಿಸಿ ದಿನಕ್ಕೆ 100 ರೂ ಹಣ ನಮ್ಮದೇ ಖರ್ಚು. ಆದ್ರೂ ರಂಗ ಬಿಡುವ ಮನಸ್ಸಿಲ್ಲ. ಹಾಗೂ ಹೀಗೂ 2 ವರ್ಷ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಯಾವುದೇ ಪಗಾರವಿಲ್ಲದೆ ದುಡಿದೆ.

ಈ ವೇಳೆಗೆ ಪ್ರತಿಷ್ಠಿತ ಪ್ರಜಾವಾಣಿ ಹುಳಿಯಾರು ಹೋಬಳಿಗೆ ಸುದ್ದಿ ಕಳುಹಿಸಲು ಅರೆಕಾಲಿಕ ವರದಿಗಾರ ಹುದ್ದೆಯನ್ನು ಸೃಷ್ಟಿಸಿ ಪ್ರಕಟಣೆ ಹೊರಡಿಸಿತ್ತು. ಕೂಡಲೇ ಅರ್ಜಿ ಸಲ್ಲಿಸಿಯೇ ಬಿಟ್ಟೆ. 15 ದಿನದಲ್ಲಿಯೇ ನನ್ನ ಮನೆ ದೂರವಾಣಿಗೆ ಬೆಂಗಳೂರು ಪ್ರಜಾವಾಣಿ ಕಚೇರಿಯಿಂದ ಕರೆ ಬಂದಿತ್ತು. ತಾವು ಬೆಂಗಳೂರು ಕಚೇರಿಯಲ್ಲಿ ನಡೆಯುವ ಇಂಟರ್ ವ್ಯೂ ನಲ್ಲಿ ಭಾಗವಹಿಸಬೇಕು.

ಇಂಟರ್ ವ್ಯೂ ನಲ್ಲಿ ನಾನೇ ಸೆಲೆಕ್ಟ್ ಆಗಿ ಬಿಟ್ಟೆ. 2002ರಲ್ಲಿ ಪ್ರಜಾವಾಣಿಗೆ ಸೇರಿದ್ದೆ ತಡ ಸುದ್ದಿಗಳ ಸರಮಾಲೆಯನ್ನೇ ಆರಂಭಿಸಿದೆ. ನನ್ನ ಸುಮಾರು 18 ವರ್ಷದ ಅವಧಿಯಲ್ಲಿ ಪ್ರಜಾವಾಣಿ ಸಾಕಷ್ಟು ಜ್ಞಾನ ಮತ್ತು ಹೆಸರು ತಂದು ಕೊಟ್ಟಿದೆ.

ಎಂದಿಗೂ ಪ್ರಜಾವಾಣಿ ಹಾಗೂ ನನಗೆ ಪತ್ರಿಕಾ ಕ್ಷೇತ್ರದ ಅ ಆ ಇ ಈ ಹೇಳಿಕೊಟ್ಟ ಚಿ.ನಾ.ಹಳ್ಳಿ ಸುದ್ದಿ, ವಿಜಯ ಕರ್ನಾಟಕ, ಪ್ರಜಾ ಪ್ರಗತಿ ಪತ್ರಿಕೆಗಳಿಗೆ ಚಿರಋಣಿ.

ನನ್ನ 22 ವರ್ಷಗಳ ಪತ್ರಿಕಾ ಕ್ಷೇತ್ರದಲ್ಲಿ ಕಷ್ಟ ನಷ್ಟ , ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಕಂಡಿದ್ದೇನೆ. ಹಲವಾರು ಬದಲಾವಣಿ ಕಂಡಿದ್ದೇನೆ. ಅಂಚೆಯಿಂದ ಹಿಡಿದು ಮಿಂಚಂಚೆಯವರಿಗೂ ಜ್ಞಾನ ಬೆಳೆಸಿಕೊಂದಿದ್ದೇನೆ.

ಇಷ್ಟೆಲ್ಲ ಆರ್ಭಟದಿಂದ ನಡೆದ ಮುದ್ರಣ ಮಾಧ್ಯಮ ಇಂದು ಅನೇಕ ಕಷ್ಟಗಳನ್ನು ಎದುರಿಸುತ್ತಿದೆ. ಇಂದಿನ ಮುದ್ರಣ ಮಾಧ್ಯಮದ ಸ್ಥಿತಿ ನೋಡಿದರೆ ಮುಳುಗಿ ಹೋಗಿಯೇ ಬಿಡುತ್ತದಯೇ ಎಂಬ ಅನುಮಾನ ಕಾಡುತ್ತಿದೆ.

ನಾನು ಪತ್ರಿಕಾ ಕ್ಷೇತ್ರಕ್ಕೆ ಬಂದ ಹೊಸದರಲ್ಲಿ ನಮ್ಮ ಹಿರಿಯರು ಮುದ್ರಣ ಮಾಧ್ಯಮ ಮುಳುಗುತ್ತಿರುವ ದೋಣಿ ಎಂದು ಹೇಳುತ್ತಿದ್ದರು. ಆದರೆ ಸುಮಾರು 20 ವರ್ಷಗಳಿಂದ ದೋಣಿ ಮುಳುಗುತ್ತದೆ ಎಂಬ ಭಯದಲ್ಲೆ ಪ್ರಯಾಣ ಮಾಡಿದ್ದೇನೆ, ಮಾಡುತ್ತಲೂ ಇದ್ದೇನೆ.

ಹಲವಾರು ಕಾರಣಗಳಿಂದ ಮುದ್ರಣ ಮಾಧ್ಯಮ ಇಂದು ಸಂಕಷ್ಟದಲ್ಲಿ ಸಿಲುಕಿದೆ ಎಂಬ ಭಾವನೆ ಮೂಡುತ್ತದೆ. ಇಂದು ಪತ್ರಿಕೆಗಳ ಪುಟ ಕಡಿಮೆ ಆಗುತ್ತಿರುವುದರ ಜತೆ ಹಲವಾರು ಬದಲಾವಣೆ ಕಾಣುತ್ತಿರುವುದು ನನ್ನನ್ನು ಇಂತಹ ಭಯದ ಕೂಪಕ್ಕೆ ತಳ್ಳಿದೆ.

ಆದರೆ ನೂರಾರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಮುಳುಗಿಸದೆ ಉಳಿಸುವ ಭಾರ ಓದುಗರ ಮೇಲಿದೆ…ಕಾಲವೇ ಎಲ್ಲವನ್ನೂ ನಿರ್ಣಯಿಸುವುದರಿಂದ ಭಯಪಡದೇ ಮುದ್ರಣ ಮಾಧ್ಯಮದಲ್ಲಿ ಇನ್ನಷ್ಟು ದಿನ ಸೇವೆ ಸಲ್ಲಿಸುವ ಇರಾದೆ ಇದೆ. ನೋಡೋಣ…


ಹುಳಿಯಾರು ಮಹೇಶ್ ಒಳ್ಳೆಯ ಕೃಷಿಕರು. ಹಾಗೆಯೇ ಉತ್ತಮ ಪತ್ರಕರ್ತರು ಹೌದು. ಅನೇಕ ವರದಿಗಳಿಗೆ ಅವರು ಹೆಸರುಗಳಿಸಿದ್ದಾರೆ. ಅನೇಕ ಪ್ರಶಸ್ತಿ, ಗೌರ‌ವಗಳು ಸಂದಿವೆ. ಸದ್ಯ, ಅವರು ಪ್ರಜಾವಾಣಿಯ ಹುಳಿಯಾರು ವರದಿಗಾರರು.

RELATED ARTICLES

4 COMMENTS

  1. ನಿಮ್ಮ ಪ್ರಯತ್ನ ,ಕೆಲಸ ಪರಿಶ್ರಮ ಕಂಡು ಖುಷಿಯಾಯಿತು.ನೀವು ಕನ್ನಡ ಪತ್ರಿಕೆ ಗೋಳನ್ನು ಅಂದರೆ ಮುದ್ರಣ ಮಾಧ್ಯಮ ಉಳಿಸುವುದು ಎಲ್ಲ ಕನ್ನಡಿಗರ ಕರ್ತವ್ಯ ವಾಗಬೇಕು ಹಾಗೂ ಮುದ್ರಣ ಮಾಧ್ಯಮ ಉಳಿಯಬೇಕು

  2. ಪ್ರಜಾವಾಣಿ ಪ್ರತಿಯೊಂದು ವಿಚಾರವನ್ನು ಸತ್ಯಕ್ಕೆ ಹತ್ತಿರದ & ವೈಜ್ಞಾನಿಕವಾಗಿ ಕಣ್ಣಿಗೆ ಕಾಣುವ ಸುದ್ದಿ ಪ್ರಚಾರ ಮಾಡುವ ಬಗ್ಗೆ ಪ್ರಜಾವಾಣಿಯಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು & ನನ್ನ ವೈಯಕ್ತಿಕ ಮೆಚ್ಚಿನ ಪತ್ರಿಕೆಯಾಗಿದೆ..

    ಚಿಕ್ಕನಾಯಕನಹಳ್ಳಿ &ಹುಳಿಯಾರು ಭಾಗದ ಪ್ರಜಾವಾಣಿ ಕೆಲಸ ನಿರ್ವಹಿಸುವ ಮಹೇಶಣ್ಣ ನೀಡುವ ಸೈದ್ಧಾಂತಿಕ ವಿಚಾರದ ಬಗ್ಗೆ ಗೌರವವಿದೆ ಅವರಿಗೆ ಅಭಿನಂದನೆಗಳು.

    ನೀವೇ ಬರೆದ ಅನುಭವದ ಮಾತುಗಳು
    ವಾಸ್ತವದಲ್ಲಿ ಪ್ರತ್ರಿಕ ಕ್ಷೇತ್ರಕ್ಕೆ (Print media)ಎನ್ನುವುದು ಚಟದ ಸ್ವರೂಪ ಇವತ್ತಿಗೂ ಪ್ರಜಾವಾಣಿ ಓದಿದ ನನಗೆ ಏನೋ ಕಳೆದು ಕೊಂಡ ಭಾವನೆ ಸೃಷ್ಟಿಯಾಗುತ್ತದೆ ಕಾರಣ ಹುಡುಕಿದರು ಅದೊಂದು ಅಭ್ಯಾಸದ ಪ್ರಕ್ರಿಯೆ ಭಾಗ ನನ್ನೊಂದಿಗೆ ಸೇರಿದೆ.. ಓದುಗರ ಬಯಸುವುದೇ ಕಣ್ಣಿಂದ ಕ್ಲಿಷ್ಟವಾದ ಎರಡೂ ಕೈಯಲ್ಲಿ ಹಿಡಿದುಕೊಂಡು ಓದುವ ಅಭ್ಯಾಸ ಹಿತ ಅನುಭವಿಸುವ ಪ್ರತಿ ಓದುಗರಲ್ಲಿ ಇರುತ್ತದೆ …ಆದರೇ ನೀವೇ ಅನುಭವಿಸುತ್ತಿರುವ ಸಂಕಟ ಮದ್ಯೆ ಓದುಗನಾಗಿ ನನ್ನ ಅಭಿಪ್ರಾಯ ,PDF ,Forword massge ,ಓದುವಾಗ ನಿಜವಾದ Touch nd Feel ಪ್ರತಿಕೆ ಓದಿದೆ ಅನ್ನುವ ಭಾವನೆ ಅನುಭವ ನಮಗೆ ಇವತ್ತಿಗೂ ಸಿಗುತಿಲ್ಲಾ..

    ಶಂಕರ್ ಬರಕನಹಾಲ್

  3. Nice article mama,wish you all the best and am proud of you.

    Nimm doni mulugade sagali endu a devaralli nanna prathane.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?