Friday, March 29, 2024
Google search engine
Homeಜನಮನನಟ ದುರ್ಯೋಧನನ ಒಂದು ಹೃದಯಸ್ಪರ್ಶಿ ಪತ್ರ

ನಟ ದುರ್ಯೋಧನನ ಒಂದು ಹೃದಯಸ್ಪರ್ಶಿ ಪತ್ರ

ಆತ್ಮೀಯರೇ ದಿನಾಂಕ 09-11-2019 ರ ಶನಿವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಕನಕ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಸಂಗೊಳ್ಳಿ ರಾಯಣ್ಣ ಕಲಾ ಬಳಗ ಮತ್ತು ಕನಕ ಯುವಸೇನೆಯ ಸಹಕಾರದೊಂದಿಗೆ ಕುರುಕ್ಷೇತ್ರವೆಂಬ ಪೌರಾಣಿಕ ನಾಟಕ ಪ್ರದರ್ಶನವನ್ನು , ತುಮಕೂರು ನಗರದ ಮಧ್ಯೆ, ನಗರ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ನುರಿತ ಹಿರಿಯ ಕಲಾವಿದರೊಂದಿಗೆ ಹಾರ್ಮೊನಿಯಮ್ ಮಾಸ್ಟರ್ ಪ್ರವೀಣ್ ಎಸ್ (ಪಿಟೀಲು ಮತ್ತು ಕೀ ಬೋರ್ಡ್ ವಾದಕರು) ರವರ ಸಂಗೀತ ನಿರ್ದೇಶನದಲ್ಲಿ ನಾನು ಈ ಭಾರಿಯೂ ಛಲದಂಕಮಲ್ಲ (ಸುಯೋ)ದುರ್ಯೋಧನನ ಪಾತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದೇನೆ.

ಜೀವನದುದ್ದಕ್ಕೂ ಎಲ್ಲರಿಗೂ ತಾವು ಮಾಡುವ ಒಂದಲ್ಲ ಒಂದು ಕೆಲಸದಲ್ಲಿ ಅದರದೇ ಆದ ಧರ್ಮವಿರುತ್ತದೆ.ನಮಗೆ ನಿಮಗೆಲ್ಲ ನಾವು ಮಾಡುವ ವೃತ್ತಿಗೆ ವೃತ್ತಿ ಧರ್ಮವಿರುವ ಹಾಗೆ ಅದನ್ನು ನಾವು ನೀವು ಪಾಲಿಸುವ ಹಾಗೆ ,ರಾಜಾಳ್ವಿಕೆಯಲ್ಲಿ ಪ್ರತಿಯೊಬ್ಬ ರಾಜನಾದವನಿಗೂ ಅವನ ವೃತ್ತಿಗೆ ಸಂಬಂಧಪಟ್ಟಂತಹ ‘ರಾಜಧರ್ಮ’ವೆಂಬುದು ಇರುತ್ತದೆ.

ದುರ್ಯೋಧನನು ಕೂಡ ಮಹಾಭಾರತ ಕಥೆಯ ಅಂತ್ಯದವರೆಗೂ ರಾಜಧರ್ಮವನುಸರಿಸಿ ಆಳ್ವಿಕೆ ನೆಡೆಸಿ ತನ್ನ ವೃತ್ತಿಪರತೆಯನ್ನು ಮೆರೆದು ಜನಮಾನಸದಲ್ಲಿ ಅಜರಾಮರವಾಗಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರ.

ಇಡೀ ಮಹಾಭಾರತದಲ್ಲಿ ಅವನು ಅನಿವಾರ್ಯ ಸಂದರ್ಭವೊಂದರಲ್ಲಿ ಮಾತ್ರ ಅಧರ್ಮದ ಹಾದಿ ತುಳಿದಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಸುಯೋಧನನಾಗಿದ್ದ ಅವನನ್ನು ದುರ್ಯೋಧನನಾಗಿ ಬಿಂಬಿಸಿರುವುದು ಕೂಡ ಸತ್ಯ. ಮೂಲ ಭಾರತದಲ್ಲಿ ಈ ರೀತಿಯ ಅತಿರೇಕದ ಬಿಂಬಿಸಿಲ್ಲದಿರುವುದು ಸ್ವತಃ ಅಧ್ಯಯನಕ್ಕಿಳಿದು ಮಹಾಭಾರತ ತಿಳಿದ ಪ್ರಾಜ್ಞರ ಜೊತೆ ಚರ್ಚೆಗೆ ಬಂದಾಗ ಅವನು ಸುಯೋಧನನೆ ಆಗಿದ್ದದ್ದು ಸ್ಪಷ್ಟ ಅರಿವಿಗೆ ಬಂತು.

ಮಹಾಭಾರತದ ನೀಲವರ್ಣದಾರಿ ಕೃಷ್ಣ ಪರಮಾತ್ಮನ ಸ್ವರೂಪದಲ್ಲಿ ಜಗತ್ತಿಗೆ ಶಾಂತಿ ಸಾರುವಲ್ಲಿ ಶಾಂತಿಯ ಪ್ರತೀಕವಾಗಿದ್ದಾನೆ. ಬರೀ ಯುದ್ಧವೇ ತುಂಬಿಕೊಂಡಿದ್ದ ಜಗತ್ತಿಗೆ ಕಥೆಯ ಮೂಲಕ ಶಾಂತಿ ಸಾರುವ ಪಾತ್ರವೊಂದರ ಅನಿವಾರ್ಯತೆ ಕೂಡ ಕಥೆಗಾರನಿಗೆ ಇತ್ತು. ಅದನ್ನು ಕೃಷ್ಣನ ಪಾತ್ರದ ಮಖೇನ ಪ್ರಸ್ತುತ ಪಡಿಸಿದರು.

ಆದರೆ ಇತ್ತೀಚೆಗೆ ಅವನನ್ನು ಶಾಂತಿ ದೂತನಾಗಿ ನೋಡುವ ದೃಷ್ಟಿ ಬಿಟ್ಟು ಸ್ರೀ ಲೋಲನಂತೆ ಬಿಂಬಿಸುತ್ತಿದ್ದಾರೆ. ನಿಜಕ್ಕೂ ಕೃಷ್ಣ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಆಕರ್ಷಿಸುವಂಥ ನೀಲವರ್ಣವುಳ್ಳ ಲಕ್ಷಣವಂತನಾಗಿದ್ದರಿಂದ ಅಷ್ಟು ಜನ ಸ್ರೀಯರು ಆಕರ್ಷಿತರಾಗುವ ಗುಣವಿತ್ತೆಂಬುದಕ್ಕೆ ಕವಿಗಳು ಹದಿನಾರು ಸಾವಿರವನ್ನು ಕವಿಶೈಲಿಯಲ್ಲಿ ಉತ್ಪ್ರೇಕ್ಷೆ ಯಾಗಿ ಬಳಸಿದ್ದರು ಅಷ್ಟೇ.ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೇಲವೇ ಕೆಲವು ಅರ್ಧಂಬರ್ಧ ಕಥೆ ತಿಳಿದ ಕಲಾವಿದರ ವರ್ಗಗಳು ಅವನನ್ನು ಕೂಡ ಹೆಚ್ಚಿನ ಹೆಣ್ಣುಗಳ ಸಂಗ ಬಯಸುವಂತ ಆಧುನಿಕ ವ್ಯಕ್ತಿಗಳಿಗೆ ಹೋಲಿಸಿಕೊಂಡು ತಾನು ಆ ರೀತಿಯ ಕೃಷ್ಣನೆಂದು ಸ್ವಯಂ ತಿಳಿದು ಅವನಿಗೆ ಸ್ರೀ ಲೋಲ ಪಟ್ಟ ಕಟ್ಟಿ ಆ ಮಟ್ಟಕ್ಕೆ ಆ ಪಾತ್ರವನ್ನು ಇಳಿಸುತ್ತಿರುವುದು ಇತ್ತೀಚಿನ ಒಂದು ರೀತಿಯ ಕೆಟ್ಟ ಬೆಳವಣಿಗೆ.

ಇಂತಹ ಹತ್ತಾರು ಅಂಶಗಳನ್ನು ಅರಿತು ಅವುಗಳನ್ನು ಆಧಾರವಾಗಿಟ್ಟುಕೊಂಡು ಕುರುಕ್ಷೇತ್ರ ಯುದ್ಧ ಕೂಡ ಧರ್ಮ ಅಧರ್ಮದ ನಡುವೆ ನಡೆಯುವ ಯುದ್ಧವಲ್ಲ ಅದು ನಿಜವಾಗಿಯೂ ಧರ್ಮ ಮತ್ತು ರಾಜಧರ್ಮದ ನಡುವೆ ನಡೆಯುವ ಯುದ್ಧವೆಂಬುದನ್ನ ತೋರಿಸಲು ನನ್ನ ಪಾತ್ರದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಕ್ಷತ್ರಿಯರಾಗಿದ್ದರೂ ಕ್ಷತ್ರಿಯರಲ್ಲದವರಂತೆ ನೆಡೆದು ಕೊಂಡು ಧರ್ಮ ಧುರೀಣರೆಂಬ ಪಟ್ಟ ತಂದಿಟ್ಟುಕೊಂಡಿದ್ದ ಪಾಂಡವರು ಮಾತ್ರ ದುರ್ಯೋಧನನ ಕೋಪ ಮತ್ತು ಛಲಕ್ಕೆ ಗುರಿಯಾದರು.ಅವನ ಆಳ್ವಿಕೆಯಲ್ಲಿ ಪ್ರಜೆಗಳ ವಿರುದ್ಧವಾದ ಆಡಳಿತವಿರುವುದು ಎಲ್ಲಿಯೂ ಕೂಡ ದಾಖಲಾಗಿರುವ ಉದಾಹರಣೆಯಿಲ್ಲ.ಅವನದು ಪ್ರಜಾ ಹಿತದೃಷ್ಟಿಯಳ್ಳ ಪ್ರಜಾಕಲ್ಯಾಣ ರಾಜ್ಯವಾಗಿತ್ತು.

ಅದೇನೆ ಇರಲಿ ಒಟ್ಟಾರೆ ನಾಟಕವಾಗಲಿ ಸಿನಿಮಾವೇ ಆಗಲಿ ಕೊನೆಗೊಂದು ಸ್ಪಷ್ಟ ಸಂದೇಶ ಜನರಿಗೆ ತಲುಪಿಸುವಂತಿರಬೇಕು. ಮಹಾಭಾರತವೇ ಆಗಲಿ ರಾಮಾಯಣವೇ ಆಗಲಿ ಮತ್ತೊಂದು ಕಥೆಯಾಗಲಿ ಪ್ರಸ್ತುತ ಸಮಾಜದಲ್ಲಿರುವ ಸನ್ನಿವೇಶಗಳ ಪ್ರತೀಕವಾಗಿರುವುದು ಅಕ್ಷರಶಃ ಸತ್ಯ.

ಈ ನಾಟಕದಲ್ಲಿಯೂ ಸಹ ಕೃಷ್ಣನನ್ನು ನಮ್ಮ ನಿಮ್ಮ ಊರು ಕೇರಿಗಳಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಜಗಳ ತಂದಿಟ್ಟು ದಾಯಾದಿ ಮತ್ಸರ ಮತ್ತಷ್ಟು ಹೆಚ್ಚುವಂತೆ ಮಾಡಿ ತಮಾಷೆ ನೋಡುವವರ ಪ್ರತಿನಿಧಿಯನ್ನಾಗಷ್ಟೇ ಇಟ್ಟುಕೊಂಡು ಇವತ್ತಿನ ಸನ್ನಿವೇಶಕ್ಕೂ ಅನ್ವಯವಾಗುವಂತೆ ಹತ್ತು ಹಲವು ಸಂಭಾಷಣೆಯ ಮೂಲಕ ಇರುವ ಸನ್ನಿವೇಶಗಳನ್ನ ಬಳಸಿಕೊಂಡು ರಂಗು ಗೊಳಿಸಲು ಪ್ರಯತ್ನಿಸಿದ್ದೇನೆ.

ಇಲ್ಲಿ ನೋಡುಗರಿಗೆ ಕೃಷ್ಣನನ್ನು ಮೂದಲಿಸಿದಂತೆ ಕಂಡರೂ ನಾನು ಮೂದಲಿಸಿರುವುದು ಊರುಗಳಲ್ಲಿ ಜಗಳ ತಂದಿಕ್ಕುವ ಕಿಡಿಗೇಡಿಗಳನ್ನ ಎಂಬುದು ಸೂಕ್ಷ್ಮವಾಗಿ ಗಮನಿಸುವವರಿಗೆ ಮಾತ್ರ ತಿಳಿಯುತ್ತದೆ.

ಈ ಹಿಂದಿನ ಮೂರು ಪ್ರದರ್ಶನಗಳಿಗಿಂತ ಮತ್ತಷ್ಟು ಸುಧಾರಿತ ಅಭಿನಯ, ಅಭಿನಯಕ್ಕೆ ತಕ್ಕಂತಹ ಇನ್ನಷ್ಟು ಹೊಸ ಹೊಸ ಪಂಚಿಂಗ್ ಡೈಲಾಗ್ ಗಳನ್ನ ನಾನೇ ಸ್ವತಃ ಬರೆದಿದ್ದೇನೆ. ಹಾಡುಗಾರಿಕೆಯಲ್ಲಿ ತಾಳ ಮತ್ತು ಶೃತಿಯ ಜಾಡನ್ನ ಹಿಡಿದು ಈ ಭಾರಿ ನನ್ನ ಹಿರಿಯ ಹಾಗೂ ಪೂಜ್ಯ ಕಲಾವಿದರ ಸಹಕಾರದೊಂದಿಗೆ ಹಾಡುಗಾರಿಕೆಯಲ್ಲೂ ಪರವಾಗಿಲ್ಲ, ಇನ್ನೂ ಮುಂದಿನ ಅವಕಾಶಗಳಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬಲ್ಲನೆಂಬ ಭರವಸೆಯನ್ನಂತೂ ಖಂಡಿತ ಮೂಡಿಸಿದ್ದೇನೆ.

ಕಳೆದ ಭಾರಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋ ಕ್ಲಿಪ್ ಗಳಿಗೆ ಅಭೂತಪೂರ್ವವಾದ ಬೆಂಬಲ ವ್ಯಕ್ತಪಡಿಸಿದ್ದೀರಿ. 1000 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಮೆಚ್ಚಿ ಮಾಡಿದ್ದೀರಿ. 1800 ಕ್ಕೂ ಹೆಚ್ಚು ಜನ ನನ್ನ ವಿಡಿಯೋ ಕ್ಲಿಪ್ ಗಳನ್ನು ಶೇರ್ ಮಾಡಿಟ್ಟು ಕೊಳ್ಳುವ ಮೂಲಕ ಹೆಚ್ಚು ಪ್ರಚಾರ ಆಗುವಂತೆ ಮಾಡಿದ್ದೀರಿ. ಈ ಫೇಸ್ ಬುಕ್ ನಿಂದ ನನ್ನ ಪಾತ್ರದ ಬಗ್ಗೆ ತೀವ್ರತರವಾದ ಅಭಿಮಾನವನ್ನು ಇಟ್ಟುಕೊಂಡು ಆಗಾಗ ಕರೆ ಮಾಡುವ ಒಂದಷ್ಟು ಜನರ ಅಭಿಮಾನಿ ವರ್ಗವೇ ಸೃಷ್ಟಿಯಾದದ್ದು ನನ್ನ ಹೆಗ್ಗಳಿಕೆ.

ಈ ಅಭೂತಪೂರ್ವ ಪ್ರೋತ್ಸಾಹದಿಂದ ನಾನು ಮತ್ತಷ್ಟು ಉತ್ಸುಕನಾಗಿ ಹೊಸ ಗೆಟಪ್ ನಲ್ಲಿ ಮತ್ತೊಮ್ಮೆ ದುರ್ಯೋಧನ ಅಲ್ಲ ಸುಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.ನನ್ನ ಬಗ್ಗೆ ವಿಶೇಷವಾದ ಅಭಿಮಾನ ತುಂಬಿಕೊಂಡಿರುವ ಹಿತೈಷಿಗಳೇ ಕರೆಯುವಂತೆ ‘ದುರ್ಯೋಧನಂಜಯ’ ಈ ಭಾರಿ ‘ಸುಯೋಧನಂಜಯ’ ನಾಗಿದ್ದೇನೆ.

ಅದು ಹೇಗಿರಬಹುದೆಂಬ ಕುತೂಹಲವಿದ್ದರೆ ನೀವೇ ಖುದ್ದಾಗಿ ಬನ್ನಿ, ವೀಕ್ಷಿಸಿ.. ಫೇಸ್ ಬುಕ್ ನಲ್ಲಿನ ಎಲ್ಲಾ ಫ್ರೆಂಡ್ಸ್ಗಳ ಮೊಬೈಲ್ ಸಂಖ್ಯೆ ಇಲ್ಲವಾದ್ದರಿಂದ ಖುದ್ದಾಗಿ ಕರೆ ಮಾಡಿ ಕರೆಯಲಾಗುತ್ತಿಲ್ಲ.ಇದನ್ನೇ ಆಹ್ವಾನ ಪತ್ರಿಕೆ ಯೆಂದು ತಿಳಿದು ಸಕಾಲಕ್ಕೆ ಆಗಮಿಸಿ ಪಾತ್ರದ ಯಶಸ್ವಿಗೆ ಮನ ತುಂಬಿ ಹಾರೈಸಿ ನನ್ನ ಮನಸ್ಸಂತೋಷ ಪಡಿಸಬೇಕಾಗಿ ತಮ್ಮಲ್ಲಿ ಪ್ರಾರ್ಥನೆ…

ಇಂತಿ ನಿಮ್ಮ ಸುಯೋಧನಂಜಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?