ಅದು ತುಮಕೂರು ಹೊರವಲಯದ ರಿಂಗ್ ರಸ್ತೆ. ಸ್ನೇಹಿತರನ್ನು ನೋಡಲು ಹೋಗಿದ್ದ ನಟ ಹನುಮಂತೇಗೌಡರು ರಸ್ತೆಯ ಪಕ್ಕದಲ್ಲೇ ನಿಂತಿದ್ದರು. ಬೈಕ್ ಬೇರೆ ತಕ್ಕೊಂಡು ಹೋಗಿರಲಿಲ್ಲ. ಜೊತೆ ಇದ್ದ ಸ್ನೇಹಿತರೂ ಇರಲಿಲ್ಲ. ಆಟೋಗಳ ಓಡಾಟವೂ ಆ ಭಾಗದಲ್ಲಿ ಇರುವುದಿಲ್ಲ.ಹಾಗಾಗಿ ಸಿಟಿ ಬಸ್ ಬರಬಹುದೆಂದು ಕಾಯುತ್ತಿದ್ದರು. ಆಗಲೇ ಏಳು ಗಂಟೆ, ಒಬ್ಬರೇ ನಿಲ್ಲುವುದೆಂದರೆ ಕಷ್ಟದ ಸಂಗತಿ. ಜೊತೆಯಲ್ಲಿ ಯಾರಾದರೂ ಇದ್ದರೆ ಮಾತುಕತೆ ಆಡಬಹುದಿತ್ತು.ಆದರೆ ಅಂಥ ಅವಕಾಶಕ್ಕೆ ಎಡೆ ಇರಲಿಲ್ಲ.
ಏನು ಮಾಡುವುದೆಂದು ಅಲೋಚಿಸುತ್ತಿರುವಾಗಲೇ ವಾಹನವೊಂದು ಇವರತ್ತ ಬಂದಿದೆ. ಅದು ಬರಬೇಕಾಗಿದ್ದುದು ಅದೇ ಮಾರ್ಗದಲ್ಲಿ ರಾತ್ರಿ 7 ಗಂಟೆ ನಿತ್ಯವೂ ಸಂಚರಿಸುವ ವಾಹನ. ಅಂಥ ವಾಹನ ಬಂದುದನ್ನು ಹನುಮಂತೇಗೌಡರು ನೋಡಿದರು. ಬಸಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದರು. ಯಾವುದೋ ವಾಹನವಿರಬಹುದು ಎಂದು ಸುಮ್ಮನಿದ್ದರು. ಆ ಬಸಲ್ಲಿದ್ದ ಮಹಿಳೆಯರು ಇವರನ್ನು ನೋಡಿದರು. ಆ ವಾಹನವೂ ನಿಂತಿತು. ಅಣ್ಣ ನಿಮ್ಮನ್ನು ನೋಡಿದ್ದೇವೆ. ನಿಮ್ಮ ಪರಿಚಯ ನಮಗೆ ಇದೆ. ನೀವು ಸೀರಿಯಲ್ ಮತ್ತು ಸಿನಿಮಾದಲ್ಲಿ ಆಕ್ಟ್ ಮಾಡುತ್ತೀರ ಅಲ್ಲವೇ? ಬನ್ನಿ ಅಣ್ಣ ಬಸ್ ಹತ್ತಿ, ನಾವು ಸಿಟಿಗೆ ಹೋಗುತ್ತಿದ್ದೇವೆ. ನಿಮ್ಮನ್ನು ಅಲ್ಲಿವರೆಗೂ ಬಿಡುತ್ತೇವೆ ಅಂದರು.
ಸರಿ, ಇವರಿಗೂ ಹೋಗಲು ಬೇರೆ ಮಾರ್ಗವಿಲ್ಲ. ಬಸ್ ಹತ್ತಿದರು. ಅವರ ನಟನೆ ಬಗ್ಗೆ ಚರ್ಚೆಯೂ ನಡೆಯಿತು. ಹನುಮಂತೇಗೌಡರಿಗೆ ಇವರೆಲ್ಲ ಗಾರ್ಮೆಂಟ್ಸ್ ಫ್ಯಾಕ್ಟರಿಯ ಹೆಣ್ಣು ಮಕ್ಕಳೆಂಬುದ ಖಚಿತವಾಯಿತು. ಕೂಡಲೇ ಗೌಡರು ಕೇಳಿದರು. ‘’ಹೇಗಿದೆ ಕೆಲಸ? ಸಂಬಳ ಸರಿಯಾಗಿ ಕೊಡ್ತಾರ?’ ಎಂದರು.
ಮಹಿಳೆಯರು ಒಬ್ಬೊಬ್ಬರೇ ಹೇಳುತ್ತಾ ಹೋದರು. ಅಣ್ಣಾ ಬೆಳಗ್ಗೆ ಹೋಗಿ ಸಂಜೆ ಬರುತ್ತೇವೆ. ದಿನಾನು ಇಷ್ಟೊತ್ತು ಆಗುತ್ತೆ ಬೆಳೆಗ್ಗೆ ಕೆಲಸಕ್ಕೆ ಹೋದೋರು ಮತ್ತೆ ಕೆಲಸಕ್ಕೆ ಹೋಗ್ತೀವೋ ಇಲ್ಲವೋ ಅನ್ನೋ ಸ್ಥಿತಿ ಐತೆ. ಇವರು ಕೊಡೋ ಏಳೆಂಟು ಸಾವಿರದಲ್ಲಿ ಜೀವನ ಸಾಗಿಸ್ಬೇಕು. ಮಕ್ಕಳನ್ನು ಓದಿಸ್ಬೇಕು. ಕಷ್ಟ ಐತೆ ಕಣಣ್ಣಾ, ನಮ್ ಕೆಲ್ಸ ಗ್ಯಾರೆಂಟಿನೇ ಇಲ್ಲ. ಯಾವಾಗ ಬೇಕಾದ್ರೂ ತಗೀಬೌದು. ನಮ್ ಕಷ್ಟ ಯಾರಿಗೆ ಹೇಳನಾ?
ಇಲ್ಲಿ ಕೆಲ್ಸ ಬಿಟ್ಟು ಊರಿಗೆ ಹೋಗಿ ಬದ್ಕೋದುಂಟಾ ಅಣ್ಣಾ. ಆಲ್ಲಿ ಏನ್ ಕೆಲ್ಸ ಐತೆ. ಅಲ್ಲೋದ್ರೆ ಆಡ್ಕಳ್ಳಲ್ವಾ? ಊರಿಗೆ ಹೋದ್ರ ಮಕ್ಕಳನ್ನು ಓದ್ಸೋದು ಹೆಂಗೆ, ಕಷ್ಟಾನೋ ಸುಖಾನೋ ಇಲ್ಲೇ ಇರ್ತೀವಣ್ಣ. ಹೆಂಗೋ ಬದ್ಕು ಸಾಗಿಸ್ತೇವೆ ಎಂದು ಗೋಳು ತೋಡಿಕೊಂಡರು.