ದೇವರಹಳ್ಳಿ ಧನಂಜಯ
ನಾ,
ಗರಿಬಿಚ್ಚಿದ ನವಿಲು.
ಬೆನ್ನ ಹಿಂದೆ ಅಗಣಿತ ಕಣ್ಣುಗಳು.
ದೃಷ್ಟಿಯೂ ಇಲ್ಲ ದಾರಿಯೂ ಇಲ್ಲ.
ಮೋದ ಮೊದಲು,
ಎದೆಯಲ್ಲಿ, ರಾಗ ಪಲ್ಲವಿಸಿದಾಗ,
ಗರಿಗೆದರುತ್ತಿದ್ದೆ.
ಝುಂ! ಎನುವ ಮೈ ಪುಳಕಕ್ಕೆ.
ಇಳೆಗಿಳಿವ ಮಳೆ,
ಮೊಳೆವ ಚಿಗುರು,
ಇಳಿ ಸಂಜೆಯ ಸೂರ್ಯನ ತಂಪು,
ಖುಷಿಗೆ ಇಂಬು ಕೊಡುತ್ತಿದ್ದವು.
ಆಗ ನಾನು
ಸಂಭ್ರಮಕ್ಕೆ ಸರದಾರ.
ಲೋಕಕೆ ಕೈ ಚಾಚಿದ. ಬಣ್ಣದ
ಕನಸ ಗರಿಗಳು. ಭಾರವಾಗುತ್ತಿರಲಿಲ್ಲ.
ಕುಣಿವ ನವಿಲಿಗೆ
ನಿಲುವುಗನ್ನಡಿ ಇಟ್ಟು,
ಕಣ್ಣ ನೋಟವ ಕೊಂದುಬಿಟ್ಟರು.
ಉಳಿದದ್ದು ಖುಷಿಯ ಹುಸಿಗಂಟು.
ಗರಿ ಉದುರುತ್ತಿವೆ,
ಕಾಲು ಸೋಲುತ್ತಿವೆ,
ಆದರೂ ಕುಣಿಯಲೇ ಬೇಕು.
ಲೋಕದ ತೇವುಲಿಗೆ, ಮೂರೋತ್ತು.
ನನಗೆ ಗೊತ್ತು.
ಉದುರಿದ ಗರಿ, ಈಗ ಅಲಂಕಾರಿಕ ವಸ್ತು.
ನಾನೀಗ ಪುಕ್ಕವಿಲ್ಲದ ನವಿಲು.
ಕನಸು ಬತ್ತಿದ ಕಡಲು.