Tumkuru: ಕೊರೊನ ನಿಗ್ರಹಿಸಲು ಜಿಲ್ಲಾದ್ಯಂತ ಲಾಕ್‍ಡೌನ್ ಹಾಗೂ ಕರ್ಪ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಖಾಸುಮ್ಮನೆ ತಿರುಗಾಡುವವರ ಚಲನ-ವಲನವನ್ನು ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೊನ ವಂಶಿಕೃಷ್ಣ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ಕರ್ಪ್ಯೂ ಜಾರಿಯಲ್ಲಿರುವುದರಿಂದ ಸರ್ಕಾರದ ಆದೇಶದನ್ವಯ ನಾಗರಿಕರು ಮನೆಯಿಂದ ಹೊರಗಡೆ ಅನಾವಶ್ಯಕವಾಗಿ ತಿರುಗಾಡಬಾರದು. ಅನಗತ್ಯವಾಗಿ ಹೊರಗಡೆ ಓಡಾಡುವರನ್ನು ತಡೆಯುವ/ಪ್ರಶ್ನಿಸುವ/ವಾಪಸ್ ಕಳುಹಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇರುತ್ತದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪಾಲಿಸದ ವ್ಯಕ್ತಿಗಳನ್ನು ಕಾನೂನಿನಡಿ ಬಂಧಿಸಬಹುದಾಗಿದೆ.
ದ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ದೃಶ್ಯಗಳನ್ನು ಕಂಟ್ರೋಲ್ ರೂಂನಲ್ಲಿ ಕುಳಿತು ಪರಿಶೀಲಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆದೇಶ ಪಾಲಿಸದ ವ್ಯಕ್ತಿಗಳ ವಿರುದ್ಧ ಸೆಕ್ಷನ್ 188, 270, 269 ಹಾಗೂ 271 ಐಪಿಸಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾರಗೃಹವಾಸ ವಿಧಿಸುವ ಅವಕಾಶವಿದೆ. ನಾಗರಿಕರು ಮನೆಯಲ್ಲಿಯೇ ಇರುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.