Thursday, April 25, 2024
Google search engine
Homeಪೊಲಿಟಿಕಲ್ವಿಧಾನಪರಿಷತ್ ಗೆ ಎಸ್ ಪಿಎಂ ತೆರೆಮರೆ ಪ್ರಯತ್ನ

ವಿಧಾನಪರಿಷತ್ ಗೆ ಎಸ್ ಪಿಎಂ ತೆರೆಮರೆ ಪ್ರಯತ್ನ

Publicstory.in


ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧವೇ ತೊಡೆತಟ್ಟಿ ಭಾರೀ ಸದ್ದುಗದ್ದಲ ಎಬ್ಬಿಸಿದ ಆಗಿನ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಈಗ ರಾಜಕೀಯ ಆಶ್ರಯಯಕ್ಕಾಗಿ ಅಲೆದಾಟ ಆರಂಭಿಸಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಲು ತೆರೆಮರೆ ಪ್ರಯತ್ನ ಆರಂಭಿಸಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ವರಿಷ್ಠರ ಮೇಲೆ ಪ್ರಭಾವ ಬೀರಿಸಿ ಅಧಿಕಾರ ಹಿಡಿಯಲು ಮೂರು-ನಾಲ್ಕು ತಿಂಗಳಿಂದ ಸತತ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯ ಸಭೆಗೆ ಆಯ್ಕೆ ಮಾಡುವಂತೆ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಮೂಲಕ ಪ್ರಯತ್ನ ನಡೆಸಿ ಹಿನ್ನಡೆ ಅನುಭವಿಸಿದರು.

ಜಿಲ್ಲೆಯ ಚಾಣಾಕ್ಷ ರಾಜಕಾರಣಿಗಳಲ್ಲಿ ಎಸ್.ಪಿ.ಮುದ್ದಹನುಮೇಗೌಡ ಕೂಡ ಒಬ್ಬರು. ಬಿಜೆಪಿ ಸಂಸದ ಜಿ.ಎಸ್,ಬಸವರಾಜ್, ಎಸ್.ಪಿ.ಮುದ್ದಹನುಮೇಗೌಡ ಇಬ್ಬರೂ ಕಾಂಗ್ರೆಸ್ ನಲ್ಲಿದ್ದವರೇ? ಇಬ್ಬರ ರಾಜಕೀಯದಾಟ ಈಗ ಗುಟ್ಟಾಗಿಯೇನು ಉಳಿದಿಲ್ಲ. ರಾಜಕೀಯ ಪಟ್ಟುಗಳನ್ನು ಹಾಕುವಲ್ಲಿ ಇಬ್ಬರೂ ನಿಸ್ಸೀಮರು. ಈಗ ಇದು ಇಲ್ಲಿ ಅಪ್ರಸ್ತುತ.

ಲೋಕಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ಕೊಡಲಿಲ್ಲ. ನಾನು ಬಲಿಪಶುವಾದೆ ಎಂಬ ಕರುಣೆಯ ಮಂತ್ರವನ್ನು ಅವರೀಗ ತೂರಿ ಬಿಡುತ್ತಿದ್ದಾರೆ. ಇದೇ ಆಧಾರದಲ್ಲಿ ರಾಜ್ಯಸಭೆಗೆ ಹೋಗುವ ಕನಸು ಕಂಡಿದ್ದ ಅವರಿಗೆ ನಿರಾಸೆಯಾಯಿತು. ಇವರು ಕರುಣೆಯ ತಂತ್ರ ದೆಹಲಿಯನ್ನು ಮುಟ್ಟಲೂ ಇಲ್ಲ ಎಂಬುದು ಬೇರೆ ಮಾತು.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಸೀಟು ನೀಡಿದೆ. ಮತ್ತೇ ದೇವೇಗೌಡರಿಗೆ ಬೆಂಬಲ ನೀಡಿದೆ. ಜೆಡಿಎಸ್ ಬೆಂಬಲದೊಂದಿಗೆ ತಮಗೆ ಅವಕಾಶ ಮಾಡಿಕೊಡಬೇಕು ಎಂಬುದು ಎಸ್ಪಿಎಂ ಮನದಾಸೆ ಆಗಿತ್ತು. ಆದರೆ ರಾಜಕೀಯದಲ್ಲಿ ಇದಕ್ಕೆ ಅವಕಾಶ ಇಲ್ಲವಲ್ಲ?

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ವಿರೋಧಿಸುವ ಮೂಲಕ ಪರೋಕ್ಷವಾಗಿ ಆಗಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ವಿರುದ್ಧವೇ ಮುದ್ದಹನುಮೇಗೌಡ ಅವರು ತೊಡೆ ತಟ್ಟಿದರು. ಕಾಂಗ್ರೆಸ್ ನ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರೊಂದಿಗೆ ಸೇರಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಯತ್ನ ನಡೆಸಿ ಅಲ್ಲಿಂದ ಹಿಂದೆ ಸರಿದರು. ಚುನಾವಣಾ ಪ್ರಚಾರ ಕಣದಲ್ಲೂ ಕಾಣಿಸಿಕೊಳ್ಳಲಿಲ್ಲ.

ದೇವೇಗೌಡರನ್ನು ಗೆಲ್ಲಿಸಬೇಕು ಎಂದು ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೂ ಬೆಲೆ ಕೊಡಲಿಲ್ಲ. ಇದಾದ ಬಳಿಕ ಪರಮೇಶ್ವರ್ ಅವರನ್ನು ವಾಚಾಮಗೋಚರ ಹೀಯಾಳಿಸುವ ರಾಜಣ್ಣ ಅವರೊಂದಿಗೆ ಮುದ್ದಹನುಮೇಗೌಡ ಅವರು ಹೆಚ್ಚೆಚ್ಚು ಗುರುತಿಸಿಕೊಳ್ಳುತ್ತಿದ್ದಂತೆ ಪರಮೇಶ್ವರ್ ಅವರು ತಮ್ಮ ಅಂಗಳದಿಂದ ಅವರನ್ನು ಕೈಬಿಟ್ಟರು ಎನ್ನುತ್ತಾರೆ ಪರಮೇಶ್ವರ್ ಅವರ ಆಪ್ತರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪ್ರಹಸನದಿಂದ ರಾಜಕೀಯದಿಂದಲೇ ಮೂಲೆಗುಂಪಾಗಿದ್ದ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಗೆ ಕರೆತಂದು ಕಳೆದ‌ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜ್ ವಿರುದ್ಧ ಗೆಲ್ಲಿಸುವ ಮೂಲಕ ಜಿಲ್ಲೆಯ ರಾಜಕೀಯ ತಂತ್ರಗಾರಿಕೆಯನ್ನೇ ಪರಮೇಶ್ವರ್ ಬದಲಾಯಿಸಿದ್ದರು. ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೊಡದಿದ್ದರೆ ವಿಷ ಕುಡಿಯುವುದಾಗಿ ರಾಹುಲ್ ಗಾಂಧಿ ಮುಂದೆ ಅವರು ಹೇಳಿದ ಮಾತುಗಳು ಈಗ ಗುಟ್ಟಾಗೇನು ಉಳಿದಿಲ್ಲ. ಪರಮೇಶ್ವರ್ ಆಗ ಪಟ್ಟು ಸಡಿಲಿಸಿದ್ದರೆ ಕಾಂಗ್ರೆಸ್ ನಲ್ಲಿ ಜಿಲ್ಲೆಯ ರಾಜಕಾರಣ ಈಗ ಬೇರೆಯೇ ಇರುತ್ತಿತ್ತು.

ಚುನಾವಣೆಯ ನಂತರ ಪರಮೇಶ್ವರ್ ಅವರೊಂದಿಗೆ ಮುದ್ದಹನುಮೇಗೌಡ ಉತ್ತಮ ಸಂಬಂಧವನ್ನೇ ಪಾಲಿಸಿದರು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ್ ಅವರ ಗೆಲುವಿಗೆ ತಂತ್ರರೂಪಿಸಿದವರಲ್ಲಿ ಮುದ್ದಹನುಮೇಗೌಡ ಅವರೂ ಇದ್ದರು. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ ಬಿಜೆಪಿ, ಜೆಡಿಎಸ್ ನ ಹಲವು ನಾಯಕರ ವಿಶ್ವಾಸ ಕಳೆದುಕೊಂಡರು.

ಮುದ್ದಹಮುನೇಗೌಡರ ಗೆಲುವಿಗೆ ಜೆಡಿಎಸ್, ಬಿಜೆಪಿ ನಾಯಕರ ಹಿಂಬದಿ ಸಹಕಾರವೇ ಕಾರಣವಾಗಿತ್ತು. ಇದೇ ತಂತ್ರ ಈ ಸಲ ಸಂಸದ ಜಿ.ಎಸ್.ಬಸವರಾಜ್ ತಮ್ಮ ಗೆಲುವಿಗೆ ಬಳಸಿಕೊಂಡರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಅವರೊಂದಿಗೆ ಇರುವವರು. ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರೊಂದಿಗೆ ಸಿದ್ದರಾಮಯ್ಯ ಎಂತಹ ಸಂಬಂಧ ಉಳಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ತುಮಕೂರು ಜಿಲ್ಲೆಯಲ್ಲಿ ಮಳೆಗಾಲ, ಮುಂಗಾರಿನಲ್ಲೂ ಹೇಮಾವತಿ ನೀರು ಹರಿದುಹೋಗುತ್ತಿರುವಂತೆ ಜಿಲ್ಲೆ, ರಾಜ್ಯದ ರಾಜಕೀಯದಲ್ಲೂ ನೀರು ಹರಿದು ಹೋಗುತ್ತಿದೆ.

ರಾಜ್ಯಸಭೆಯಲ್ಲಿ ಸೀಟು ಸಿಗದಿದ್ದರೂ ಪರ್ವಾಗಿಲ್ಲ, ರಾಜ್ಯದ ವಿಧಾನಸಭೆಯಲ್ಲಿ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅತ್ತ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ಕೆಲಸವನ್ನು ಮುದ್ದಹನುಮೇಗೌಡ ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಸೀಟು ಕಿತ್ತುಕೊಂಡ ಕಾರಣಕ್ಕಾಗಿಯಾದರೂ ಅವರಿಗೆ ವಿಧಾನಪರಿಷತ್ ಗೆ ಅವಕಾಶ ಸಿಗಲಿದೆ ಎಂದು ಮುದ್ದಹನುಮೇಗೌಡ ಅವರ ಆಪ್ತರು ಹೇಳುತ್ತಿದ್ದಾರೆ.

ನಮ್ಮ ಸಾಹೇಬರ ಮುಂದೆಯೇ ಮೀಸೆ ತಿರುವಿದರು. ಮುದ್ದಹನುಮೇಗೌಡರು ವಿಧಾನ ಪರಿಷತ್ ಗೆ ಹೋಗಲು ಕೆಪಿಸಿಸಿ ಅಧ್ಯಕ್ಷರು, ಪರಮೇಶ್ವರ್ ಅವರು ಅವಕಾಶ ನೀಡುವುದಿಲ್ಲ. ಕೆ.ಎನ್.ರಾಜಣ್ಣ ಅವರ ಕಾರಣದಿಂದ ಸಿದ್ದರಾಮಯ್ಯ ಒಂದೆರಡು ಸಲ ಹೆಸರು ಹೇಳಬಹುದು ಅಷ್ಟೇ. ಇದರಿಂದ ಏನೇನು ಪ್ರಯೋಜನ ಆಗದು ಎನ್ನುತ್ತಾರೆ ಪರಮೇಶ್ವರ್ ಅವರ ಆಪ್ತರು.

ಏನೇ ಆಗಲೀ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಜಿಲ್ಲೆಯ ರಾಜಕಾರಣದಲ್ಲಿ ಅನೇಕ ಬದಲಾವಣೆಗಳ ನಿರೀಕ್ಷೆಯಲ್ಲಿ ಜನರು ಇದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಹೀಗೆ ಎರಡೂ ಪಕ್ಷಗಳಲ್ಲೂ ತಳಮಳ ಉಂಟು ಮಾಡುತ್ತಿದ್ದಾರೆ ಶಿವಕುಮಾರ್.

ಯಾರ ಟವೆಲ್, ಯಾರ ಹೆಗಲ ಮೇಲೆ ಹೋಗಿ ಬೀಳಲಿದೆ ಎಂದು ಹೇಳಲು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.

ರಾಜಕಾರಣ ಏನೇ ಇರಲಿ, ಸಜ್ಜನ ಎಂದು ಜನರಿಂದ ಬಿರುದು ಪಡೆದಿರುವ ಮುದ್ದಹನುಮೇಗೌಡ ಅವರನ್ನು ವಿಧಾನ ಪರಿಷತ್ ಗೆ ಕಳಿಸುವುದು ಒಳ್ಳೆಯದೇ ಸರಿ.

ಜಿಲ್ಲೆಯಲ್ಲಿ ತೆಂಗು, ಕೊಬ್ಬರಿ ಕುರಿತು ಮಾತೇ ಆಡದೇ ಸೊರಗಿ ಸೋರೆಕಾಯಿಯಂತಾಗಿದ್ದ ಇಲ್ಲಿಯ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ತೆಂಗು, ಕೊಬ್ಬರಿಯ ಬಗ್ಗೆ ಮಾತನಾಡದೇ ಹೋದರೆ ವಿಧಿ ಇಲ್ಲ. ಜನರು ಸೋಲಿಸಿ ಬಿಡುತ್ತಾರೆ ಎಂಬ ಸಂದಿಗ್ಧ ಸ್ಥಿತಿಯನ್ನು ರೂಪಿಸಿದ ಜಿಲ್ಲೆಯ ಮೊದಲ ರಾಜಕಾರಣಿ ಮುದ್ದಹನುಮೇಗೌಡರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯಾದರೂ ಅವರು ವಿಧಾನಪರಿಷತ್ ಮೆಟ್ಟಿಲು ಹತ್ತಬೇಕಾಗಿದೆ.

ಆದರೆ ಇದೊಂದೇ ಕಾರಣದಿಂದ ರಾಜಕಾರಣ ನಡೆಯುತ್ತದೆಯೇ? ಹಲವು ತಪ್ಪುಗಳಿಗೆ ಏನುತ್ತರ, ಪ್ರತಿಫಲ ಎಂಬ ಪ್ರಶ್ನೆಗಳಿಗೆ ಮುದ್ದಹನುಮೇಗೌಡರೇ ಉತ್ತರಿಸಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?