ತುಮಕೂರು ಲೈವ್

ಪ್ರಧಾನಿ ಮಾತಿಗೂ ಕಿವಿಗೊಡದ ಜನರು; ಇಲ್ಲಿಗೆ ಮುಗಿಬಿದ್ದದ್ದು ಏಕೆ…

Publicstory. in


Tumkuru: ಕರೊ‌ನಾ ವೈರಸ್ ದಿನದಿಂದ ದಿ‌ನ ತನ್ನ ಕಬಂಧ ಬಾಹು ಚಾಚುತ್ತಲೇ ಹೋದರು, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ನಟರು, ವೈದ್ಯರುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೈಮುಗಿದು ಬೇಡುತ್ತಿದ್ದರೂ ಜಿಲ್ಲೆಯ ಹಳ್ಳಿ, ಪಟ್ಟಣಗಳಲ್ಲಿ ಜನರು ಕ್ಯಾರೆ ಎನ್ನುತ್ತಿಲ್ಲ.

ಜಿಲ್ಲೆಯ ಹಲವು ಗ್ರಾಮಗಳಲ್ಲಿ‌ನ ತೋಟಗಳು ವರ್ಷ ತೊಡಕಿನ ಹಬ್ಬದೂಟಕ್ಕಾಗಿ ತಾತ್ಕಾಲಿಕ ವಧಾಗಾರಗಳಾಗಿದ್ದವು. ಮಾಂಸಂಗಡಿಗಳು ಬಾಗಿಲು ಮುಚ್ಚಿಸಿದ್ದ ಕಾರಣ ಹಳ್ಳಿಗಳ ತೋಟಗಳಲ್ಲಿ ಮೇಕೆ, ಕುರಿಗಳನ್ನು ಕುಯ್ದು ಮಾರಾಟ ಮಾಡುತ್ತಿದ್ದದ್ದು ಬೆಳಿಗ್ಗೆ ಸಾಮಾನ್ಯವಾಗಿತ್ತು.

ಮಾಂಸ ಖರೀದಿಸಲು ಜಬಜಂಗುಲಿಯೇ ಕಂಡು ಬರುತ್ತಿತ್ತು. ಸಾಮಾಜಿಕ‌ ಅಂತರವೇನು ಎಂಬುದನ್ನೇ ಗೊತ್ತಿಲ್ಲದ ಅವಿವೇಕಿಗಳಂತೆ, ಎಂದೂ ಬಾಡನ್ನೇ ನೋಡದ ಅಸಂಸ್ಕೃತರಂತೆ ಕೆಲವು ಮಂದಿ ನೂಕು ನುಗ್ಗಲಿನ ಖರೀದಿಯಲ್ಲಿ ತೊಡಗಿದ್ದು ಹಳ್ಳಿಯೊಂದರಲ್ಲಿ ಕಂಡು ಬಂತು.

ಇದೇ ಹಳ್ಳಿಗಳಲ್ಲೇ ಕೆಲವರು ಸಾಮಾಜಿಕ ಅಂತರ ಕಾದುಕೊಂಡವರು ಇದ್ದಾರೆ. ಕೆಲವೇ ಮಂದಿ ಸಾಮಾಜಿಕ ಅಂತರ ಕಾಪಾಡಿಕೊಂಡು ಉಳಿದವರು ಕಾಪಾಡದಿದ್ದರೆ ಏನು ಪ್ರಯೋಜನ. ಪೊಲೀಸರು ಕಣ್ಗಾವಲು ವ್ಯವಸ್ಥೆ ಮಾಡುವುದೇ ಒಳ್ಳೆಯದು ಎಂದು ಒಂದಿಬ್ಬರು ಹೇಳಿದರು.

ನಗರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೆಚ್ಚು ಗಮನ ಕೊಡುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಳ್ಳಿಗಳಲ್ಲೂ ಜಾಗೃತಿ ಮೂಡಿಸುವ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಇದಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯರನ್ನು ಬಳಸಿಕೊಂಡು ಅವರ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಬೇಕಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಹೇಳಿದರು.

Comment here