Friday, May 31, 2024
Google search engine
Homeತುಮಕೂರು ಲೈವ್ಬಡವರಲ್ಲಿ ಮನೆಯ ಕನಸು ತುಂಬಿದ ಗೋಪಾಲಯ್ಯ ಮೇಷ್ಟ್ರು ಇನ್ನಿಲ್ಲ…

ಬಡವರಲ್ಲಿ ಮನೆಯ ಕನಸು ತುಂಬಿದ ಗೋಪಾಲಯ್ಯ ಮೇಷ್ಟ್ರು ಇನ್ನಿಲ್ಲ…

ತುಮಕೂರು: ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಜನರಿಗೆ ಗೋಪಾಲಯ್ಯ ಮೇಷ್ಟ್ರು ಎಂದರೆ ತಕ್ಷಣ ನೆನಪಿಗೆ ಬರುವುದು ಮನೆಯ ಕನಸು.

ಗೋಪಾಲಯ್ಯ ಮೇಷ್ಟ್ರು (85) ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ದಿನಾಂಕ 24/4/2021) ಇನ್ನಿಲ್ಲವಾದರು. ಭಾನುವಾರ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರನ್ನು ನೆನಪಿಸಕೊಂಡರೆ ಸಾಕು ಅವರ ಮನೆಯ ಮುಂದೆ ನಿಲ್ಲುತ್ತಿದ್ದ ಶೂದ್ರ, ಬಡ ಜನರ ಮುಖಗಳೇ ನೆನಪಾಗುತ್ತವೆ.

ಮಧುಗಿರಿಯ ಹನುಮನಹಳ್ಳಿಯವರಾದ ಗೋಪಾಲಯ್ಯ ಅವರು ವೃತ್ತಿಯಲ್ಲಿ ಶಿಕ್ಷಕರು. ಪಾವಗಡ-ಆಂಧ್ರ ಗಡಿಗೆ ಅಂಟಿಕೊಂಡಿದ್ದ ಕುಗ್ರಾಮವೊಂದರಿಂದ ವೃತ್ತಿ ಆರಂಭಿಸಿದ ಅವರು ಜ್ಯೋತಿಷ ಕಲಿತು ಅದರಲ್ಲಿ ಸಾಧಿಸಿದ ಪ್ರವೀಣತೆ ಅಗಾಧ. ಅವರ ಮಗನ ಸಾವಿನ ದಿನವನ್ನು ಅವರೇ ಬರೆದಿದ್ದರು. ಅದೇ ರೀತಿ ಘಟಿಸಿದಾಗ ಹೆಂಡತಿಗೆ ಮಾತು ಕೊಟ್ಟು ಜಾತಕ ಬರೆಯುವುದನ್ನು ಬಿಟ್ಟರು. ಆದರೆ ಬಡವರ ಮನೆಯ ಕನಸುಗಳ ಜತೆ ಕೈ ಜೋಡಿಸಿದರು.

ಮಧುಗಿರಿಯಲ್ಲಿ ಹರಿಯುತ್ತಿದ್ದ ನದಿ ಹಾಗೂ ಹುಲಿಯೊಂದರ ಭೇಟಿಯ ಬಗ್ಗೆ ಮಾಹಿತಿ ಖಚಿತಪಡಿಸಿದ್ದು ಅವರೇ. ಪ್ರಜಾವಾಣಿಯಲ್ಲಿ ನಮ್ಮೂರು ನಮ್ಮ ಹೆಮ್ಮೆಯಲ್ಲಿ ಬರೆದಿದ್ದ ಮಧುಗಿರಿಯಲ್ಲಿ ಹುಲಿಯ ಜಾಡು ಲೇಖನ ಓದಿ ಕರೆ ಮಾಡಿದವರು. ಅವರು ಏಳನೇ ತರಗತಿಯಲ್ಲಿದ್ದಾಗ ಗ್ರಾಮದ ಪಟೀಲರು ಹುಲಿಯನ್ನು ಭೇಟಿಯಾಡಿ ಅದನ್ನು ಊರೂರಲ್ಲಿ ಮೆರವಣಿಗೆ ಮಾಡಿದ ಬಗ್ಗೆ ತಮ್ಮಲ್ಲಿದ್ದ ನೆನಪುಗಳನ್ನುಹಂಚಿಕೊಂಡಿದ್ದರು. ಅವರ ಬಗ್ಗೆ ಬರೆಯಲು ಇದಲ್ಲ ಕಾರಣ, ಬೇರೇಯದೆ ಇದೆ.

ಮೇಷ್ಟ್ರಾಗಿದ್ದ ಅವರು ಗ್ರಾಮಕ್ಕೆ ನಡೆದು ಹೋಗುವಾಗ ಬ್ರಾಹ್ಮಣರ ಮನೆಯ ಮುಂದೆ ದೂರದಲ್ಲಿ ಪ್ರಾಣಿಗಳಂತೆ ನಿಲ್ಲುತ್ತಿದ್ದ ಬಡ ಜನರ ಸಾಲು, ಬಿರುಬಿಸಿಲಿನಲ್ಲೂ ಕಾದು-ಕಾದು ಹೋಗುವುದನ್ನು ಪ್ರತಿ ದಿನ ಬೆಳಿಗ್ಗೆ ಸಂಜೆ ನೋಡುತ್ತಿದ್ದರು. ಒಮ್ಮೆ ಅಲ್ಲಿದ್ದವರೊಬ್ಬರನ್ನು ಕೇಳಿದರು.

ಮನೆ ಕಟ್ಟಲು ಆಯ ಮಾಡಿಸಬೇಕು. ಹೆಸರು ಬಲ ಕೇಳಬೇಕು. ಆದರೆ ಸ್ವಾಮ್ಯೋರು ಹೇಳೋದೆ ಇಲ್ಲ. ಒಂದು ತಿಂಗಳಿನಿಂದ ತಿರುಗುತ್ತಿದ್ದೇನೆ ಎಂದು ಹೇಳಿದ ಮಾತು ಕೇಳಿ ನೊಂದರು. ಅವೊತ್ತೇ ನಿರ್ಧಾರ ಮಾಡಿದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಆಂಧ್ರಕ್ಕೆ ಹೋಗಿ ಅಲ್ಲಿ ಜ್ಯೋತಿಷ ಕಲಿತರು. ಆಯ ಮಾಡುವುದನ್ನು, ಜತೆಗೆ ಮನೆಗೆ ಪ್ಲಾನ್ ಹಾಕುವುದನ್ನು ಕಲಿತರು. ಆನಂತರದು ಇತಿಹಾಸ.

ತಮ್ಮ ಜೀವಿತಾವಧಿಯಲ್ಲಿ ಅವರು ಒಟ್ಟು 35 ಸಾವಿರಕ್ಕೂ ಹೆಚ್ಚು ಜನರಿಗೆ ಆಯ, ಮನೆಯ ಪ್ಲಾನ್ ಮಾಡಿಕೊಟ್ಟರು. ಜ್ಯೋತಿಷ ಹೇಳಿದರು. ಆದರೆ ನಯಾ ಪೈಸೆ ಯಾರಿಂದಲೂ ಪಡೆಯಲಿಲ್ಲ. ಜನರು ಸಹ ಏನೇ ಕಷ್ಟ ಬಂದರೂ ಅವರ ಬಳಿಗೆ ಬರುತ್ತಿದ್ದರು. ಮನೆ ಕಟ್ಟುವ ಕನಸುಗಳ ಕಂಗಳಲ್ಲಿ ಸಂತಸ ತುಂಬುತ್ತಿದ್ದರು.

ತುಮಕೂರಿನಲ್ಲಿ ಮಗನ ಮನೆಯಲ್ಲಿದ್ದ ಅವರು ಇತ್ತೀಚಿನವರೆಗೂ ಮನೆಗೆ ಆಯ ನೋಡಿಕೊಟ್ಟರು. ಪ್ಲಾನ್ ಮಾಡಿಕೊಟ್ಟರು. ಒಬ್ಬರ ಬಳಿಯೂ ನಯಾ ಪೈಸೆ ಪಡೆಯಲಿಲ್ಲ. ಇವರೆಲ್ಲ ಬಡವರು, ದಲಿತರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇವರ ಖ್ಯಾತಿ ಕಂಡು ಕೊನೆಕೊನೆಗೆ ಶ್ರೀಮಂತರು ಬರುತ್ತಿದ್ದರು. ಆದರೆ ಎಲ್ಲರಿಗೂ ಒಂದೇ ಬಗೆಯ ಆತಿಥ್ಯ. ಯಾರಿಂದಲೂ ನಯಾ ಪೈಸೆ ಮುಟ್ಟಲಿಲ್ಲ. ಹಲವು ದೇವಸ್ಥಾನಗಳಿಗೂ ಆಯ ಮಾಡಿಕೊಟ್ಟರು.

ಮುಖ್ಯ ಶಿಕ್ಷಕರಾಗಿ ಅವರು ಮೇಷ್ಟ್ರು ಗಿರಿಯಲ್ಲೂ ಹೆಸರು ಮಾಡಿದರು. ಶಿಷ್ಯರ ಪ್ರೀತಿಯ ಮೇಷ್ಟ್ರು ಸಹ ಆದರು.

ಇಡೀ ಬದುಕನ್ನು ಬೇರೆಯವರ ಕನಸುಗಳಾಗಿಯೇ ಬದುಕಿದ ಮೇಷ್ಟ್ರು ಇನ್ನಿಲ್ಲ. ಆದರೆ 35 ಸಾವಿರ ಮನೆಗಳಾಗಿ ಅವರು ಹರಡಿ ಹೋಗಿದ್ದಾರೆ ಎಂದರೆ ತಪ್ಪಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?