Saturday, July 27, 2024
Google search engine
Homeತುಮಕೂರ್ ಲೈವ್ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೆ ಸಾವು

ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೆ ಸಾವು

ತುಮಕೂರು:
ಖಾಸಗಿ ಬಸ್ ಪಲ್ಟಿ ಹೊಡೆದು 5 ಜನ ಸ್ಥಳದಲ್ಲೆ ಮೃತಪಟ್ಟು, 22 ಜನರಿಗೆ ತೀವ್ರ ತರಹದ ಪೆಟ್ಟಾಗಿರುವ ಘಟನೆ ಪಾವಗಡ-ತುಮಕೂರು ರಾಜ್ಯ ಹೆದ್ದಾರಿ ರಸ್ತೆಯ ಜಟ್ಟಿಅಗ್ರಹಾರ ಗ್ರಾಮದ ಬಳಿ ನಡೆದಿದೆ.
ಕೊರಟಗೆರೆ ಪಟ್ಟಣದ ಕೋಟೆ ಬೀದಿ ವಾಸಿ ಶ್ರೀನಿವಾಸ(40) ಚಿಕ್ಕ ಮಸೀದಿ ಬಳಿ ವಾಸಿ ಸಾದತ್ ಪಾಷಾ(18), ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಗ್ರಾಮದ ಅಕ್ರಮ್ ಪಾಷಾ, ಮಧುಗಿರಿ ತಾಲ್ಲೂಕಿನ ಪುಲಮಾಚಿ ಗ್ರಾಮದ ಶಿವಕುಮಾರ(27), ತುಮಕೂರು ತಾಲ್ಲೂಕು ಕೋರಾ ಹೋಬಳಿ ಗೇರಹಳ್ಳಿಯ ಇಮ್ರಾನ್ ಸ್ಥಳದಲ್ಲೆ ಮೃತಪಟ್ಟವರು. ಬುಧವಾರ ಬೆಳಿಗ್ಗೆ 8.50 ಸುಮಾರಿನಲ್ಲಿ ಪಾವಗಡದಿಂದ ತುಮಕೂರಿಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. 22 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಕೊರಟಗೆರೆ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಕರ ಅಪಘಾತಕ್ಕೆ ಚಾಲಕನ ನಿರ್ಲಕ್ಷ ಹಾಗೂ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ವಾಸಿ ಇಮಾಮ್ ಬೇಗ್ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆ, ಇತರರಿಗೆ ಗಾಯ, ಹಾಗೂ ನಿರ್ಲಕ್ಷತೆಯಿಂದ ಸಾವು ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತಿವಾರಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಮೃತರ ಕುಟುಂಭಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು. ಈ ವೇಳೆ ಸ್ಥಳೀಯರು ಖಾಸಗಿ ಬಸ್ ಗಳ ಅತಿ ವೇಗ ಹಾಗೂ ಅಜಾಗರೂಕ ಚಾಲನೆ ವಿರುದ್ಧ ಸಚಿವರ ಎದುರು ಆಕ್ರೋಶ ವ್ಯಕ್ತ ಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಆನಂತರ ಸರ್ಕಾರಿ ಆಸ್ಪತ್ರಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ ಘಟನಾ ಸ್ಥಳ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಾತಿಸುವುದಾಗಿ ತಿಳಿಸಿದರು. ಆರ್ಟಿಓ ಅಧಿಕಾಋಇಗಳು ಖಾಸಗಿ ಬಸ್ ಮಾಲೀಕರ ಶಾಮೀಲಾಗಿ ಅವೈಜ್ಞಾನಿಕ ವೇಳೆಯನ್ನು ನಿಗದಿ ಪಡಿಸಿ 2 ನಿಮಿಷಕ್ಕೊಂದು ಬಸ್ ಎಂಬಂತೆ ಟೈಂ ನೀಡಲಾಗಿದೆ. ಇದರಿಂದಾಗಿ ಬಸ್ ಚಾಲಕರು ವಿದಿಯಿಲ್ಲದೇ ಅತಿ ವೇಗದ ಚಾಲನೆ ಮಾಡುತ್ತಿದ್ದಾರೆ. ಈ ವೇಳೆ ಅಪಘಾತ ಸಂಭವಿಸುತ್ತಲಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಸಾರಿಗೆ ಸಚಿವರೊಂದಿಗೆ ಮಾತನಾಡಿ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.

ಕುಣಿಗಲ್ ಮೊರಾರ್ಜಿ ವಸತಿ ಶಾಲೆಗೆ ಹೋಗಲು ಪಾವಗಡದಿಂದ ನಾನು ನನ್ನ ಅಮ್ಮ ಬಸ್ಸ್ ಹತ್ತಿದ್ದೆವು. ಅಲ್ಲಿಂದಲೂ ಬಸ್ ಅತಿ ವೇಗವಾಗಿಯೇ ಬಂತು. ಮುಂಜಾನೆ ಬೇಗ ಎದ್ದಿದ್ದರಿಂದ ಬಸ್ಸಿನ ಬಲಭಾಗದ ಸೀಟಿನಲ್ಲಿ ಕುಳಿತ್ತಿದ್ದ ನಮಗೆ ನಿದ್ದೆ ಹತ್ತಿತ್ತು. ಇದ್ದಕ್ಕಿದ್ದಹಾಗೆ ಬಸ್ ಜೋರಾಗಿ ವಾಲಾಡತೊಡಗಿತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಬಸ್ಸು ನೆಲಕ್ಕೆ ಏಕಾಏಕಿ ಅಪ್ಪಳಿಸಿತು. ಏನಾಯಿತು ಎನ್ನುವಷ್ಟರಲ್ಲಿ ನಾವು ಬಸ್ಸಿನಲ್ಲಿ ಒಬ್ಬರ ಮೇಲೊಬ್ಬರು ಬೀಳತೊಡಗಿದೆವು. ಜನರು ಕಿರುಚಾಟ ಅಷ್ಟೇ ಕೀಳುತ್ತಿತ್ತು. ಯಾರೋ ಬಂದು ಬಸ್ಸಿನ ಗಾಜು ಹೊಡೆದು ನಮನ್ನು ಆಚೆ ಕರೆದುಕೊಂಡರು. ನನಗೆ ಯಾವುದೇ ಗಾಯ ಆಗಿರಲಿಲ್ಲ. ನನ್ನ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಘಟನೆಯಿಂದ ಆನಂಕಕ್ಕೀಡಾಗಿದ್ದ ಕುಣಿಗಲ್ ಮುರಾರ್ಜಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಪಾವಗಡ ತಾಲ್ಲೂಕಿನ ಶ್ರೀರಾಂಪರದ ವಿದ್ಯಾರ್ಥಿ ಚಂದ್ರಶೇಖರ್ ವಿವರಿಸಿದರು.

ಅಗ್ರಹಾರದ ಬಳಿ ಸಾಕಷ್ಟು ಅಪಘಾತಗಳಾಗಿವೆ. ಎಲ್ಲಾ ಅಪಘಾತಗಳು ಅತಿವೇಗ ಹಾಗೂ ಅಜಾಗರೂಕತೆಯಿಂದಲೇ ಆಗಿವೆ. ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಯಾವಗಲೂ ಅತಿ ವೇಗವಾಗಿಯೇ ಚಲಿಸುತ್ತಿರುತ್ತವೆ. ರಸ್ತೆ ಪಕ್ಕದಲ್ಲೆ ಸರ್ಕಾರಿ ಶಾಲೆ ಇದೆ. ಆದರೂ ಯಾವುದೇ ಅಡೆ ತಡೆಯಿಲ್ಲದೆ ಜೋರಾಗಿ ಬಸ್ ಚಲಿಸುತ್ತವೆ. ಖಾಸಗಿ ಬಸ್ ಗಳಿಗೆ ಕಡಿಮೆ ಟೈಮ್ ಅವಧಿ ನೀಡಿರುವುದೇ ಇದಕ್ಕೆ ಕಾರಣ. ಆರ್ಟಿಓ ಅವರು ಖಾಸಗಿ ಬಸ್ಸುಗಳಿಗೆ ಸರಿಯಾದ ವೇಳೆ ನಿಗಧಿ ಮಾಡದೇ ಇರುವುದೇ ಇಂತಹ ಘಟನೆ ಸಂಭವಿಸಿರುವುದು ಪ್ರಮುಖ ಕಾರಣವಾಗಿದೆ. ಪ್ರತಿ ಎರಡು ನಿಮಿಷಕ್ಕೊಂದು ಪರ್ಮಿಟ್ ನೀಡಿದ್ದಾರೆ. ಇದರಿಂದ ಖಾಸಗಿ ಬಸ್ ಚಾಲಕರು ಪೈಪೋಟಿ ಮೇಲೆ ವಾಹನ ಚಲಾಯಿಸುತ್ತಾರೆ. ಇದರ ಹೊಣೆಯನ್ನು ಆರ್ಟಿಓ ಅಧಿಕಾರಿಗಳೇ ಹೊರಬೇಕು. ಈ ಜಾಗದಲ್ಲಿ ರಸ್ತೆ ಉಬ್ಬುಗಳನ್ನು ಹಾಕುವ ಮೂಲಕ ವಾಹನ ವೇಗ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ. ಬಹಳಷ್ಟು ಸಾರಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಅಗ್ರಹಾರ ಗ್ರಾಮಸ್ಥ ಸಿದ್ದಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಊರಿನ ಮುಂಭಾಗ ರಸ್ತೆ ಪಕ್ಕದಲ್ಲಿ ನಾವು ನಿಂತು ಮಾತಾಡ್ತಾ ಇದ್ವಿ. ಕೊರಟಗೆರೆ ಕಡೆಯಿಂದ ಬಸ್ಸು ಜೋರಾಗಿ ಬರ್ತಾಯಿತ್ತು. ನೋಡ್ತಾ, ನೋಡ್ತಾ ಬಸ್ಸು ಅತ್ತಿಂದಿತ್ತ ಜೋರಾಗಿ ವಾಲಾಡಿಕೊಂಡು ಬರೋಕೆ ಸ್ಟಾರ್ಟ್ ಮಾಡ್ತು. ಬರೋ ಸ್ಪೀಡಲ್ಲೆ ನೋಡ್ತಿದಂಗೆ ಬಂದು ದೊಪ್ಪ ಅಂತ ಬಿತ್ತು. ಬಸ್ಸಲ್ಲಿದ್ದ ಜನ ಕಿಟಾರನೇ ಜೋರಾಗಿ ಕಿರುಚತೊಡಗಿದರು. ಹತ್ರಕ್ಕೆ ಹೋಗಿ ನೋಡ್ದಾಗ ಕೆಲವರಿಗೆ ತುಂಬಾ ಗಾಯಗಳಾಗಿ ನರಳಾಡ್ತಿದ್ರು. ಕೆಲವ್ರು ಬಸ್ ಬಿದ್ದ ತಕ್ಷಣನೇ ಸತ್ತಿದ್ರು ಎಂದು ಘಟನೆ ಬಗ್ಗೆ ಭಯದಿಂದಲೇ ವಿವರಿಸಿದರು ಪ್ರತ್ಯಕ್ಷದರ್ಶಿ ಅಗ್ರಾಹಾರದ ಜಯಮ್ಮ.

 

ಹೋದ್ ಜೀವ ಬಂದಂಗಾತೋ ಯಪ್ಪಾ…
ಮಕ್ಕಳನ್ನು ಹಾಸ್ಟಲ್ ಗೆ ಬಿಡಲೆಂದು ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಿಂದ ಬಸ್ಸು ಹತ್ತಿದೆವು ಬಸ್ನ ಬಲಭಾಗದಲ್ಲಿ ಕುಳಿತ್ತಿದ್ದ ನಾನು ನಿದ್ದೆಗೆ ಜಾರಿದ್ದೆವು. ಬಸ್ ಕೆಳಗೆ ಬಿದ್ದಾಗ ಜೊತೆಯಲ್ಲೆ ಕುಳಿತ್ತಿದ್ದ ನಾನು ನನ್ನ ಮಕ್ಕಳಿಬ್ಬರು ಚಿಲ್ಲಾಪಿಲ್ಲಿಯಾಗಿ ಬಿದ್ದೆವು. ಬಸ್ಸಿನಲ್ಲಿದ್ದವರು ಬಿದ್ದ ರಭಸಕ್ಕೆ ಗಾಯಗೊಂಡು ಚೀರಾಡ ತೊಡಗಿದರು. ನಾವು ಬಸ್ ಕಿಟಕಿಯಿಂದ ಹೊರ ಬಂದೆವು. ಬಸ್ ಬಿದ್ದಾಗ ಎಡಭಾಗದಲ್ಲಿ ಕುಳಿತ್ತಿದ್ದವರ ಮೇಲೆ ಬಿದ್ದಿದ್ದರಿಂದ ನನಗೂ ನನ್ನ ಮಕ್ಕಳಿಗೂ ಯಾವುದೇ ತರಹ ಪೆಟ್ಟಾಗಲಿಲ್ಲ. ಹೋದ್ ಜೀವ ಬಂದಂಗಾತೋ ಯಪ್ಪಾ. ಬಸ್ ಹತ್ತಿದಾಗಿನಿಂದ ಬಹಳ ಜೋರಾಗೇ ಬರುತ್ತಿತ್ತು. ಬಸ್ಸಿನ ತುಂಬಾ ಜನರಿದ್ದರು ಎಂದು ಬಸ್ಸಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ತುಮಕೂರಿಗೆ ಪ್ರಯಾಣ ಬೆಳೆಸಿದ್ದ ಮಧುಗಿರಿ ತಾಲ್ಲೂಕಿನ ಸತ್ಗೇನಹಳ್ಳಿ ವಾಸಿ ರಮೇಶ ವಿವರಿಸಿದರು.

9

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?