Monday, October 14, 2024
Google search engine
Homeಜನಮನಮಗಳೇ..

ಮಗಳೇ..

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?