Publicstory.in
ತುಮಕೂರು: ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ಜಿಲ್ಲೆಯ 6 ತಾಲ್ಲೂಕುಗಳು ಮರುಭೂಮಿಯಾಗಲಿವೆ ಎಂಬ ಆತಂಕದ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಹಿರಂಗಪಡಿಸಿದ್ದಾರೆ.
ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಒಂದೇ ಬಗೆಯ ಬೆಳೆಯ ಮೇಲೆ ಅವಲಂಬಿಸದೆ ವಿವಿಧ ರೀತಿಯ ಬೆಳೆಯನ್ನು ಬೆಳೆಯಬೇಕು. ಇದರಿಂದ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆ ಬಿದ್ದು, ಉತ್ತಮ ಗಾಳಿ ದೊರೆಯುವುದಲ್ಲದೆ ನೀರಿಗೆ ಸಮಸ್ಯೆಯಾಗದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.
ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಭೂಮಿ ಮೇಲೆ ನೀರು ಮತ್ತು ಗಾಳಿಯನ್ನು ಉತ್ಪಾದಿಸುವ ಯಾವುದೇ ವ್ಯಕ್ತಿ-ಶಕ್ತಿ ಇನ್ನು ಹುಟ್ಟಿಕೊಂಡಿಲ್ಲ ಎಂದರು. ಮರವನ್ನು ಮಾರಿ ಮಕ್ಕಳ ಮದುವೆ ಮಾಡುವ ಕಾಲವೊಂದಿತ್ತು ಎಂದು ಸ್ಮರಿಸಿದರು.
ರೈತರು ತೆಂಗು, ಅಡಿಕೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಸುವ ಭರದಲ್ಲಿ ತೋಟದಲ್ಲಿದ್ದ ಹಲಸು, ಮಾವು, ಹೊಂಗೆ, ಬೇವಿನ ಮರಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದಲೂ ತಾಪಮಾನ ಏರಿಕೆಯಾಗತ್ತಿದೆ ಎಂದರು.
ಜಿಲ್ಲೆಯ ಅಂತರ್ಜಲ ಮಟ್ಟ 1200 ಅಡಿ ಆಳಕ್ಕೆ ಕುಸಿದಿದೆ. ಅಂತರ್ಜಲ ಮಟ್ಟದ ಹೀಗೆ ಕುಸಿಯುತ್ತಿದ್ದರೆ ಜಿಲ್ಲೆಯು ಶಾಶ್ವತ ಮರಳುಗಾಡಾಗುವುದರಲ್ಲಿ ಸಂಶಯವಿಲ್ಲ. ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ ಎಂದರು.
ಈ ನಿಟ್ಟಿನಲ್ಲಿ ಅಂತರ್ಜಲ ಸಂರಕ್ಷಣೆಯಾಗಬೇಕು. ರಾಜ್ಯದ ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆಯಡಿ 1230 ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ತಿಳಿಸಿದರು.