Publicstory.in
Tumkuru: ಮಾರ್ಚ್ 27ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆಗಳು ಯಾವುದೇ ಲೋಪದೋಷವಿಲ್ಲದೇ ಪಾರದರ್ಶಕವಾಗಿ ನಡೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರ್ಚ್ 27ರಿಂದ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಟೇಬಲ್, ಕುಡಿಯುವ ನೀರು ಮತ್ತು ಎಲ್ಲಾ ರೀತಿಯ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಾಗಲಿ, ಪರೀಕ್ಷಾ ಕೇಂದ್ರಗಳಲ್ಲಿ ಗುಂಪಾಗಿ ಸೇರದಂತೆ ನೋಡಿಕೊಳ್ಳುವುದು ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಎಂದು ಅವರು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ/ಉತ್ತರ ಪತ್ರಿಕೆಗಳನ್ನು ತರುವಾಗ ಸೂಕ್ತ ಭದ್ರತೆಗಳಿಂದ ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಅಲ್ಲದೇ ಪರೀಕ್ಷಾ ಕಾರ್ಯಕ್ಕಾಗಿ ಸೂಕ್ತ ವಾಹನಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಆರ್‍ಟಿಓ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್ಸ್‍ಗಳನ್ನು ಇಟ್ಟು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಎಲ್ಲಾ ಅಧಿಕಾರಿ/ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಪರೀಕ್ಷೆ ಕೊಠಡಿಗೆ ತೆರಳುವಂತೆ ವ್ಯವಸ್ಥೆ ಮಾಡುವುದು.
ಒಂದು ವೇಳೆ ಯಾವುದೇ ವಿದ್ಯಾರ್ಥಿಯು ಜ್ವರ, ಕೆಮ್ಮು, ನೆಗಡಿ ಇವುಗಳಿಂದ ಬಳಲುತ್ತಿದ್ದರೆ ಅಂತಹವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿದರು. ಅಲ್ಲದೇ ಕೋವಿಡ್-19 ವ್ಯಾಪಿಸಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಗೊಳಿಸಿ ವಿದ್ಯಾರ್ಥಿಗಳ ಅಂತರವನ್ನು ಕಾಯ್ದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ 2020ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಒಟ್ಟು 36782 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಒಟ್ಟು 144 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.