ಜಿ.ಎನ್.ಮೋಹನ್
…ಹಾಗಂತ ತನ್ನನ್ನು ತಾನೇ ಕೇಳಿಕೊಂಡಿದ್ದು ಈಗ ಜಗತ್ತಿನ ಎಲ್ಲರ ಗಮನ ಸೆಳೆದಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ.
750 ಪುಟಗಳ Tomb of Sand ಬಹುರೂಪಿ ಬುಕ್ ಹಬ್ ಗೆ ಬಂದಿಳಿದಾಗ ಅದು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಯಾವಾಗ ಬೂಕರ್ ಘೋಷಣೆಯಾಯಿತೋ ಕಪಾಟಿನ ಮಧ್ಯದಿಂದ ಅದನ್ನು ಹೊರಕ್ಕೆಳೆದುಕೊಂಡೆ.
ಅದೇ ಸಮಯದಲ್ಲಿ ಜಗತ್ತಿನ ನಾನಾ ಮಾಧ್ಯಮಗಳಲ್ಲಿ ಸಂದರ್ಶನಗಳು ಪ್ರಕಟವಾಗತೊಡಗಿತ್ತು. ಓದುತ್ತಾ ಇದ್ದವನಿಗೆ ಥಟ್ಟನೆ ಗಮನ ಸೆಳೆದದ್ದು ಈ ಸಾಲು.
ಅರೆ! ಎಂದುಕೊಂಡು ಓದುತ್ತಾ ಹೋದೆ.
ನಾನು ಕಾಲೇಜು ಮೆಟ್ಟಲು ಹತ್ತುವಾಗ ನನ್ನದೇ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕಿತ್ತು. ನನಗೆ ಬ್ಯಾಂಕ್ ನಲ್ಲಿ ನನ್ನದೂ ಒಂದು ಅಕೌಂಟ್ ಆರಂಭವಾಗುತ್ತಿದೆ ಎನ್ನುವುದೇ ಒಂದು ದೊಡ್ಡ ಸಂತಸವಾಗಿತ್ತು. ಅದಕ್ಕೆ ಸಹಿ ಹಾಕಲು ಗೀತಾಂಜಲಿ ಪಾಂಡೆ ಎನ್ನುವ ನನ್ನ ಹೆಸರನ್ನು ಬರೆದೆ.
ತಕ್ಷಣ ಅಲ್ಲಿಯೇ ಇದ್ದ ನನ್ನ ಅಪ್ಪ. ಪೂರ್ಣ ಹೆಸರು ಬರೆಯಬೇಡ ಗೀತಾಂಜಲಿ ಅಂತ ಹಾಕು ಸಾಕು. ಗಂಡನ ಮನೆಗೆ ಹೋದರೆ ನಿನ್ನ ಸರ್ ನೇಮ್ ಬದಲಾಗುತ್ತಲ್ಲ. ಮತ್ತೆ ಪಾಂಡೆ ಯಾಕೆ? ಎಂದರು.
ಆ ಸಂಭ್ರಮದ ಮಧ್ಯೆಯೂ ನಾನು ಒಂದು ಕ್ಷಣ ಯೋಚನೆಯಲ್ಲಿ ಕಳೆದುಹೋದೆ. ಒಂದು ನನ್ನ ಹೆಸರಿನಲ್ಲಿ ಅಪ್ಪನ ಸರ್ ನೇಮ್ ಇದೆ ಎನ್ನುವುದು, ಇನ್ನೊಂದು ನಾನು ನಂತರದಲ್ಲಿ ಗಂಡನ ಹೆಸರು ತಗುಲಿಸಿಕೊಳ್ಳಬೇಕಾಗುತ್ತದೆ ಎನ್ನುವುದು ನನ್ನನ್ನು ಯೋಚಿಸಲು ಹಚ್ಚಿತ್ತು.
ಆಗ ನನ್ನನ್ನು ಕಾಡಿದ್ದು ನನ್ನ ಅಮ್ಮ. ನನ್ನ ಬದುಕಿನಲ್ಲಿ ಆಕೆಯ ಪಾತ್ರ ಎಷ್ಟು ದೊಡ್ಡದಿದೆ. ಆಕೆ ನನನ್ನು ರೂಪಿಸಲು ತನ್ನನ್ನೇ ತೆತ್ತುಕೊಂಡಿದ್ದಾಳೆ ಆದರೆ ಆಕೆಯ ಹೆಸರೇ ಇಲ್ಲವಲ್ಲ ಅನಿಸಿತು. ತಕ್ಷಣ ನಾನು ನಿರ್ಧರಿಸಿದೆ. ಅಪ್ಪನ ಹೆಸರಾಗಲಿ ಗಂಡನ ಹೆಸರಾಗಲಿ ನನ್ನ ಹೆಸರಿನ ಜೊತೆ ಜೋಡಣೆಯಾಗುವುದಿಲ್ಲ ಎಂದು. ನನ್ನ ಹೆಸರಿನ ಜೊತೆಗೆ ನನ್ನ ಅಮ್ಮನ ಹೆಸರೇ ಸರ್ ನೇಮ್ ಆಗುತ್ತದೆ ಎಂದು ನಿರ್ಧರಿಸಿದೆ.
ನನ್ನ ಅಮ್ಮನ ಹೆಸರು ಶ್ರೀ ಕುಮಾರಿ. ಆ ಹೆಸರಿನ ಆರಂಭದ ‘ಶ್ರೀ’ ತೆಗೆದುಕೊಂಡು ಆಗಿಂದಾಗಲೇ ನನ್ನ ಹೆಸರಿಗೆ ಜೋಡಿಸಿಕೊಂಡೆ. ಹಾಗಾಗಿ ನನ್ನ ಕಣ್ಣೆದುರಿಗೇ ನನ್ನ ಹೆಸರಿನ ಜೊತೆ ಇದ್ದ ಪಾಂಡೆ ಕಳಚಿಕೊಂಡು ಬಿದ್ದಿತು. ನಾನು ಗೀತಾಂಜಲಿ ಪಾಂಡೆ ಬದಲು ‘ಗೀತಾಂಜಲಿ ಶ್ರೀ’ ಆದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.