✍️ಸಂತೋಷ್.ಜಿ., ಮುಖ್ಯ ಶಿಕ್ಷಕರು
ನಿಜಕ್ಕೂ ನಾ ಬದಲಾಗಿದ್ದೇನೆ… ನಾ ಎಂದೂ ಯಾರ ಸಾವಿಗೂ ಅಷ್ಟೊಂದು ಭಾವುಕನಾಗಿರಲಿಲ್ಲ. ಸಾವು ಸಹಜವೆನ್ನುವ ನಿರ್ಲಿಪ್ತತೆ ಇತ್ತೋ..?
ಸಾವು ಸಾಮಾನ್ಯವೆನ್ನುವ ಪ್ರಕೃತ ಮನಸ್ಥಿತಿಯಿತ್ತೋ..? ನಾ ಅರಿಯೇ. ನಾ ಇಂದು ತುಂಬಾ ಭಾವುಕನಾಗಿರುವೆ. ಕಂಗಳು ಹನಿಗಳಿಂದ ತುಂಬಿದ್ದರೂ ಕೆಳಗೆ ಉದುರುತ್ತಿಲ್ಲ.
ಹೃದಯವು ಲಬ್ ಡಬ್ ಎನ್ನುವ ಶಬ್ಧವನ್ನು ನಿಧಾನವಾಗಿ ಮಾಡುತ್ತಿವೆ.ಆದಕ್ಕೂ ಸಾವಿನ ಸೂತಕ ನಿಷ್ಕ್ರಿಯವಾಗಿಸಿದೆಯೋ ಏನೋ.. ! ಕೊರಳಲ್ಲಿ ಮಾತುಗಳು ಹೊರಬಾರದು ಒಳನೂಕುತ್ತಿವೆ.
ಮಾತುಗಳಿಗೂ ಹನಿಗಳಿಗೂ ಪದಗಳಿಗೂ ಆಗುತ್ತಿರುವ ಯಾತನೆಯು ದಕ್ಕುತ್ತಿಲ್ಲ. ಸಿಕ್ಕುವ ಮಾತಂತೂ ಇಲ್ಲವೇ ಇಲ್ಲ. ಸಾವು ಬ್ರಹ್ಮನ ಹಣೆಬರಹವೆಂದು ಅದು ಬದುಕಲ್ಲಿ ಬರವುದು ಸಹಜವೇ ಎಂದೂ ಮುಕ್ತ ಮನಸ್ಸಿನಲ್ಲಿದ್ದವನಿಗೆ ಯಾಕೋ ಚುರುಕು ಮುಟ್ಟಿಸಿದೆ.
ಜೀವನದ ಹಾದಿಯಲಿ ಬದಲಾಗಬೇಕಿರುವ ಮನವು ಎಂದೂ ಅಳುಕುವುದಿಲ್ಲ ಎಂದೂ ಜಗ್ಗುವುದೂ ಇಲ್ಲವಾದರೂ ಬವಣೆಯ ಛಾಯೆಯನ್ನು ಮಾತ್ರ ಕೊಟ್ಟು ಮಂಕಾಗಿಸಿದೆ.
ಹೊಟ್ಟೆಯೊಳಗೆ ಆಹಾರ ಭರ್ತಿಯಾಗಿದ್ದರೂ ಹಸಿವಿನ ಸಂಕಟ ಕಾಣುತ್ತಿದೆ. ಮೈಮುದುರಿ ಕೈಕಾಲುಗಳೆಲ್ಲಾ ಜಡಗಟ್ಟಿ ಸುಲಭಕೆ ಆಡದಂತೆ ಕಟ್ಟಿಹಾಕಿದಂತಿದೆ. ಇದೆಲ್ಲಾ ಆದದ್ದು ಚಿತ್ರನಟ ಚಿರಂಜೀವಿ ಸರ್ಜಾರ ಮರಣದ ವಿಚಾರ ಕೇಳಿ. ಚಿರೂ ಎಂದೂ ನನಗೆ ಇಷ್ಟವಾಗಿರಲಿಲ್ಲ.
ನಟನೆಯಿಂದ ನನ್ನ ಮನಸ್ಸನೆಂದೂ ಸೆಳೆದಿರಲಿಲ್ಲ. ನೋಡಲೇಬೇಕೆಂದೂ ಅವರ ಯಾವ ಚಿತ್ರವನ್ನೂ ನೋಡಿರಲಿಲ್ಲ. ಆದರೆ ಅವರ ಕೆಲವು ಚಿತ್ರಗಳನ್ನು ಸಾಮಾನ್ಯವಾಗಿ ನೋಡಿದ್ದೆ. ಎಂದೂ ಇಷ್ಟದ ನಟನಾಗಿ ಗೋಚರಿಸಿರಲಿಲ್ಲ.
ವಯಸ್ಸು 39 ಕ್ಕೆ ಸತ್ತದ್ದಕ್ಕೆ ಹೀಗಾಯಿತೆಂದರೆ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸತ್ತ ಹಲವು ಸ್ನೇಹಿತರ, ಬಂಧುಗಳ, ಸುತ್ತಮುತ್ತಲಿನವರ ಸಾವು ನನ್ನನ್ನು ಎಂದೂ ಇಷ್ಟೊಂದು ಕಾಡಿರಲಿಲ್ಲ.
ನಿಜಕ್ಕೂ ನಾ ಬದಲಾಗಿದ್ದೇನೆ.ಮತ್ತೊಬ್ಬರ ನೋವಿನಲ್ಲಿ ಪಾಲ್ಗೊಳ್ಳುವ ಪರಿಪಕ್ವದ ಮನಸ್ಸಿನ ಮೊದಲ ಮೆಟ್ಟಿಲನ್ನು ಏರಿದ್ದೇನೆ.
ಇದು ಅಹಂಕಾರವೆಂದು ನೀವು ಬಣ್ಣಿಸಬೇಡಿ. ಯಾಕೆಂದರೆ ನನ್ನ ಬದಲಾವಣೆಯನ್ನು ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿನಲ್ಲಿ ನಾನೂ ಎಂಬ ಪದಬಳಸಿದ್ದೇನಷ್ಟೇ.
ಇಲ್ಲಿ ಅದು ವಿಕಾಸದ ಇರುವಿಕೆಯೇ ಹೊರತು ನನ್ನ ತೋರಿಕೆಯಂತೂ ಅಲ್ಲವೇ ಅಲ್ಲ. ನನ್ನ ಪದಗಳಲ್ಲಿ ಕಾಣದೆಯೇ ಆ ಅಹಂ ಅಡಗಿದ್ದರೆ ದಯಮಾಡಿ ಅದನ್ನು ಮನ್ನಿಸಿ ಮುನ್ನಡೆಯುತ್ತೀರೆಂದು ನಂಬುತ್ತಾ ಮುಂದುವರೆಯುತ್ತೇನೆ.
ವಾಯುಪುತ್ರ ನಿಂದ ಹಿಡಿದು ಜುಗಾರಿ ಕ್ರಾಸ್ ವರೆಗೂ ನಟಿಸಿದ್ದ ಚಿರೂನ ಕೆಲವು ಚಿತ್ರಗಳನ್ನು ನೋಡಿದ್ದೇನೆ ಅಷ್ಟೇ. ಅದರ ಪ್ರಭಾವ ನಿಜವಾಗಿಯೂ ನನಗೆ ಅಷ್ಟಾಗಿ ಆಗಿಲ್ಲ.
ಬರವಣಿಗೆಗೆ ಬರುವಷ್ಟು ಸಂಕಟವು ಯಾರ ಅಗಲುವಿಕೆಯಿಂದಲೂ ಆಗಿಲ್ಲ. ಇದು ಕರೋನಾದಿಂದ ಬಂದ ಮನಸ್ಥಿತಿಯೋ…? ಈ ಸಾಲಿನಲ್ಲಿ ಓದಿದ ಪುಸ್ತಕಗಳ ಪ್ರಭಾವದಿಂದ ಆದ ಚಿರಸ್ಥಿತಿಯೋ..? ಸುತ್ತಮುತ್ತಲ ಹಲವಾರು ಚರ್ಚೆ, ಜೀವನಗಳ ದರ್ಶನಗಳಿಂದಾದ ಪರಿಸ್ಥಿತಿಯೋ..?
ನಿಜವಾಗಿಯೂ ತಿಳಿಯುತ್ತಿಲ್ಲ. ನಾ ಮಾಡಿದ ಕೃತಿಗಳೆಂದರೆ ನನಗೆ ಹೆಮ್ಮೆ. ಅದರೆ ಇಂದು ಅದರ ಬಗೆಗಿನ ಹೊಗಳಿಕೆಗಳೂ ಬೇಡೆನಿಸುತ್ತಿವೆ. ಅವುಗಳ ತಂಟೆಗೆ ಹೋಗಲು ಮನಸ್ಸು ಬಿಡುತ್ತಿಲ್ಲ. ಇನ್ನು ಸಾಮಾನ್ಯವಾಗಿ ಓದುವ ಹವ್ಯಾಸವಿರುವ ಪುಸ್ತಕಗಳೂ ರುಚಿಸುತ್ತಿಲ್ಲ.
ನಿಜಕ್ಕೂ ಬದಲಾಗಿದೆ ಜೀವನ, ಹಾಗೆಯೇ ಬದಲಾಗಬೇಕಿದೆ ಜೀವನ. ಸ್ವಾಮಿ ವಿವೇಕಾನಂದರ ನೆನಪಾಗುತ್ತಿದೆ. ಸನ್ಯಾಸಿಗಳಾಗಿದ್ದೂ ಮತ್ತೊಬ್ಬರು ಸತ್ತಾಗ ದುಃಖ ಪಡುತ್ತಿದ್ದ ಅವರಿಗೆ ಕೆಲವರು ಹೇಳಿದ್ದುಂಟು. ಸನ್ಯಾಸಿಗಳಾಗಿ ಹೀಗೆ ಅಳಬಾರದೆಂದು,ಅಗ ಅವರೆ ಕೊಟ್ಟ ಉತ್ತರ ನನಗಿಂದು ಎಡಬಿಡದಂತೆ ಕಾಡುತ್ತಿದೆ.
ಮತ್ತೊಬ್ಬರ ದುಃಖದಲ್ಲಿ ಪಾಲ್ಗೊಳ್ಳದೆ ಚೌಕಟ್ಟಾಕಿದರೆ ಆ ಸನ್ಯಾಸತ್ವವೇ ನನಗೆ ಬೇಡ. ನಿಜವಾಗಿಯೂ ಅವರ ಅನುಯಾಯಿಗಳಾಗಿದ್ದಕ್ಕೂ ಇಂದು ಸಾರ್ಥಕವೆನಿಸುತ್ತಿದೆ.
ಹೀಗೆ ಮತ್ತೊಬ್ಬರ ದುಃಖದಲ್ಲಿ ಭಾಗಿಯಾಗುವಂತಹ ವರವನ್ನು ಕರುಣಿಸು ಎಂದು ಮನಸ್ಸು ಬೇಡುತ್ತಿದೆ. ಅವರ ನೋವಿಗೆ ಸ್ಪಂದಿಸದ ಮಾನವ ಜನ್ಮವಿದ್ದರೂ ವ್ಯರ್ಥವೆನ್ನಿಸುವಷ್ಟು ನೋವಿನ ಕಟ್ಟೆ ಒಡೆದಿದೆ. ಜನರ ಮನಸ್ಸನ್ನು ಪ್ರಶ್ನಿಸುವಂತೆ ಮಾಡುತ್ತಿದೆ.
ಜನ್ರು ಹೀಗೇಕೆ ಮತ್ತೊಬ್ಬರು ಕಷ್ಟದಲ್ಲಿದ್ದರೂ ತಾನು ಮಾತ್ರ ಸುಖವಾಗಿರಬೇಕೆಂಬ ಸ್ವಾರ್ಥದ ಕೂಪದಲ್ಲಿ ಬಿದ್ದು ತೊಳಲಾಡುತ್ತಿದ್ದಾರೆ ಎನಿಸುತ್ತಿದೆ.
ಮುಂದಾದರೂ ಮಾನವನ ಬುದ್ಧಿ ಬದಲಾಗಬಾರದೇ ಎನಿಸುತ್ತಿದೆ. ನಿಜ ಯಾವುದೇ ಆಗಲಿ ಅದು ಇರುವವರೆಗೂ ಅದರ ಮಹತ್ವ ನಮಗೆ ಅರಿವಾಗುವುದೇ ಇಲ್ಲ. ಅದನ್ನು ಕಳೆದುಕೊಂಡ ನಂತರ ಅದು ಬೇಕೆಂದರೂ ಅದು ಮತ್ತೆ ನಮಗೆ ದೊರಕುವುದೂ ಇಲ್ಲ.
ದೇವರು ಏಕೆ ಇರುವಾಗ ವ್ಯಕ್ತಿಗಳ ಪ್ರಾಮುಖ್ಯತೆಯನ್ನು ತಿಳಿಸುವುದಿಲ್ಲ. ತಿಳಿಸಿದರೆ ಅವನ ಗಂಟೇನು ಹೋಗುವುದೆಂದು ಹಿಡಿ ಹಿಡಿ ಶಾಪ ಹಾಕುತ್ತಿದೆ.
ಮನವಂತೂ ಇಂದು ಸ್ಥಿಮಿತಕ್ಕೆ ಬರುತ್ತಿಲ್ಲ. ಹಾಗೆಂದು ಭಾವಾತಿರೇಖಕ್ಕೂ ಅದು ದಾಸನಾಗಿಯೂ ಇಲ್ಲ. ನೋವಿನ ಮಡುವಿಗೆ, ಸಂಕಟದ ಪರಿಸರಕ್ಕೆ ಇಂದೇಕೊ ಮನವು ತನ್ನ ಗಡಿದಾಟಿ ಸ್ಪಂದಿಸುತಿದೆ.
ಈ ಪರಿಸರಕ್ಕೆ ಕಾರಣವಾದ ಚಿರೂ ನಿಮಗಿದೋ ನನ್ನಯ ಅಂತರಾಳದ ನಮನ. ನಿಮ್ಮ ನೋವು,ಆತ್ಮವಿಶ್ವಾಸ,ನಲಿವು, ಜೀವನ, ಹಲವರಿಗೆ ಸ್ಪೂರ್ತಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆದರೆ ನನಗೆ ನಿಮ್ಮ ಸಾವು ಬದುಕಿನ ಪಥವನ್ನೇ ಬದಲಿಸುತ್ತಿದೆಯೆಂದರೂ ಅದೂ ವಿಶಾಲದೆಡೆಗೆ ಸಾಗಿಸುತ್ತಿದೆ ಎಂದರೆ ಮರಣದಲ್ಲಿ ದೈವತ್ವವನ್ನು ತೋರಿಸಿಕೊಟ್ಟಿದ್ದೀರಿ. ಇ
ಷ್ಟು ಬೇಗ ಜೀವನಕ್ಕೆ ಇತಿಶ್ರೀ ಹಾಡಿಸಿದ ನಿಮ್ಮ ದೇಹಕ್ಕೂ ಆರೋಗ್ಯಕ್ಕೂ ನನ್ನದೊಂದು ಮುಗಿಯಲಾದ ಶಾಪವಿದೆ. ಆತ್ಮನಿಮ್ಮದಿರುವಾಗ ಹಲವರಿಗೆ ಸ್ಪೂರ್ತಿಯಾಗಿ ನೀವಿರುತ್ತೀರೆಂದು ನಂಬುತ್ತಾ…
ನಿಮಗಿದೆ ಮುಕ್ತ ಪರಿಸರದ ಶಕ್ತ ಕಾಣಿಕೆಗಳು ಬರಲಿ ಮುಂದಿನ ಜನ್ಮದಲ್ಲಿ ಸಿಗಲೀ ಎಂದು ಆಶಿಸುತ್ತಾ..
ನಿಮ್ಮ ಚಲನಚಿತ್ರಗಳ ನಟನೆಗೆ ಜೀವನದ ನಟನೆಯ ಚಲನಚಿತ್ರಗಳಿಗೆ ನಮನ…