ಕಾರ್ಯಕ್ರಮದಲ್ಲಿ ಕಥೆಗಾರ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು
Publicstory. in
ತುಮಕೂರು: ದೇಶ ನಿರಾಶೆಯ ಕಂದರಲ್ಲಿ ಬಿದ್ದುಹೋಗಿದೆ. ಹಿಂಸೆ ವಿಜೃಂಭಿಸುತ್ತಿದೆ. ಸಾಮಾಜಿಕ ಕ್ಷೋಭೆ, ಅಸಹನೆ, ಅಸಹಿಷ್ಣುತೆ ತುಂಬಿ ತುಳುಕುತ್ತಿದೆ. ಯುವಕರು ಗುಂಪುಹತ್ಯೆ, ಹಲ್ಲೆ, ಹಿಂಸೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಂತಹ ಹೊತ್ತಿನಲ್ಲಿ ಕುವೆಂಪು ವಿಧಾರಧಾರೆಗಳು ಈ ಸಮಸ್ಯೆಗಳಿಗೆ ಪರಿಹಾರಗಳಾಗಿವೆ ಎಂದು ಕಥೆಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಜಿ.ವಿ. ಆನಂದಮೂರ್ತಿ ಅಭಿಪ್ರಾಯಪಟ್ಟರು.
ಕುವೆಂಪು ವೇದಿಕೆಯಿಂದ ತುಮಕೂರು ತಾಲೂಕು ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕುವೆಂಪು ವಿಚಾರಧಾರೆ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಮತ್ತು ಯುವಜನರ ಆಲೋಚನಾಸಕ್ತಿ ಮತ್ತು ಮೆದುಗಳನ್ನು ಕೆಲವೇ ಜನರ ಗುಂಪು ಕಸಿದುಕೊಂಡಿದೆ. ಹೀಗಾಗಿ ಯುವಕರು ಕೋಮು-ಮತೀಯವಾದಿಗಳ ಕೀಲುಗೊಂಬೆಗಳಂತಾಗಿದ್ದಾರೆ. ಅಸಹನೆಯ ಬೆಂಕಿ ಹಬ್ಬಿಸುತ್ತಿದ್ದಾರೆ. ಭಾರತಕ್ಕೆ ಬೆಂಕಿ ಬಿದ್ದರೆ ನಮ್ಮನ್ನೇ ಸುಟ್ಟುಕೊಳ್ಳುತ್ತಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದಂತಾಗಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.
ಅನಕ್ಷರತೆ, ವಿಚಾರಹೀನತೆ ಸಮಾಜದ ದೊಡ್ಡ ಕಂಟಕ ಎಂದು ಕುವೆಂಪು ಹೇಳುತ್ತಾರೆ. ಜಾತಿ-ಧಾರ್ಮಿಕ ಕೇಂದ್ರತವಾದ ಹಿಂಸೆಗಳಿಗೆ ವಿದ್ಯಾವಂತರೇ ಕಾರಣವಾಗಿದ್ದಾರೆ. ಯುವಕರು ಕುವೆಂಪು ಹೇಳಿದಂತೆ ಪರೀಕ್ಷೆ, ವಿಚಾರ, ವಿಮರ್ಶೆ ಮಾಡಿಕೊಳ್ಳಬೇಕು. ಆದರೆ ಇಂದು ವಾಟ್ಸಪ್ ನಲ್ಲಿ ಬರುವ ಮೆಸೇಜನ್ನೇ ಭಗವದ್ಗೀತೆಯ ಸಾಲುಗಳು ಎಂಬಂತೆ ಗ್ರಹಿಸಲಾಗುತ್ತಿದೆ ಎಂದರು.
ಸಂದೇಶ ಎಲ್ಲಿಂದ ಬಂತು, ಯರಿಂದ ಬಂತು ಎಂಬುದನ್ನು ಪರೀಕ್ಷಿಸುವ ಗೋಜಿಗೂ ಹೋಗುವುದಿಲ್ಲ. ಗ್ರಹಣ ಕಾಲದಲ್ಲಿ ತಿಂಡಿ ತಿನ್ನಬೇಡಿ, ನೀರು ಕುಡಿಯಬಾರದು ಎಂದು ಹೇಳುವುದನ್ನೇ ನಂಬಿಕೊಂಡು ಬರಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನೀರನ್ನು ಮನೆಯಿಂದ ಹೊರಗೆ ಚೆಲ್ಲಿದರೆ ಬುಗುಡನಹಳ್ಳಿ ಕೆರೆ, ಕೆಆರ್‍ಎಸ್‍ನಲ್ಲಿರುವ ನೀರು ಎಲ್ಲಿಗೆ ಚೆಲ್ಲಬೇಕು.ಹೀಗಾಗಿಯೇ ಕುವೆಂಪು ಇಂತಹ ಮೌಢ್ಯ-ಕಂದಾಚಾರದಿಂದ ಹೊರಬೇಕೆಂದು ಕರೆ ನೀಡಿದ್ದು. ಪರೀಕ್ಷಿಸಿಕೊಳ್ಳದೆ, ವಿಚಾರ ಮಾಡದೆ, ಪ್ರಶ್ನಿಸಿಕೊಳ್ಳದೆ ಯಾವುದನ್ನೂ ನಂಬಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವೆಂದರ ಕುವೆಂಪು. ಸರ್ವರಿಗೂ ಸಮಪಾಲ, ಸಮಬಾಳು ಎಂದರು.
ಜಗತ್ತಿನ ಆದರ್ಶವೇ ಇದು. ಪ್ರಕ್ಷುಬ್ಧ ಭಾರತದಲ್ಲಿ ಇಂತಹ ಸಮಾನತೆ ಶಾಂತಿತೋಟದಂತಹ ಸಮಾಜ ನಿರ್ಮಾಣ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಸುಳ್ಳು ಸುದ್ದಿಗಳನ್ನು ನಂಬದೆ, ಹಿಂಸೆಗೆ ಪ್ರಚೋದನೆಗೆ ಕಾರಣವಾಗಬಾರದು. ಯುವಕರು-ಯುವತಿಯರು ಸೌಹಾರ್ದಯುತವಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಸುಜಾತ ಎಸ್. ಜಂಬಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೂಡಿಸಿಕೊಳ್ಳಬೇಕು. ಹಿರಿಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕುವೆಂಪು ವೇದಿಕೆಯ ಅಧ್ಯಕ್ಷ ಜಿ.ಎಂ.ಶ್ರೀನಿವಾಸಯ್ಯ ಕುವೆಂಪು ವಿಚಾರಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಜನಪರ ಚಿಂತಕ ಕೆ.ದೊರೈರಾಜ್ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ರಾಮಚಂದ್ರ, ಶರತ್ ಚಂದ್ರ, ಉಪನ್ಯಾಸಕರಾದ ಬಿ.ಆರ್.ರೇಣುಕಮ್ಮ, ಸಂಗೀತ, ಚಾರುಲತ, ಹೊನ್ನಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಎ.ಆರ್.ವನಿತ ವಂದಿಸಿದರು. ಉಪನ್ಯಾಸಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.