ಪಾವಗಡ: ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ, ಆರೋಗ್ಯ ಕಾರ್ಡ್ ಕೊಡಿಸಲು ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟದಲ್ಲಿ ಗುರುವಾರ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದಾ ಎಂ.ಗೌಡ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಪಡಿತರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊವಿಡ್ ಸಂಕಷ್ಠ ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರ ಬದುಕು ಅತಂತ್ರವಾಗಿದೆ. ರಾಜ್ಯದ 3 ಲಕ್ಷ ಶಿಕ್ಷಕರಿಗೆ ತಲಾ 5 ಸಾವಿರದಂತೆ 105 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಶೀಘ್ರ ಮತ್ತೊಂದು ಕಂತಿನ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು. ಹಣ ವಿತರಣೆ ಮಾಡುವಲ್ಲಿ ಭ್ರಷ್ಟಾಚಾರ ನಡೆಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ಶೀಘ್ರ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಿ, ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸುವಂತೆ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಡನೆ ಚರ್ಚಿಸಲಾಗುವುದು ಎಂದರು.
ಕೊವಿಡ್ ನಿಂದ ಸಾವನ್ನಪಿರುವ 125 ಕುಟುಂಬಗಳಿಗೆ ಚಿದಾನಂದಾ ಗೌಡರ ಸಹಕಾರದೊಂದಿಗೆ 10 ಸಾವಿರ ರೂ ವಿತರಣೆ ಮಾಡಲಾಗುವುದು. ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಈಗಾಗಲೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದರು.
ಆಗ್ನೇಯ ಪಧವೀದರರ ಕ್ಷೇತ್ರದ ಶಾಸಕ ಚಿದಾನಂದ್ ಎಂ.ಗೌಡ, ಸಮಾಜದ ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು 27 ಸಾವಿರ ಶಾಲೆಗಳಲ್ಲಿ 3 ಲಕ್ಷ ಶಿಕ್ಷಕರು ದುಡಿಯುತ್ತಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಅಕ್ಷರಷಃ ಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ಖಾಸಗಿ ಶಾಲಾ ಶಿಕ್ಷಕರು, ಉಪನ್ಯಾಸಕರಿಗೆ ಪಡಿತರ ಕಿಟ್ ವಿತರಿಸಲಾಯಿತು.
ಉಪ ನಿರ್ದೇಶಕ ರೇವಣಸಿದ್ದಪ್ಪ, ಬಿಇಒ ಅಶ್ವಥನಾರಾಯಣ, ಪ್ರಾಧ್ಯಾಪಕ ಶ್ರೀನಿವಾಸರೆಡ್ಡಿ, ಪ್ರಾಂಶುಪಾಲ ಕೆ.ಓ.ಮಾರಪ್ಪ, ಬಿಸಿಯೂಟ ಯೋಜನಾಧಿಕಾರಿ ಹನುಮಂತರಾಯಪ್ಪ, ವೈದ್ಯ ಕಿರಣ್, ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಸ್ವಾಮಿ, ಬಿಜಿಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಮುಖಂಡ ಡಾ.ಜಿ.ವೆಂಕಟರಾಮಯ್ಯ, ಕೃಷ್ಣನಾಯ್ಕ, ಶಿಕ್ಷಕರಾದ ಯತೀಶ್ ಕುಮಾರ್, ಬಸವರಾಜು, ನರಸಿಂಹ ಉಪಸ್ಥಿತರಿದ್ದರು.
ಪಾವಗಡದಲ್ಲಿ ಗುರುವಾರ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಧಾನ ಪರಿಷತ್ ಸದಸ್ಯರಾದ ವೈ ಎ ನಾರಾಯಣಸ್ವಾಮಿ, ಚಿದಾನಂದ ಎಂ ಗೌಡ ಪಡಿತರ ಕಿಟ್ ವಿತರಿಸಿದರು. ಉಪ ನಿರ್ದೇಶಕ ರೇವಣಸಿದ್ದಪ್ಪ, ಬಿಇಒ ಅಶ್ವಥನಾರಾಯಣ, ಪ್ರಾಧ್ಯಾಪಕ ಶ್ರೀನಿವಾಸರೆಡ್ಡಿ, ಬಿಜಿಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಮುಖಂಡ ಡಾ.ಜಿ.ವೆಂಕಟರಾಮಯ್ಯ, ಕೃಷ್ಣನಾಯ್ಕ ಉಪಸ್ಥಿತರಿದ್ದರು.