ತುರುವೇಕೆರೆ: ಪ್ರಕಾಶನ ಸಂಸ್ಥೆಗಳು ಪುಸ್ತಕೋದ್ಯಮದ ಲಾಭದಾಯಕ ಆಸಕ್ತಿ ಬಿಟ್ಟು ಸಮುದಾಯದಲ್ಲಿ ಅಕ್ಷರ ಮತ್ತು ಜ್ಞಾನ ಬಿತ್ತುವ ಚಳುವಳಿಗಳ ರೂಪ ಪಡೆಯಬೇಕು ಎಂದು ಖ್ಯಾತ ಬರಹಗಾರ, ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.
ಪಟ್ಟಣದ ಸರಸ್ವತೀ ಬಾಲಿಕಾ ಪೌಢಶಾಲೆಯಲ್ಲಿ ತಾಲ್ಲೂಕು ಕಸಾಪದ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು ಅವರು ನೂತನವಾಗಿ ಸ್ಥಾಪಿಸಿರುವ ಶನಯ ಪ್ರಕಾಶನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕಾಶನ ಸಂಸ್ಥೆಗಳು ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿದ ಜ್ಞಾನಶಾಖೆಗಳಾಗಬೇಕು. ಹೊಸ ಆಲೋಚನಾ ಕ್ರಮಗಳ,ನಾವೀನ್ಯತೆಯನ್ನು ಅವಿಷ್ಕರಿಸುವ, ಸತ್ಯಗಳನ್ನು ಆನ್ವೇಷಿಸುವ ಕೃತಿಗಳನ್ನು ಪ್ರಕಟಿಸಬೇಕು. ಪ್ರಕಾಶನ ಸಂಸ್ಥೆಗಳಿಗೆ ಸಾಮಾಜಿಕ ಚಳುವಳಿಗಳಿಗೆ ಕಾರ್ಯಸೂಚಿ ರೂಪಿಸುವ ಬದ್ಧತೆ ಇರಬೇಕಷ್ಟೇ ಅಲ್ಲದೆ ಅವು ಆರೋಗ್ಯಕರ ಚರ್ಚೆಗಳಿಗೆ ವೇದಿಕೆಯಾಗಬೇಕು. ಅನನ್ಯತೆ ಇಲ್ಲದ ಅಗ್ಗದ ಕೃತಿಗಳನ್ನು ಪ್ರಕಟಿಸುವುದರಿಂದ ಅವು ರದ್ದಿ ಸರಕಾಗುತ್ತವೆಯೇ ಹೊರತು ಬುದ್ದಿ ಚುರುಕಾಗಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಪ್ರಕಾಶನ ಸಂಸ್ಥೆಯ ಸ್ಥಾಪಕ ಸಾ.ಶಿ.ದೇವರಾಜ್ ಮಾತನಾಡಿ ನಮ್ಮ ಪ್ರಕಾಶನ ಸಂಸ್ಥೆ ಮೌಲ್ಯಯುತ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಮಹತ್ವ ನೀಡಲಿದೆ.ಜಿಲ್ಲಾ ಸಾಹಿತ್ಯ ಕುರಿತ ಸಮಗ್ರ ಸಂಪುಟವೊಂದನ್ನು ಪ್ರಕಟಿಸಲಾಗುವುದು. ಜೊತೆಯಲ್ಲೇ ಶಿಕ್ಷಣ, ಆರೋಗ್ಯ ಮತ್ತು ಆಹಾರ ಕ್ರಮಗಳನ್ನು ಕುರಿತಾದ ಕೃತಿಗಳನ್ನೂ ಪ್ರಕಟಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ದೇವರಾಜ್ ಕಳೆದ 2 ದಶಕಗಳಿಂದ ಸಾಹಿತ್ಯವಲಯದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಕುರಿತಾದ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಲಾಭದಾಯಕವಲ್ಲದ ಉದ್ಯಮಗಳನ್ನು ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಪ್ರಕಾಶನ ಸಂಸ್ಥೆ ಹುಟ್ಟುಹಾಕುತ್ತಿರುವ ಅವರ ಕನ್ನಡ ಪರ ಕಾಳಜಿ ಅನುಕರಣೀಯ ಮಾದರಿ ಎಂದು ಶ್ಲಾಘಿಸಿದರು.
ಶಯನ ಪ್ರಕಾಶನದ ಚೊಚ್ಚಲ ಕೃತಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅವರ ಗೇಯಗೀತೆಗಳ ಸಂಗ್ರಹ ‘ಸ್ವರಾಂಜಲಿ’ಯ ರಕ್ಷಾಪುಟವನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಲೇಖಕಿ ಉಷಾಶ್ರೀನಿವಾಸ್, ಕವಯತ್ರಿಯರಾದ ಜ್ಯೋತಿ ಸುಂಕಲಾಪುರ, ಜಲಜಾಕ್ಷಿ, ರೈತ ಮುಖಂಡ ಶ್ರೀನಿವಾಸ ಗೌಡ, ಲಕ್ಷ್ಮಣ್, ಸಮಾಜಸೇವಕ ಬಾಣಸಂದ್ರದ ಸ್ನೇಕ್ ರವಿಕುಮಾರ್, ಇವರನ್ನು ಸನ್ಮಾನಿಸಲಾಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ನಂ.ರಾಜು, ಬೆಂಗಳೂರು ನಗರ ಕಸಾಪ ಮಾಜಿ ಅಧ್ಯಕ್ಷ ಮಾಯಣ್ಣ, ಬರಹಗಾರ ತುರುವೇಕೆರೆ ಪ್ರಸಾದ್, ದಿನೇಶ್, ರಾಮಚಂದ್ರು, ಕೇಶವಮೂರ್ತಿ ಇತರರು ಉಪಸ್ಥಿತರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯೋತ್ಸವದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ತಂ.ಪಾ.ಚಂದ್ರಕೀರ್ತಿ, ಕೃಷ್ಣಮೂರ್ತಿ ಇತರರು ಕಾವ್ಯವಾಚನ ಮಾಡಿದರು.
ಫೋಟೋ: ತುರುವೇಕೆರೆಯ ಸರಸ್ವತೀ ಬಾಲಿಕಾ ಪೌಢಶಾಲೆಯಲ್ಲಿ ತಾಲ್ಲೂಕು ಕಸಾಪದ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು ಅವರು ನೂತನವಾಗಿ ಸ್ಥಾಪಿಸಿರುವ ಶನಯ ಪ್ರಕಾಶನದ ಉದ್ಘಾಟನಾ ಸಮಾರಂಭದಲ್ಲಿ ಡಾ.ಕವಿತಾಕೃಷ್ಣ ಅವರ ಸ್ವರಾಂಜಲಿ ಕೃತಿಯ ಮುಖಪುಟವನ್ನು ಅನಾವರಣಗೊಳಿಸಲಾಯಿತು.
ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಕೊಂಡಜ್ಜಿ ವಿಶ್ವನಾಥ್, ಸಾ.ಶಿ.ದೇವರಾಜು ಇತರರು ಚಿತ್ರದಲ್ಲಿದ್ದಾರೆ.