Public story.in
ತುಮಕೂರು: ವಕೀಲರಲ್ಲಿ ವೃತ್ತಿ ಗೌರವ, ಕೆಲಸದ ಬದ್ಧತೆ, ಸಂಘಟನೆಯ ಬಲ ಹೆಚ್ಚಾಗಬೇಕಾಗಿದೆ ಎಂದು ಹಿರಿಯ ವಕೀಲರೂ ಆದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಕಾನೂನು ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಹಿರಿಯ ವಕೀಲರಾದ ಬಿಳಿಗೆರೆ ಶಿವಕುಮಾರ್ ಹಾಗೂ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಹೋರಾಟದಲ್ಲಿ ನಾನು ಕಳೆದುಕೊಂಡಿದ್ದೆ ಹೆಚ್ಚು. ಹಣ, ನನ್ನ ಕುಟುಂಬದ ಸಮಯ, ಯೌವನ ಎಲ್ಲವನ್ನು ಕಳೆದುಕೊಂಡೆನು. ಪ್ರಾಮಾಣಿಕತೆಯ ಹೋರಾಟಗಾರರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆದರೂ ಪ್ರಾಮಾಣಿಕತೆಯನ್ನು ಬಿಡಬಾರದು ಎಂದರು.
ವಕೀಲ ಬಿಳಿಗೆರೆ ಶಿವಕುಮಾರ್ ಮಾತನಾಡಿ, ತಮ್ಮ ಮೂವತ್ತು ನಾಲ್ಕು ವರ್ಷಗಳ ವಕೀಲ ವೃತ್ತಿಯಲ್ಲಿ ಕಲಿಯಬೇಕಾದದ್ದು ಇನ್ನೂ ಇದೆ. ವಕೀಲರಲ್ಲಿ ಕಲಿಕೆಗೆ ಕೊನೆ ಎಂಬುದಿಲ್ಲ ಎಂಬುದನ್ನು ಕಿರಿಯ ವಕೀಲರು ಮರೆಯಬಾರದು ಎಂದರು.
ವಕೀಲರಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಕಾಳೆಲೆಯುವ ಗುಣ ಹೆಚ್ಚುತ್ತಿದೆ ಎಂದು ವಿಷಾದಿಸಿದ ಅವರು ಇದು ಸಲ್ಲದು. ಇದನ್ನು ಬಿಡಬೇಕು. ಸಹೋದರತೆಯೇ ವಕೀಲ ವೃತ್ತಿಯ ಜೀವಾಳ ಎಂಬುದನ್ನು ಮರೆಯಬಾರದು ಎಂದರು.
ವಕೀಲ ವೃತ್ತಿಯ ಆರಂಭದ ಕಷ್ಟಗಳನ್ನು ಮೆಲುಕು ಹಾಕಿದ ಅವರು ಜತೆಗೆ ರೋಟರಿ, ಜಿಲ್ಲಾ ಕಮಾಂಡೆಂಟ್ ಆಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.
ವಕೀಲರಾದ ಎಸ್. ರಮೇಶ್ ಮಾತನಾಡಿ, ಬದ್ಧತೆ ಮತ್ತು ವೃತ್ತಿ ಘನತೆ ಮೆರೆಯಬೇಕು. ಈ ಎರಡನ್ನು ಬಿಡಬಾರದು. ಇಂತಹ ವಕೀಲರೊಂದಿಗೆ ಜನರು ಯಾವಾಗಲೂ ನಿಲ್ಲುತ್ತಾರೆ ಎಂದರು.
ಅತ್ಯಂತ ಕಷ್ಟ ಬಂದರೂ ಶ್ರೀರಾಮ ಪ್ರಾಮಾಣಿಕತೆ, ನೈತಿಕತೆ ಬಿಡಲಿಲ್ಲ. ತನ್ನಲ್ಲಿ ಕಡಿಮೆ ಸೈನ್ಯ ಇದ್ದರೂ ರಾವಣನ ಅಗಾಧ ಸೈನ್ಯ ಸೋಲಿಸಿದ. ರಾಮನ ಪ್ರಾಮಾಣಿಕತೆ, ನೈತಿಕತೆ ನೋಡಿ ಕಪಿಗಳು ರಾಮನ ಪರ ನಿಂತವು. ನಿಜ ಜೀವನದಲ್ಲೂ ಪ್ರಾಮಾಣಿಕರಿಗೆ ಕಷ್ಟಗಳು, ಸವಾಲುವಳು ಹೆಚ್ಚು. ಅವರೇ ಸಹ ಗೆಲ್ಲುವರು ಎಂದರು.
ನ್ಯಾಯಾಂಗದ ಬದ್ಧತೆ, ಕ್ರಿಯಾಶೀಲತೆಯ ಬಗ್ಗೆ ಯಾರಿಗೂ ಅನುಮಾನ ಬೇಡ. ನ್ಯಾಯಾಂಗವನ್ನು ಸಡಿಲಗೊಳಿಸಲು ಯಾರಿಂದಲೂ ಸಾಧ್ಯವಾಗದು. ಅಂತಹ ಅಡಿಪಾಯವನ್ನು ನಾನೀ ಪಾಲ್ಕಿವಾಲ ಸೇರಿದಂತೆ ಹಲವರು ಹಾಕಿಕೊಟ್ಟಿದ್ದಾರೆ. ನ್ಯಾಯಾಂಗ ಉಳಿಸುವ ದೊಡ್ಡ ಪಡೆಯೇ ನಮ್ಮ ನಿಮ್ಮೆಲ್ಲರ ನಡುವೆ ಇದೆ. ನ್ಯಾಯಾಂಗದ ಬಗ್ಗೆ ಕಳವಳ ಪಡುವ ಅಗತ್ಯವೇನಿಲ್ಲ ಎಂದರು.
ಹಿರಿಯ ವಕೀಲರಾದ ಜಯಣ್ಣ, ಕಾಂತರಾಜು, ನವೀನ್, ಮನೋಹರ್, ಕರಿಬಸವಯ್ಯ ಇದ್ದರು.
ವಕೀಲರಾದ ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ ವಂದಿಸಿದರು.