Publicstory. in
ತುಮಕೂರು: ವನ್ಯಜೀವಿ ಸಂರಕ್ಷಣೆ ಒಂದು ದಿನದ ಕೆಲಸವಲ್ಲ. ಅದು ನಿರಂತರ ಕಾರ್ಯವಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮೇವಾ ಸಿಂಗ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ವಿಭಾಗವು ಮಂಗಳವಾರ ಏರ್ಪಡಿಸಿದ್ದ ‘ಭಾರತೀಯ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣೆ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಜೀವ ವೈವಿಧ್ಯ ತಾಣಗಳ ಕುರಿತು ಮಾಹಿತಿ ನೀಡಿದ ಅವರು ಅಂತಹ ತಾಣಗಳನ್ನು ಸಂರಕ್ಷಿಸುವ ಸಮಾಜದ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಲಯನ್ ಟೈಲ್ಡ್ ಮಕ್ಯಾಕ್ಯು ಜಾತಿಯ ಮಂಗಗಳು ಹಾಗೂ ಬಾನೆಟ್ ಮಕ್ಯಾಕ್ಯು ಜಾತಿಯ ಮಂಗಗಳ ಹೋಲಿಕೆ ಮಾಡುತ್ತಾ ಅವುಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಮಂಗಗಳು ಅದರ ವಿವಿಧ ಪ್ರಭೇದಗಳ ಬಗ್ಗೆ ಸಂಶೋಧನೆ ನಡೆಸಿರುವ ಪ್ರೊ. ಸಿಂಗ್ ಲಯನ್ ಟೈಲ್ಡ್ ಮಕ್ಯಾಕ್ಯು ಜಾತಿಯ ಮಂಗಗಳು ಅಳಿವಿನಂಚಿನಲ್ಲಿದ್ದು, ಇದಕ್ಕೆ ಆವಾಸಸ್ಥಾನ ವಿಘಟನೆ, ಬೇಟೆ, ಆವಾಸಸ್ಥಾನ ಅವನತಿ, ಅವಘಡಗಳು ಕಾರಣ ಎಂದು ತಿಳಿಸಿದರು.
ಕಾಡುಗಳು ನಾಶವಾಗುತ್ತಿರುವ ಕಾರಣ ಈ ಜಾತಿಯ ಮಂಗಗಳು ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ರಸ್ತೆ ಅಪಘಾತಗಳಲ್ಲಿ ಹಾಗೂ ವಿದ್ಯುತ್ ಅವಘಡಗಳಿಂದ ಇದರ ಸಂಖ್ಯೆ ನಶಿಸುತ್ತಿದ್ದು, ಅಳಿವಿನಂಚಿಗೆ ತಲುಪಿದೆ. ಈ ಜಾತಿಯ ಮಂಗಗಳನ್ನು ಸಂರಕ್ಷಿಸಲು ಸರ್ಕಾರದಿಂದ ರೂಪಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ, ದೇಶದಲ್ಲಿ ವನ್ಯಜೀವಿಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆದರೂ ಅವುಗಳ ಅಳಿವು ಕಡಿಮೆಯಾಗುತ್ತಿಲ್ಲ. ವನ್ಯಜೀವಿಗಳ ಸಂರಕ್ಷಣೆ ಮಾಡುವುದು ಸಂವಿಧಾನದಲ್ಲಿ ಇರುವ ಒಂದು ಕರ್ತವ್ಯವಾಗಿದ್ದರೂ ಅದನ್ನು ನಾವು ನಿರ್ವಹಿಸುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ ವಿ ಯ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಬಿ. ಆರ್. ಶಾಲಿನಿ. ಪರಿಸರ ವಿಜ್ಞಾನ ವಿಭಾಗದ ಸಂಯೋಜಕರಾದ ಡಾ. ರಾಜಾನಾಯ್ಕ ಎಚ್. ಉಪಸ್ಥಿತರಿದ್ದರು.