ತುಮಕೂರು ಲೈವ್

ವರ್ಷದ ಮೊದಲ ದಿನ ಕಂಡಿದ್ದು, ಕೇಳಿದ್ದು….!

ತುಳಸೀತನಯ


ವಾಚು, ಮೊಬೈಲ್ಗಳಲ್ಲಿ ರಾತ್ರಿ 12 ಗಂಟೆ ತೋರಿಸುವುದೇ ತಡ ಇಡೀ ಊರು ಪಟಾಕಿಗಳ ಸದ್ದಿನಿಂದ ಮೊಳಗಿತ್ತು.

ಅರೇ..? ಏನಿದು ಎನ್ನುವಷ್ಟರಲ್ಲಿ `ಹ್ಯಾಪಿ ನ್ಯೂ ಇಯಿರ್…!’ ಎಂದು ಕಿರುಚುತ್ತಿದ್ದ ಸದ್ದು ಒಮ್ಮೆಲೆ ಗಂಟೆ ಭಾರಿಸಿದಂತೆ ಧ್ವನಿಗೂಡಿತ್ತು. `ವಿಷ್ ಯೂ ಹ್ಯಾಪಿ ನ್ಯೂ ಇಯರ್’ ಎಂದು ವಿಚಿತ್ರ ಧ್ವನಿಯಲ್ಲಿ ಕಿರುಚಿದ ಸದ್ದು ಕೇಳಿದ ತಕ್ಷಣ ಆಗಷ್ಟೆ ನಿದ್ದೆಗೆ ಜಾರಿದ್ದವರು ದಡಬಡಾಯಿಸಿ ಮೇಲೆದ್ದು ಹೊರಗೆ ಓಡಿ ಬಂದರು.

ಯುವಕರ ಗುಂಪು ಬೈಕ್ಗಳಲ್ಲಿ ಜೋರಾಗಿ ಹಾರನ್ ಮಾಡಿಕೊಂಡು ಓಡಿಸುತ್ತಾ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮೈ ಮರೆತ್ತಿದ್ದರು.

ಮತ್ತೇರಿದ ಸಂಭ್ರಮದಲ್ಲಿದ್ದ ಯುವಕರನ್ನು ಕಂಡ ಹಿರಿಯರು ಅವರ ಅವತಾರ ಕಂಡು `ಅಯ್ಯೋ ಇವಕ್ಕೇನ್ ಬಂದಯ್ತೋ, ನಾಯ್ ಅರಚಿದ್ಹಂಗೆ ಅರುಚ್ತಾವೆ, ಕುಡ್ದಿರೋದು ಹೊಟ್ಟೆಗೆ ಇರಲ್ಲಾ ಅಂತದಾ..’ ಎಂದು ಗೊಣಗಾಡುತ್ತ ಮತ್ತೆ ನಿದ್ದಗೆ ತಲೆಹಾಕಿದರು.

ರಾತ್ರಿ ಒಂದು ಗಂಟೆ ವರೆಗೂ ಜನ ಇನ್ನೂ ಕ್ರಿಯಾಶೀಲರಾಗಿದ್ದರು. ಬೇಕರಿ, ಕೇಕ್ ಪಾರ್ಲರ್ಗಳು ರಾತ್ರಿಯಾದರೂ ಜನರಿಂದ ಕೂಡಿದ್ದವು.

ಒಂದು, ಎರಡು, ಐದು, ಹತ್ತು ಕೆಜಿ ಹೀಗೆ ಕೇಕ್ ಕೊಳ್ಳುವಲ್ಲಿ ಜನ ಬ್ಯುಸಿಯಾಗಿದ್ದರು. ಅದರಲ್ಲೂ ಯುವಕರ ದಂಡು ತಮಗೆ ಇಷ್ಟ ಬಂದ ರೀತಿಯಲ್ಲಿ ಕೇಕ್ ಡಿಸೈನ್ ಮಾಡಿಸಿ ಅದರ ಮೇಲೆ ಬಣ್ಣಬಣ್ಣದಲ್ಲಿ ಹೆಸರು ಬರೆಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯ ವೆನಿಸಿತ್ತು.

ಮನೆಯಲ್ಲಿನ ಸಣ್ಣ ಮಕ್ಕಳ ಕಾಟಕ್ಕೆ ತಾಳಲಾರದೆ ಬಹಳಷ್ಟು ಜನ ಕುಟುಂಬದ ಜೊತೆ ಆಚರಣೆ ಮಾಡಲು ಮಕ್ಕಳೊಂದಿಗೆ ಅಂಗಡಿಗೆ ಬಂದು ಕೇಕ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದದ್ದು ಕಂಡಿತು.

ಬಟ್ಟೆ ಅಂಗಡಿಗಳು ಎರಡು ದಿನ ಮುಂಚಿತವಾಗಿಯೇ ಬ್ಯುಸಿಯಾಗಿದ್ದವು.
ಬುಧವಾರ ಮುಂಜಾನೆ ಹೊಸ ವರ್ಷದ್ದೇ ರಂಗು. ದಾರಿಯಲ್ಲಿ ಯಾರು ಸಿಕ್ಕರೂ `ಹ್ಯಾಪಿ ನ್ಯೂ ಇಯರ್’ ಎಂಬ ಹಾರೈಕೆ ಕೇಳಿ ಬರುತ್ತಿತ್ತು. ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಂತೂ ಸಂಭ್ರಮವೋ ಸಂಭ್ರಮ.

ಸಮವಸ್ತ್ರ ತೊಡುವ ಬದಲು ಹೊಸ ಬಟ್ಟೆ ತೊಟ್ಟು ಮೆರೆದವರ ಸಂಖ್ಯೆಯೇ ಹೆಚ್ಚಾಗಿತ್ತು. ಕೇಕ್, ಸಿಹಿತಿಂಡಿ ಖರೀದಿಗೆ ಜನ ಜಾತ್ರೆ ಸೇರಿತ್ತು. ಕಾಲೇಜುಗಳಲ್ಲಿ ಯುವ ವಿದ್ಯಾರ್ಥಿ ಹಾಜರಿ ಕಡಿಮೆಯಾಗಿತ್ತು. ಹದಿ ಹರಯದ ಜೋಡಿಹಕ್ಕಿಗಳ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದವು. ವಿವಿಧ ಏಕಾಂತ ಸ್ಥಳಗಳಲ್ಲಿ ಬ್ಯುಸಿಯಾಗಿದ್ದರು.

`ಏನ್ ಸ್ವಾಮಿ ನ್ಯೂ ಇಯರ್ ಸೆಲಬರೇಷನ್ ಜೋರಾ..? ರಾಥ್ರಿ ಎಲ್ಲಿ ಪಾರ್ಟಿ ಮಾಡಿದ್ರಿ..? ಪಾರ್ಟಿ ಗುಂಗು ಇನ್ನೂ ಇಳಿದ್ಹಂಗೆ ಕಾಣ್ತಿಲ್ಲ. ಮುಖ ನೋಡುದ್ರೆ ರಾತ್ರಿ ಗುಂಡು, ತುಂಡು ಜೋರಾಗೆ ಇದ್ಹಂಗೆ ಕಾಣ್ತದೆ’ ಎಂಬ ಪ್ರಶ್ನೆಗೆ ಉತ್ತರವಾಗಿ ` ಇಲ್ಲಾ ಗುರು.. ಫ್ರೆಂಡ್ಸ್ ಯಾವೋನೋ ಮಿಕ್ಸ್ ಮಾಡಿ ಯಡವಟ್ಟಾಯ್ತು.. ತಲೆ ಇನ್ನೂ ದಿಂಬಿಡ್ಕಂಡದೆ. ರಾತ್ರಿ ಎರ್ಡು ಕಡೆ ಪಾರ್ಟಿ ಮನೆಗೆ ಇನ್ನೂ ಹೋಗಿಲ್ಲ’ ಎಂಬೆಲ್ಲಾ ಸಂಭಾಷಣೆಗಳು ಸಾಮಾನ್ಯವಾಗಿದ್ದವು.

ವಾಟ್ಸ್ ಆಫ್, ಫೇಸ್ ಬುಕ್, ಮೆಸೆಂಜರ್ ಗಳಲ್ಲಿ ಶುಭಾಶಯ ಮೆಸೇಜ್ ಗಳು ಎರಡು ದಿನ ಮುಂಚಿತವಾಗಿಯೇ ಹರಿದಾಡತೊಡಗಿದವು.

ಗ್ರೂಪ್ ಗಳಲ್ಲಿ ಬರುತ್ತಿದ್ದ ಮೆಸೇಜ್ ಗಳನ್ನು ನೋಡಿ ಕೆಲವರು `ಬಂದಿರುವ ಶುಭಾಶಯ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಒಬ್ಬ ಆಳನ್ನು ಇಟ್ಟುಕೊಳ್ಳಬೇಕು. ಇಲ್ವಾ ಮೂರು ದಿನ ಕೂತ್ಕಂಡ್ ಡಿಲೀಡ್ ಮಾಡುವಷ್ಟು ಮೊಬೈಲ್ ತುಂಬೋಗಿದೆ’ ಅಂತಾ ಮಾತನಾಡಿಕೊಂಡರು.

`ಇದೇನ್ ಹೊಸ ವರ್ಷ ಗುರು ನಮ್ಮ ಕಾಲದಲ್ಲಿ ಹೊಸ ವರ್ಷ ಇನ್ನೂ ತಿಂಗಳಿರುವಾಗಲೇ ತರ ತರದ ಗ್ರೀಟಿಂಗ್ ಹುಡುಕಿ ಅವುಗಳಲ್ಲಿ ಸ್ವ-ರಚಿತ ಕವನ ಬರೆದು ಪ್ರೀತಿ, ವಿಶ್ವಾಸ ತೋರಿಸ್ತಿದ್ವಿ ಈಗ ಮೊಬೈಲ್ ಬಂದು ` ಹ್ಯಾಪಿ ನ್ಯೂ ಇಯರ್ ಅಂತಾ’ ಒಂದೇ ಒಂದು ಮೆಸೇಜಲ್ಲೇ ಎಲ್ಲಾ ಮುಗಿಸಿ ಬಿಡ್ತಾರೆ. ಅದೂ ಸ್ವಂತದಂತೂ ಅಲ್ವೇ ಅಲ್ಲ ಫಾರ್ವರ್ಡ್ ಮೆಸೇಜ್’ ಭಾಂಧವ್ಯಗಳು ದೂರಾಗುತ್ತಿರುವ ಬಗ್ಗೆ ಕೆಲವರು ಬೇಸರಿಸಿಕೊಂಡರು.

Comment here