Friday, June 21, 2024
Google search engine
Homeಜನಮನವಸತಿ ಯೋಜನೆಗಳಿಗೆ ಹಣದ ಗ್ರಹಣ: ಬೀಳುತ್ತಿವೆ ಅರ್ಧಕಟ್ಟಿದ ಮನೆಗಳು

ವಸತಿ ಯೋಜನೆಗಳಿಗೆ ಹಣದ ಗ್ರಹಣ: ಬೀಳುತ್ತಿವೆ ಅರ್ಧಕಟ್ಟಿದ ಮನೆಗಳು

ಶಿಥಿಲಾವಸ್ಥೆ ತಲುಪಿ ಅಪಾಯಕಾರಿಯಾಗಿದ್ದ ತಿಮ್ಮಕ್ಕನ ಹಳೇ ಮನೆತುರುವೇಕೆರೆ ಪ್ರಸಾದ್


ತುರುವೇಕೆರೆ: ಮನೆ ಎನ್ನುವುದು ಶಾಂತಿ ನೆಮ್ಮದಿಯ ತಾಣ.ವಿಶ್ರಾಂತಿ, ನಿರಾಳತೆಗೊಂದು ನೆರಳೆಂದರೆ ಅದು ಮನೆಯೇ! ಪಶು, ಪಕ್ಷಿಗಳೂ ತಮ್ಮದೇ ಆದ ಗೂಡನ್ನು, ನೆಲೆಯನ್ನು ನಿರ್ಮಿಸಿಕೊಳ್ಳುತ್ತವೆ. ಇನ್ನು ಮನುಷ್ಯ ತಲೆಯ ಮೇಲೊಂದು ಸೂರಿರಬೇಕು ಎಂದು ಹಂಬಲಿಸುವುದರಲ್ಲಿ ಯಾವ ಅಚ್ಛರಿಯೂ ಇಲ್ಲ.ಸ್ವಂತ ಸೂರು ನಿರ್ಮಿಸಿಕೊಳ್ಳುವ ಆಸೆ, ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಮನೆಯ ಅವಶ್ಯಕತೆ ಎನುವುದು ಆಳಿನಿಂದ ಅರಸನವರೆಗೂ ಅನಿವಾರ್ಯವಾದುದು.:ಫಲಾನುಭವಿಯೊಬ್ಬರು ಅರ್ಧಕಟ್ಟಿ ನಿಂತ ಮನೆಯಲ್ಲೇ ವಾಸಿಸುತ್ತಿರುವುದು.ಎಷ್ಟೇ ಆಸೆ ಕನಸುಗಳಿದ್ದಾಗಲೂ ಲಕ್ಷಾಂತರ ಬಡವರಿಗೆ ಕೊನೆಯ ಉಸಿರು ಚೆಲ್ಲುವ ತನಕ ಮನೆಯೆಂಬುದು ಮರೀಚಿಕೆಯಾಗಿಯೇ ಉಳಿದುಹೋಗುತ್ತದೆ. ಸ್ವಂತ ಮನೆಯ ಕನಸಿನಲ್ಲೇ ಜೀವನ ಪೂರಾ ಸವೆದುಹೋಗುತ್ತದೆ.ಇಂತಹ ಬಡವರ ಕನಸನ್ನು ನನಸು ಮಾಡಿ ಅವರಿಗೊಂದು ಶಾಶ್ವತ ಆಶ್ರಯ ಕಲ್ಪಿಸಲೆಂದೇ ಹಲವಾರು ವಸತಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಈ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರಗಳು ಲಕ್ಷಾಂತರ ಮನೆಗಳನ್ನು ನಿರ್ಮಿಸಿಕೊಟ್ಟಿರುವುದೂ ನಿಜ.ಆದರೆ ಕಳೆದೊಂದು ವರ್ಷದಿಂದ ಈ ಯೋಜನೆ ರೋಗಗ್ರಸ್ಥವಾಗಿದೆ.ಅದಕ್ಕೆ ಕರೋನಾ ಶಾಪವೂ ತಗಲಿ ಅರ್ಧಂಬರ್ಧ ಮನೆ ನಿರ್ಮಿಸಿಕೊಂಡ ಹಿಂದುಳಿದ ವರ್ಗದ ಜನರು ಅತ್ತ ಅರ್ಧ ಕಟ್ಟಿದ ಮನೆಯನ್ನು ಪೂರ್ಣಗೊಳಿಸಲೂ ಆಗದೆ, ಬೇರೆಡೆ ಆಶ್ರಯವೂ ಇಲ್ಲದೆ ತ್ರಿಶಂಕುಗಳಾಗಿದ್ದಾರೆ.ರಾಜ್ಯದಲ್ಲಿ ಬಸವ ವಸತಿ ಯೋಜನೆ, ಬಿ.ಆರ್.ಅಂಬೇಡ್ಕರ್ ವಸತಿ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ ಇವುಗಳಡಿ ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಸುಮಾರು 29 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 9.74 ಲಕ್ಷ ಮನೆಗಳು ಪೂರ್ಣವಾಗದೆ ಅಂತಂತ್ರ ಸ್ಥಿತಿಯಲ್ಲಿವೆ.ಕಳೆದ 2 ವರ್ಷಗಳಿಂದ ಇವರಿಗೆ ಯಾವ ಸಹಾಯಧನವೂ ಬಿಡುಗಡೆ ಆಗಿಲ್ಲ. ಫಲಾನುಭವಿಗಳ ವಂತಿಕೆಯನ್ನು ಸರ್ಕಾರಕ್ಕೆ ತುಂಬಲು ಕೆಲವರು ಸಾಲ ಮಾಡಿದ್ದಾರೆ. ಅರ್ಧಬಂರ್ಧ ಮನೆ ಕಟ್ಟಿಕೊಂಡಿದ್ದಾರೆ. ಹಾಗೆ ಕಟ್ಟಿರುವ ಮನೆಗಳು ಗಾಳಿ, ಮಳೆಗೆ ಸಿಕ್ಕಿ ಶಿಥಿಲಗೊಳ್ಳುತ್ತಿವೆ. ಬೇರೆಡೆ ಆಶ್ರಯವಿಲ್ಲದೆ, ಮನೆಯನ್ನೂ ಕಟ್ಟಿಕೊಳ್ಳಲಾಗದ ಬಡವರು ಅರ್ಧ ಕಟ್ಟಿದ ಮನೆಗೇ ಸೋಗೆ, ತಗಡಿನ ಸೂರು ಕಟ್ಟಿಕೊಂಡು ಬಾಗಿಲು, ಕಿಟಕಿಗಳಿಲ್ಲದೆ ಪ್ರಾಣಿಗಳಂತೆ ದಿನಗಳೆಯಬೇಕಾದ ದುಸ್ಥಿತಿ ತಲುಪಿದ್ದಾರೆ.ಸದರಿ ವಸತಿ ಯೋಜನೆಗಳಿಗೆ ಕೇಂದ್ರಸರ್ಕಾರದಿಂದ ರೂ. 6511 ಕೋಟಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರೂ. 993 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಂದ 295 ಕೋಟಿ, ಪೌರಾಡಳಿತ ನಿರ್ದೇಶನಾಲಯದಿಂದ ರೂ. 141 ಕೋಟಿ ಹಣ ಬಿಡುಗಡೆಯಾಗಬೇಕಿದೆ. ಈ ಯಾವ ಸಂಸ್ಥೆಗಳೂ ತಮಗೆ ನಿಗಧಿಪಡಿಸಿದ ಗುರಿಯಂತೆ ವಸತಿ ಯೋಜನೆಗೆ ಹಣ ಒದಗಿಸಿಲ್ಲ.ಈ ಮೊತ್ತದ ಜೊತೆಗೆ ಸರ್ಕಾರ ತನ್ನ ಪಾಲಿನ ರೂ. 10,194 ಕೋಟಿ ರೂ ಬಿಡುಗಡೆ ಮಾಡಬೇಕಿದೆ. ಕಳೆದ 7-8 ತಿಂಗಳಿನಿಂದ ಕರೋನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನುವುದೇನೋ ನಿಜ. ಆದರೆ ಅದಕ್ಕೂ ಮುಂಚೆ ಒಂದೂವರೆ ವರ್ಷ ಈ ಯೋಜನೆಗೆ ಸರ್ಕಾರಗಳು ಹಾಗೂ ಇತರೆ ಸಂಸ್ಥೆಗಳು ನಿಗಧಿತ ಹಣ ಬಿಡುಗಡೆ ಮಾಡುವಲ್ಲಿ ಕಾಳಜಿ ತೋರಿಸಿಲ್ಲ ಎಂಬುದು ಮೇಲಿನ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.ಈ ಯೋಜನೆಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂಬ ವದಂತಿ ಹರಡಿದ್ದ ಹಿನ್ನಲೆಯಲ್ಲಿ ಸರ್ಕಾರ ವಿಶಲ್ ಆಪ್ ಮೂಲಕ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಾಚಾತನ ಪರೀಕ್ಷೆಮಾಡುವ ನಾಟಕವನ್ನೂ ಮಾಡಿ ಆಗಿದೆ. ಈ ಪರೀಕ್ಷೆಗೆ ಆಯ್ದುಕೊಂಡು ಫಲಾನುಭವಿಗಳಿಗೂ ಸಹ ಇಲ್ಲಿಯವರಿಗೆ ಒಂದು ಪೈಸೆ ಅನುದಾನ ಬಿಡುಗಡೆ ಆಗಿಲ್ಲ.ರಾಜೀವ್ಗಾಂಧಿ ವಸತಿ ನಿಗಮ ಕಳೆದ ಜೂನ್ನಲ್ಲಿ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಅಪೂರ್ಣವಾಗಿರುವ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಪಾಲು ರೂ. 10,194 ಕೋಟಿ ಬಿಡುಗಡೆ ಮಾಡುವಂತೆ ಕೋರಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಜೂನ್ 23ರಂದು ನಡೆದ ಸಂಪುಟ ಸಭೆಯಲ್ಲಿ ಸದರಿ ಹಣ ಬಿಡುಗಡೆಗೆ ಒಪ್ಪಿ ಶರತ್ತುಬದ್ದ ಅನುಮೋದನೆ ನೀಡಿದೆ. ಆ ಪ್ರಕಾರ ಬಾಕಿ ಇರುವ 9.74 ಲಕ್ಷ ಮನೆಗಳ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಸದರಿ 10, 194ಕೋಟಿಯನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಈಗಿರುವ ಗುರಿಯನ್ನು ಪೂರ್ಣಗೊಳಿಸುವವರೆಗೆ ಹೊಸ ಗುರಿಗಳನ್ನು ಪರಿಗಣಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.ಇದಾದ ನಂತರ ಮೂರು ತಿಂಗಳು ಕಳೆದರೂ ಒಂದು ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ.ತಮಾಷೆಯ ಸಂಗತಿ ಎಂದರೆ ಈ ಯೋಜನೆಗಳಡಿ ಯಾವ ಅನುದಾನ ಬಿಡುಗಡೆ ಆಗಿಲ್ಲದಿದ್ದರೂ, ಲಕ್ಷಾಂತರ ಬಡಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದರೂ, ಹೊಸ ಯೋಜನೆ ಗುರಿಗಳನ್ನು ಪರಿಗಣಿಸಬಾರದು ಎಂಬ ಷರತ್ತು ವಿಧಿಸಿದ್ದರೂ ವಸತಿ ಸಚಿವ ಶ್ರೀ ಸೋಮಣ್ಣನವರು ಇತ್ತೀಚೆಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಲಾ 20 ಮನೆಗಳಂತೆ 1.55 ಲಕ್ಷ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.188 ವಿಧಾನಸಭಾ ಕ್ಷೇತ್ರಗಳಲ್ಲಿ 97,134 ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು, ವಸತಿ ಇಲಾಖೆಗೆ ಹಣದ ಕೊರತೆ ಇಲ್ಲ ಎಂದಿದ್ದಾರೆ. ಹಣದ ಕೊರತೆ ಇಲ್ಲ ಎಂದ ಮೇಲೆ ಅರ್ಧಂಬರ್ಧ ಮನೆ ಕಟ್ಟಿಕೊಂಡು ಒದ್ದಾಡುತ್ತಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಏಕೆ ಕೂಡಲೇ ಅನುದಾನ ಬಿಡುಗಡೆ ಮಾಡಬಾರದು? ಮನೆ ನಿರ್ಮಾಣದ ಹೊಸ ಗುರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಸಂಪುಟ ಸಭೆಯಲ್ಲೇ ತೀರ್ಮಾನವಾಗಿದ್ದರೂ ಸಚಿವರು ಯಾವ ಆದಾಯ, ಸಂಪನ್ಮೂಲದ ಆಧಾರದ ಮೇಲೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸ ಮನೆಗಳನ್ನು ನೀಡುವ ಭರವಸೆ ನೀಡುತ್ತಿದ್ದಾರೆ?ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ನೀಡಿರುವ 1.8 ಲಕ್ಷ ಮನೆಗಳಲ್ಲಿ ಕೇವಲ 34,900 ಮನೆಗಳನ್ನಷ್ಟೇ ಸದ್ಯದಲ್ಲಿ ಹಸ್ತಾಂತರಿಸುವುದಾಗಿ ಸಚಿವರೇ ತಿಳಿಸಿದ್ದಾರೆ.ಇನ್ನು 1.46 ಲಕ್ಷ ಮನೆಗಳು ಸಿದ್ಧವಾಗುವುದು ಯಾವ ಕಾಲಕ್ಕೋ? ಪರಿಸ್ಥಿತಿ ಹೀಗಿರುವಾಗ ಸಚಿವರ ಹೇಳಿಕೆಗೆ ಯಾವ ಅರ್ಥ, ಬದ್ಧತೆ ಇದೆ ಎಂಬುದೇ ಅರ್ಥವಾಗದ ಸಂಗತಿಯಾಗಿದೆ.ಸಂಪುಟ ಸಭೆಯಲ್ಲಿ ರೂ.10,194ಕೋಟಿ ಬಿಡುಗಡೆಗೆ ಅನುಮೋದನೆ ಸಿಕ್ಕಿರುವುದೇನೋ ನಿಜ, ಆದರೆ ಅದು ಹಂತವಾಗಿ ಮುಂದಿನ ಮೂರು ವರ್ಷದಲ್ಲಿ ಬಿಡುಗಡೆಯಾಗುವುದು ಎಂಬುದನ್ನು ನೆನಪಿಡಬೇಕು. ಅದರಲ್ಲೂ ಈಗಿರುವ ಆರ್ಥಿಕ ಬಿಕ್ಕಟ್ಟಿನಲ್ಲಿ ಸರ್ಕಾರ ಈ ಸಾಲಿಗೆ ಸುಮಾರು ರೂ.3500 ಕೋಟಿ ಬಿಡುಗಡೆ ಮಾಡುತ್ತದೆ ಎಂಬ ಯಾವ ಖಾತರಿಯೂ ಇಲ್ಲ.ಇತರೆ ಸರ್ಕಾರಿ ಸಂಸ್ಥೆಗಳೂ ನಿಗಧಿತ ಹಣವನ್ನು ಬಿಡುಗಡೆ ಮಾಡುತ್ತವೆ ಎಂದು ನಂಬುವಂತಿಲ್ಲ. ಹಾಗಾಗಿ ಇನ್ನೂ 2-3 ವರ್ಷಗಳು ಬಡವರು ತಮ್ಮ ಕನಸು ನನಸಾಗುತ್ತದೆ ಎಂದು ಸಂಭ್ರಮಿಸುವಂತಿಲ್ಲ.ಈಗಿನಂತೆಯೇ ಪಡಿಪಾಟಲು ಜೀವನ ನಡೆಸಬೇಕು. ಈ ಹಿನ್ನಲೆಯಲ್ಲಿ ಸಂಘ, ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಬಡವರ ನೆರವಿಗೆ ಧಾವಿಸಬೇಕು.ಇದಕ್ಕೊಂದು ಮಾದರಿ ಉದಾಹರಣೆ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿದೆ.ತಾಲ್ಲೂಕಿನ ಸೊರವನಹಳ್ಳಿ ಗೊಲ್ಲರಹಟ್ಟಿಯ ವಯೋವೃದ್ಧೆ ತಿಮ್ಮಕ್ಕನ ಮಗ, ಸೊಸೆ ತೀರಿಕೊಂಡಿದ್ದಾರೆ. ಯಾರ ಸಹಾಯವೂ ಇಲ್ಲದ ತಿಮ್ಮಕ್ಕ ಇಬ್ಬರು ಮೊಮ್ಮಕ್ಕಳೊಂದಿಗೆ ಈಗಲೋ ಆಗಲೋ ಕುಸಿದು ಬೀಳುವಂತಹ ಶಿಥಿಲಗೊಂಡ ಮನೆಯಲ್ಲಿ ದಿನತಳ್ಳುತ್ತಿದ್ದರು.ಇದನ್ನು ಗಮನಿಸಿದ ಜಿ.ಪಂ. ಮಾಜಿ ಸದಸ್ಯ ಎನ್.ಆರ್.ಜಯರಾಮ್ ಸರ್ಕಾರದ ಯಾವುದೇ ಅನುದಾನವಿಲ್ಲದೆ ತಾವೇ ಕೈಯ್ಯಾರೆ ದುಡ್ಡು ಹಾಕಿ ಅಜ್ಜಿಗೆ ಹೊಸಮನೆ ಕಟ್ಟಿಸಿಕೊಡುತ್ತಿದ್ದಾರೆ. ಜಯರಾಮ್ ಅವರ ಸತ್ಕಾರ್ಯದಿಂದ ಪ್ರೇರಣೆಗೊಂಡ ಹಲವು ಸಾಮಾಜಿಕ ಕಾರ್ಯಕರ್ತರು, ರೋಟರಿ ಕ್ಲಬ್ ಮೊದಲಾದ ಸಂಘಸಂಸ್ಥೆಗಳು ತಾಲ್ಲೂಕಿನಲ್ಲಿ ಇಂತಹುದೇ ಕಾರ್ಯಕ್ಕೆ ಮುಂದಾಗಿವೆ. ಇದನ್ನೇ ಅನುಕರಣೀಯ ಮಾದರಿಯನ್ನಾಗಿಸಿಕೊಂಡು ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಬಡವರ ಮನೆಯ ಕನಸನ್ನು ನನಸು ಮಾಡಲು ಮುಂದಾಗಬೇಕಿದೆ.


ತುರುವೇಕೆರೆ ಪ್ರಸಾದ್, ನಂ.6, ಪಂಚವಟಿ
13ನೇ ವಾರ್ಡ್, ಗಾಂಧಿನಗರ
ತುರುವೇಕೆರೆ-572 227
ಮೊಬೈಲ್: 9448677560

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?