ಜನಮನ

ವೈ.ಎನ್.ಹೊಸಕೋಟೆ ಶಾಲೆಗೆ ಬೇಕಿದೆ ಕಾಯಕಲ್ಪ… ಇಲ್ಲಿ ಓದಿದವರು ಅಗಣಿತ, ಶಾಲೆಗಿಲ್ಲ ಕಟ್ಟಡದ ರೇಖಾಗಣಿತ !

Public story.in


ವೈ.ಎನ್.ಹೊಸಕೋಟೆ : ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಶತಮಾನದ ಕಾಲದಿಂದ ಅಕ್ಷರ ಬೀಜವನ್ನು ಬಿತ್ತುತ್ತ ಶಿಕ್ಷಣ ಕ್ರಾಂತಿಯನ್ನುಂಟು ಮಾಡಿರುವ ಶಾಲೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ 1913 ಕ್ಕಿಂತ ಮುಂಚೆಯೇ ಪ್ರಾರಂಭಗೊಂಡು ಇಂದಿನವರೆಗೂ ನಿರಂತರವಾಗಿ ಶಿಕ್ಷಣ ನೀಡುತ್ತಿದೆ.

https://youtu.be/RfqQHliyVpY

ಸುಮಾರು 25-30 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿದ್ದಾರೆ.
ಶಾಲೆಯಿಂದ ಹೊರಹೊಮ್ಮಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ವೈದ್ಯ, ನ್ಯಾಯಾದೀಶ, ಇಂಜಿನಿಯರ್ ಇತ್ಯಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://youtu.be/caSmCKH-5DA

ಇಲ್ಲಿ ಅಕ್ಷರ ಜ್ಞಾನ ಪಡೆದ ಹಲವರು ಸಾಹಿತಿಗಳು, ಲೇಖಕರಾಗಿದ್ದಾರೆ. ಕೆ.ಎ.ಎಸ್ ನಂತಹ ಉನ್ನತ ಆಡಳಿತಾಧಿಕಾರ ಪಡೆದಿದ್ದಾರೆ. ವಿವಿಧ ಇಲಾಖೆಗಳಲ್ಲಿ ಮೇಲ್ದರ್ಜೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಗುರ್ತಿಸಿಕೊಂಡಿದ್ದಾರೆ. ಪ್ರಾಧ್ಯಾಪಕರು, ಶಿಕ್ಷಕರು ಸೇರಿದಂತೆ ಸಿ ಮತ್ತು ಡಿ ದರ್ಜೆ ಸರ್ಕಾರಿ ಮತ್ತು ಖಾಸಗಿ ನೌಕರರ ಗಣ ಅಸಂಖ್ಯಾತವಾಗಿದೆ.

https://youtu.be/MGWOta6HUk8

ಈ ಭಾಗದ ರಾಜಕಾರಣಿಗಳ ತವರು ಶಾಲೆಯೂ ಹೌದು. ಇದೇ ಶಾಲೆಯಲ್ಲಿ ಓದಿದ ವೆಂಕಟರಮಣಪ್ಪ ಶಾಸಕರಾಗಿ, ಮಂತ್ರಿಗಳಾಗಿ, ವೆಂಕಟಸ್ವಾಮಿ ವಿಜ್ಞಾನಿಯಾಗಿ, ಜಿ.ಎ.ಮಂಜುನಾಥ ನ್ಯಾಯಾದೀಶರಾಗಿ ಬೆಳೆದಿದ್ದಾರೆ.

ರಂಗಭೂಮಿ, ನಾಟಕ, ಚಿತ್ರಕಲೆ, ಶಿಲ್ಪಕಲಾ ಕಲಾವಿದರಿಗೆ, ಸಾಹಿತಿಗಳಿಗೆ, ಆಡಳಿತಗಾರರಿಗೆ, ಕ್ರೀಡಾಪಟುಗಳಿಗೆ ಪ್ರೇರಕ ಸ್ಥಳವಾಗಿವಾಗಿದೆ.
ಖೋಖೋ, ಕಬ್ಬಡ್ಡಿ, ಓಟಾಟಗಳ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿದ್ದಾರೆ.

ಶಾಲಾ ಕ್ರೀಡಾಕೂಟಗಳಲ್ಲಿ ವಾಲೀಬಾಲ್ ಎಂದರೆ ವೈ.ಎನ್.ಹೊಸಕೋಟೆ ಎಂದು ಗುರ್ತಿಸುವ ಮಟ್ಟಕ್ಕೆ ಮೂಲ ಕಾರಣವಾದ ಶಾಲೆಯಾಗಿದೆ. ಗ್ರಾಮದ ಹಲವು ಮೊದಲುಗಳು ಮತ್ತು ಹೆಮ್ಮೆಗಳಿಗೆ ಆಕರ ಸ್ಥಳ.

ಇಂತಹ ಸರ್ಕಾರಿ ಬಾಲಕರ ಶಾಲೆ ಇಂದು ಶತಮಾನೋತ್ಸವ ಸಂಭ್ರಮಚಾರಣೆಯನ್ನೂ ಕಾಣದೆ ಸೊರಗುತ್ತಿರುವುದು ನೋವಿನ ಸಂಗತಿ. ಜ್ಞಾನದ ಬೆಳಕನ್ನು ನೀಡಿದ ತಮ್ಮ ತವರು ಶಾಲೆಯ ಬಗ್ಗೆ ಯಾವೊಬ್ಬ ಮುಖಂಡರಾಗಲೀ, ಅಧಿಕಾರಿಗಳಾಗಲೀ ಅಥವಾ ಹಳೆಯ ವಿದ್ಯಾರ್ಥಿಗಳಾಗಲಿ ಕಾಳಜಿ ವಹಿಸುತ್ತಿಲ್ಲ.

ಪ್ರಸ್ತುತ ಸರ್ಕಾರ ನೀಡಿರುವ ಎಲ್ಲಾ ರೀತಿಯ ಸೌಲಭ್ಯಗಳ ನಡುವೆಯೂ ದಾಖಲಾತಿ ಸಮಸ್ಯೆ ಅನುಭವಿಸುತ್ತಿದೆ. ಹಾಗಾಗಿ ಉತ್ಸಾಹದ ದಿನಗಳ ಬದಲಿಗೆ ಆತಂಕದ ದಿನಗಳು ಮೂಡುತ್ತಿವೆ.

ವಿದ್ಯಾರ್ಥಿಗಳ ಕೊರತೆ, ಮಾಧ್ಯಮದ ಕೊರತೆ, ಆಧುನಿಕ ಬೋಧನೋಪಕರಣ, ಪ್ರಯೋಗಾಲಯ, ಕ್ರೀಡೋಪಕರಣ, ಕಂಪ್ಯೂಟರ್ ಅಧಾರಿತ ಶಿಕ್ಷಣ ಕೊರತೆ, ಪೋಷಕರು, ಸಮುದಾಯ ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದ ಕೊರತೆ ಕಾಡುತ್ತಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ 3 ಹೆಂಚಿನ ಮೇಲ್ಚಾವಣಿಯ ಕೊಠಡಿಗಳು ಇಂದು ಶಿಥಿಲಾವಸ್ಥೆಯನ್ನು ತಲುಪಿವೆ. ನಂತರದ ದಿನಮಾನಗಳಲ್ಲಿ ನಿರ್ಮಾಣವಾಗಿರುವ ಒಂದೆರಡು ಆರ್.ಸಿ.ಸಿ ಕೊಠಡಿಗಳು ಸೋರುತ್ತಿವೆ. ಶಾಲೆಯ ಹಿಂಭಾಗ ವರ್ಕ್ ಶಾಪ್ ಗಳಿಂದ ಆವೃತವಾಗಿದ್ದು, ಕೊಠಡಿಗಳಿಗೆ ಗಾಳಿಬೆಳಕು ಇಲ್ಲದೆ ಶಬ್ದ ಮಾಲಿನ್ಯಕ್ಕೆ ಗುರಿಯಾಗಿವೆ.

ಪೋಷಕರಲ್ಲಿನ ಇಂಗ್ಲೀಷ್ ವ್ಯಾಮೋಹ, ವಸತಿಶಾಲೆಗಳ ದಾಖಲಾತಿ, ಸರ್ಕಾರದ ಶೈಕ್ಷಣಿಕ ನೀತಿಯಿಂದಾಗಿ ವೈಭವದಿಂದ ಮೆರೆದ ಸರ್ಕಾರಿ ಶಾಲೆ ಇಂದು ಹೆಸರಿಗಷ್ಟೇ ಸೀಮಿತವಾಗುತ್ತಿದೆ.
ಅಕ್ಷರಾಮೃತವನ್ನು ನೀಡುತ್ತಾ ಶತಮಾನ ಸವೆದ ತವರು ಶಾಲೆಯಮ್ಮನ ಹಾರೈಕೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಪುತ್ರನ ಕರ್ತವ್ಯ ಎನಿಸುತ್ತದೆ.

ಬನ್ನಿ ಎಲ್ಲರೂ ಕೈಜೋಡಿಸಿ ಶತಮಾನೋತ್ಸವವನ್ನು ಆ಼ಚರಿಸಿ ಸಮುದಾಯದ ಶಾಲೆಯ ಪುನಶ್ಚೇತನ ಮತ್ತು ಪ್ರಗತಿಗೆ ಶ್ರಮಿಸೋಣ.

Comment here