Tuesday, October 8, 2024
Google search engine
Homeಪೊಲಿಟಿಕಲ್ಶಾಸಕ ಗೌರಿಶಂಕರ್ ಗೆ ದಿಢೀರನೇ ರಾತ್ರಿ ಇನ್ನೊಂದು ಪತ್ರ ಬರೆದ ಮಾಜಿ ಶಾಸಕರು

ಶಾಸಕ ಗೌರಿಶಂಕರ್ ಗೆ ದಿಢೀರನೇ ರಾತ್ರಿ ಇನ್ನೊಂದು ಪತ್ರ ಬರೆದ ಮಾಜಿ ಶಾಸಕರು

ಹೊನ್ನೇನಹಳ್ಳಿ ಘಟನೆಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ನಡುವೆ ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಆಗುತ್ತಿದೆ. ಕ್ಷೇತ್ರದಲ್ಲೂ ಜನರ ನಡುವೆ ವಿಭಿನ್ನ ಅಭಿಪ್ರಾಯಗಳ, ಟೀಕೆ, ವಿಮರ್ಶೆ ಹೀಗೆ ಸಾಗುತ್ತಿದೆ. ಈ ನಡುವೆ, ಶಾಸಕರಿಗೆ ಬಹಿರಂಗ ಪತ್ರ ಬರೆದಿದ್ದ ಮಾಜಿ ಶಾಸಕರು ರಾತ್ರಿಯೊಳಗಾಗಿ ಮತ್ತೊಂದು ಬಹಿರಂಗ ಪತ್ರದ ಮೂಲಕ ರಾಜಧರ್ಮದ ಬಗ್ಗೆ ಮಾತನಾಡಿದ್ದಾರೆ. ಏನಿದೆ ಆ ಪತ್ರದಲ್ಲಿ?

ಪ್ರತೀ ಪಕ್ಷದ ಕಾರ್ಯಕರ್ತನಿಗೂ ಒಂದು ವೈಯಕ್ತಿಕ ಬದುಕು, ವೈಯಕ್ತಿಕ ನಿಲುವು ಅಂತಿರುತ್ತೆ. ಅದು ಪಕ್ಷದ ಹೊರತಾದದ್ದು ಆಗಿರಬಹುದು.

ಪಕ್ಷದ ಕಾರ್ಯಕರ್ತರ ವೈಯಕ್ತಿಕ ಹೊಡೆದಾಟಗಳನ್ನು ಪಕ್ಷವೊಂದರ ಹಣೆಗೆ ಕಟ್ಟೋದೋ, ಠಾಣೆಯಲ್ಲಿ ಹೋಗಿ ದಬ್ಬಾಳಿಕೆ ಮಾಡೋದೋ, ಅದನ್ನೇ ನೆಪವಾಗಿಟ್ಟುಕೊಂಡು ಕ್ಷೇತ್ರದ ಶಾಸಕನೇ ಧರಣಿಗೆ ಕರೆ ನೀಡೋದೋ, ಪ್ರತಿಭಟನೆ ನಡೆಸೋದೋ ಮಾಡ್ತಾನೆ ಅಂದ್ರೆ ಅದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ…

ಅಧಿಕಾರದ ಜೊತೆ ಪ್ರೌಢತೆ, ಪ್ರಬುದ್ಧತೆಯೂ ಬೆಸೆದುಕೊಂಡಿದ್ದರೆ ಮಾತ್ರ ನಾವೂ ರಾಜಧರ್ಮವನ್ನು ನಿರೀಕ್ಷಿಸಬಹುದಿತ್ತೇನೋ? ಅಲ್ವಾ?!

ಜನರಿಂದ ಚುನಾಯಿಸಲ್ಪಟ್ಟು, ಶಾಸಕ ಅಂತ ಪ್ರತಿಜ್ಞೆ ಸ್ವೀಕರಿಸಿದ ನಾಯಕ ಕ್ಷೇತ್ರದ ಜನರನ್ನು ಸಮಾಧಾನಿಸಿ, ತಾನೇ ಮುಂದೆ ನಿಂತು ಕ್ಷೇತ್ರದ ಶಾಂತಿಯುತ ವಾತಾವರಣವನ್ನು ಕಾಪಾಡಬೇಕೇ ವಿನಃ ಪುಂಡಾಟಿಕೆ ಪ್ರದರ್ಶಿಸಿ, ಸಣ್ಣತನ ಮೆರೆದು, ಜನರನ್ನು ಗೊಂದಲಕ್ಕೆ ತಳ್ಳೋದಲ್ಲ.

ಜನನಾಯಕನಿಗೆ, ನಾಯಕನ ಸ್ಥಾನಮಾನಕ್ಕೆ ಇಂತಹ ನಿಲುವು, ವರ್ತನೆ ಶೋಭೆ ತರುವಂತದ್ದಲ್ಲ…

ಸ್ವಾಮಿ,
ನೀವು ದಬ್ಬಾಳಿಕೆ, ಧರಣಿ, ಪ್ರತಿಭಟನೆ, ಬಂದ್ ಗಳಲ್ಲೇ ನ್ಯಾಯ ಹುಡುಕುವ ಸೋಗಲಾಡಿ ರಾಜಕಾರಣ ಮಾಡುತ್ತೀರಿ ಅಂತಾದರೆ ಈ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಇರೋದ್ಯಾಕೆ???

ಅನಾಗರಿಕರ ಹಾಗೆ ಪ್ರತಿಭಟನೆ, ಮುಷ್ಕರಕ್ಕೆ ಕರೆ ಕೊಟ್ಟು ನಿಮ್ಮ ಅಯೋಗ್ಯತೆಯ ಡಂಗುರ ಸಾರುತ್ತೀರಿ ಅಂತಾದರೆ ನಿಮ್ಮನ್ನು ನೋಡಿ ಒಂದು ಚೆಂದ ನಗೆ ಚೆಲ್ಲಬಹುದು ನಾನು ಅಷ್ಟೇ..

ಪ್ರಿಯ ಶಾಸಕರೇ,
ನಾವು ರಾಜಕಾರಣ ಮಾಡೋಕೆ, ಗುದ್ದಾಡೋಕೆ ಒಳ್ಳೆಯ ಕಾರಣಗಳನ್ನು, ವಿಚಾರಗಳನ್ನು ಆಯ್ದುಕೊಳ್ಳೋಣ.

ಕ್ಷೇತ್ರದ ಅಭಿವೃದ್ಧಿಗಾಗಿ, ಒಳಿತಿಗಾಗಿ ಪೈಪೋಟಿಗೆ – ಸ್ಫರ್ಧೆಗೆ ಬೀಳೋಣ… ಈ ನಕಾರಾತ್ಮಕ ರಾಜಕೀಯ ಬಿಟ್ಟುಬಿಡಿ. ಜನಪ್ರತಿನಿಧಿಯಾಗಿ ಕೊರೋನಾ ಕಾಲಘಟ್ಟದ ಈ ಅವಧಿಯಲ್ಲಿ ನಮ್ಮ ಜವಾಬ್ದಾರಿ ದೊಡ್ಡದಿದೆ. ಬನ್ನಿ, ಜನರ ಆರೋಗ್ಯಕ್ಕಾಗಿ, ಜನಾನುರಾಗಿ ಕಾರ್ಯಗಳಿಗಾಗಿ ಹೋರಾಡೋಣ.

ಹಾಗಂತ ಗಲಭೆಯ, ಹೊಡೆದಾಟದ ರೂವಾರಿಗಳನ್ನು ಬಿಟ್ಟುಬಿಡಿ, ಕ್ಷಮಿಸಿಬಿಡಿ ಅಂತ ನಾ ಹೇಳುತ್ತಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

ಕ್ಷೇತ್ರದ ಶಾಂತಿಯುತ ವಾತಾವರಣ ಕದಡುವ ಪ್ರಯತ್ನ ಇನ್ನೊಮ್ಮೆ, ಇನ್ನೊಬ್ಬರು ಮಾಡದಂತೆ ಕಾವಲಿರಿ, ಕಾವಲಿರೋಣ.

ಹೊನ್ನೆನ ಹಳ್ಳಿ ಹೊಡೆದಾಟದ ಗಾಯಾಳುಗಳನ್ನು ಸ್ಟೇಷನ್ ನಲ್ಲಿ ಕೂರಿಸಿಕೊಂಡು, ನಿಮ್ಮ ಆಪ್ತರನ್ನು ನಿಲ್ಲಿಸಿಕೊಂಡು ಶಾಸಕ ಅನ್ನೋ ಮತ್ತಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೋಲಿಸ್ ವೃತ್ತ ನಿರೀಕ್ಷಕರನ್ನು ಅವಾಚ್ಯವಾಗಿ ಬಯ್ದಾಡುತ್ತೀರಿ, ಮಾಧ್ಯಮದವರ ಮುಂದೆ ನಿಂತು ವೈಯಕ್ತಿಕ ಗಲಾಟೆಯನ್ನು ದೊಡ್ಡದಾಗಿಸಿ ಪಕ್ಷದ ಬಣ್ಣ ಬಳಿಯುತ್ತೀರಿ, ಊರ ಜನರ ನಡುವೆ ಪಕ್ಷ ಪಕ್ಷಗಳ ಬಣ ರಚಿಸಿ ದ್ವೇಷ ಹರಡುತ್ತೀರಿ ಅಂತಾದರೆ ನಿಮ್ಮ ಶಾಸಕತ್ವದ ಹೊಣೆಗಾರಿಕೆ ಎಂಥದ್ದು ಮಾರಾಯ್ರೇ…???!!! ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಶಾಸಕರೇ?!

ಜನರ ನಡುವೆ ದ್ವೇಷ ಹರಡುವ, ಜನರನ್ನು ಒಡೆದು ಆಳುವ ಬ್ರಿಟಿಷ್ ಸಿದ್ಧಾಂತಗಳನ್ನು ಪೋಷಿಸುವ ಕೀಳು ಮಟ್ಟದ ಹೀನ ರಾಜಕಾರಣ ಬಿಡಿ…

ಹಿಂಸಾಚಾರ, ಹಗೆತನ, ಪ್ರತಿಭಟನೆ ಯಾವುದೂ ನಮ್ಮ, ಊರ, ಕ್ಷೇತ್ರದ ಶಾಂತಿಗೆ ಪೂರಕ ಅಲ್ಲ. ಕ್ಷೇತ್ರದ ಇಮೇಜ್ ಗೆ ಡ್ಯಾಮೇಜ್ ಮಾಡಿ ನಿಮ್ಮ ಶಾಸಕತ್ವಕ್ಕೆ ಕನ್ನಡಿ ಹಿಡಿಯುತ್ತೀರಿ, ನಿಮ್ಮ ಪೊಳ್ಳು ನೇತಾರಿಕೆಗಳಿಗೆ ನಿದರ್ಶನ ಒದಗಿಸಿ ಪ್ರದರ್ಶನ ಹಮ್ಮಿಕೊಳ್ಳುತ್ತೀರಿ ಅಂದ್ರೆ… ಆ ನಿಮ್ಮ ಸಣ್ಣತನಗಳಿಂದ ದೊಡ್ಡತನದ ಹೆಚ್ಚುಗಾರಿಕೆಗಳಿಗೆ ನೀವು ದಾಪುಗಾಲಿಟ್ಟು ಪರಿಪಕ್ವತೆ ರೂಢಿಸಿಕೊಳ್ಳೋದು, ಮೈಗೂಡಿಸಿಕೊಳ್ಳೋದು ಯಾವಾಗ??!

ಎರಡು ಬಾರಿ ಶಾಸಕನಾಗಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದವನು, ತೊಡಗಿಸಿಕೊಂಡಿರುವವನು ನಾನು…

ಕ್ಷೇತ್ರದ ಜನತೆ ಪ್ರಬುದ್ಧರಿದ್ದಾರೆ. ಸರಿ – ತಪ್ಪು, ಸತ್ಯ – ಸುಳ್ಳು, ಒಳ್ಳೇದು – ಕೆಟ್ಟದ್ದು, ನೈಜತೆ – ಕಟ್ಟುಕತೆ, ಕ್ಷೇತ್ರದ ಬೇಕು – ಬೇಡ… ಎಲ್ಲವನ್ನೂ ಸ್ಪಷ್ಟವಾಗಿ, ಖಚಿತವಾಗಿ ಅರಿಯುವ ವಿವೇಚನೆ, ವಿವೇಕ, ಪ್ರಜ್ಞೆ ಅವರಿಗಿದೆ. ಟೇಕ್ ಕೇರ್. ಶಾಸಕತ್ವ ಅನ್ನೋದು ಮಕ್ಕಳಾಟಿಕೆಯ ಹುದ್ದೆ, ಹೊಣೆಗಾರಿಕೆ ಅಲ್ಲ.


ಕ್ಷೇತ್ರದ ಬಗೆಗಿನ ತುಂಬು ಪ್ರೀತಿ, ಗೌರವ ಮತ್ತು ಕಾಳಜಿಗಳೊಂದಿಗೆ,

ಬಿ. ಸುರೇಶ್ ಗೌಡ
ಮಾಜಿ ಶಾಸಕರು, ಬಿಜೆಪಿ ರಾಜ್ಯ ಕಾರ್ಯದರ್ಶಿ
ತುಮಕೂರು ಗ್ರಾಮಾಂತರ ಕ್ಷೇತ್ರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?