Publicstory. in
Tumkuru: ಸಿರಾ ಉಪ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ನಿಂದ ಕರೆ ತಂದಿರುವ ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಲಿದೆ.
ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್ ನಿಂದ ನಿಧನರಾದ ಶಾಸಕ ಸತ್ಯನಾರಾಯಣ್ ಅವರ ಪತ್ನಿ ಮುಲ್ಲಾಜಮ್ಮ ಅವರಿಗೆ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಇನ್ನೂ ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿ ಹೆಸರು ಬಹಿರಂಗಪಡಿಸಬೇಕಾಗಿದೆ.
ಬಿಜೆಪಿಯಲ್ಲಿ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಹೆಸರು ಪಟ್ಟಿಯಲ್ಲಿ ಇದ್ದರೂ ಇಬ್ಬರಿಗೂ ಟಿಕೆಟ್ ಸಿಗದಿರುವುದು ಬಹುತೇಖ ಖಚಿತವಾಗಿದೆ.
ಈ ಇಬ್ಬರ ನಾಯಕರ ನಡುವೆ ಹಾವು ಮುಂಗಸಿ ಆಟ ನಡೆದಿದೆ. ಯಾರಿಗೆ ಕೊಟ್ಟರೂ ಮತ್ತೊಬ್ಬರು ಕಾಳೆಲೆಯುತ್ತಿದ್ದರು. ಅಲ್ಲದೇ ಬಲಾಢ್ಯ ಜೆಡಿಎಸ್, ಕಾಂಗ್ರೆಸ್ ಸೋಲಿಸಲು ಸರಿಯಾದ ಅಭ್ಯರ್ಥಿ ಬೇಕೆಂದು ಬಿಜೆಪಿ ಹುಡುಕಾಟ ನಡೆಸಿತ್ತು.
ಆರಂಭದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ಅವರ ಹೆಸರನ್ನು ತೇಲಿ ಬಿಡಲಾಗಿತ್ತು. ಅವರೇ ನಿಲ್ಲುವಂತೆ ಒತ್ತಡವನ್ನು ಹೇರಲಾಗಿತ್ತು. ಕಾರ್ಯಕರ್ತರ ಅಭಿಲಾಷೆಯೂ ಅದೇ ಆಗಿತ್ತು. ಆದರೆ ಸುರೇಶಗೌಡರು ತಮ್ಮ ಗ್ರಾಮಾಂತರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಬೇರೆಲ್ಲೂ ಸ್ಪರ್ಧಿಸುವುದಿಲ್ಲ ಎಂದ ಹೇಳಿದ ಕಾರಣ ಬೇರೆ ಮುಖಂಡರ ಹುಡುಕಾಟದಲ್ಲಿ ತೊಡಗಿತ್ತು.
ಡಾ. ರಾಜೇಶಗೌಡ ಅವರು ಮಾಜಿ ಸಂಸದ ಮೂಡ್ಲಗಿರಿಯಪ್ಪ ಅವರ ಮಗನಾಗಿದ್ದಾರೆ. ಮೂಡ್ಲಗಿರಿಯಪ್ಪ ಕಾಂಗ್ರೆಸ್ ನಲ್ಲಿ ಇದ್ದವರು. ಹೀಗಾಗಿ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಬಿಜೆಪಿಯು ಸಹ ಅಳೆದು ತೂಗಿ ಕುಂಚಿಟಿಗರಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಕುಂಚಿಟಿಗರ ಮತ ವಿಭಜನೆ ಯಾರಿಗೆ ಲಾಭ ತಂದುಕೊಡಬಹುದು ಎಂಬುದು ಕುತೂಜಲವಾಗಿದೆ.
ಹೀಗಾಗಿ ಮೂರು ಪಕ್ಷಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯವನ್ನು ಸೆಳೆಯಲು ಕಸರತ್ತು ನಡೆಸಿವೆ.