“ಶ್ರದ್ಧೆಯ ನೆರಳಲ್ಲಿ ಬೆಳಗಿದ ಭವಿಷ್ಯದ ದೀಪ: ಶ್ರೀರಾಮ್ ಫ್ಯೂಚರ್ ಟೆಕ್(ಕಿಯೋನಿಕ್ಸ್)ನ ಸಂಗ್ರಾಮಗಾಥೆ“
ಅಂದು , 2004ರ ಒಂದು ಶಾಂತ ಬೆಳಗ್ಗೆ. ಕೊರಟಗೆರೆ ಪಟ್ಟಣದಲ್ಲಿ ಜನಜೀವನದ ಸಾಮಾನ್ಯ ಚಟುವಟಿಕೆ ನಡೆಯುತ್ತಿದ್ದಾಗ, ಪಟ್ಟಣದ ಶಿವಗಂಗಾ ಚಿತ್ರ ಮಂದಿರದ ಮುಂಭಾಗದಲ್ಲಿರುವ ಒಂದು ಪುಟ್ಟ ಕಟ್ಟಡದ ಒಳಗೆ ದೊಡ್ಡ ಕನಸು ಹುಟ್ಟುತ್ತಿತ್ತು. ಶ್ರೀರಾಮ್ ಫ್ಯೂಚರ್ ಟೆಕ್ — ಹೆಸರು ಕೇಳುತ್ತಿದ್ದಾಗಲೇ ಭವಿಷ್ಯವೊಂದು ಸ್ಪಷ್ಟವಾಗುವ ಭಾವನೆ. ಕೇಲವೇ ಕೆಲವು (2) ಕಂಪ್ಯೂಟರ್‌ಗಳು, 12 ಕುರ್ಚಿ, ಒಂದು ಟೇಬಲ್, ಒಂದು ಫ್ಯಾನ್, ಸಿಮೆಂಟ್ ಗೋಡೆಗಳ ಮಧ್ಯೆ, ಭವಿಷ್ಯ ಕಟ್ಟುವ ಕೆಲಸ ಶುರುವಾಯಿತು.

ಆಗ ನನ್ನ ಕಣ್ಣುಗಳಲ್ಲಿ ಒಣಗಿದ ತೋಟದ ಹೊಲವನ್ನೇ ಹಸುರುಗೊಳಿಸುವ ಅಭಿಲಾಷೆ ಇದ್ದಂತೆ. “ಗ್ರಾಮೀಣ ವಿದ್ಯಾರ್ಥಿಗಳು ಕನ್ನಡ ಮಾತ್ರವಲ್ಲ, ತಂತ್ರಜ್ಞಾನದಲ್ಲಿಯೂ ನಿಪುಣರಾಗಬೇಕು” ಎಂಬ ಆಶಯ ಮಡಿಲಲ್ಲಿತ್ತು. ಅವರು ಸ್ವತಃ ತರಗತಿಗೆ ನಿಂತು, ಪವರ್‌ಕಟ್ ಆಗಿದ್ರೆ ಮೇಣದ ಬತ್ತಿ ಬೆಳಕಿನಲ್ಲಿ ಪಾಠ ಮುಗಿಸುತ್ತಿದ್ದ ಕಾಲವದು. ಅದು ಪಾಠ ಮಾತ್ರವಲ್ಲ — ತ್ಯಾಗದ ಪಾಠ, ಶ್ರಮದ ಪಾಠ, ಆತ್ಮವಿಶ್ವಾಸದ ಪಾಠ.
ಮೊದಲ ಬಾರಿಗೆ ಮೈಕ್ ಬಳಸಿ ಮಾತನಾಡಿದ ವಿದ್ಯಾರ್ಥಿ, ಮೊದಲ ಕಂಪ್ಯೂಟರ್ ಎಕ್ಸಾಮ್ ಬರೆದು ನಗುತ್ತಿದ್ದ ವಿದ್ಯಾರ್ಥಿಗಳು, ಮೊದಲ ಬಾರಿಗೆ ಆಗಿನ ಹೊಸ ಸಿನಿಮಾಗಳನ್ನು ಕಂಪ್ಯೂಟರ್‌ನಲ್ಲಿ ನೋಡಿದ ಸಂತೋಷ — ಇವು ಎಲ್ಲಾ ಸಂಸ್ಥೆಯ ಹೃದಯದ ಸ್ಪಂದನೆಗಳು. ಈ ಸಂಸ್ಥೆ ಬಹುಪಾಲು ಮಕ್ಕಳು ಮೊದಲ ಬಾರಿಗೆ ತಮ್ಮ ಕೈಯಲ್ಲಿ ಮೌಸ್ ಹಿಡಿದ ಕ್ಷಣವನ್ನ ಮರೆಯುವುದಿಲ್ಲ.
ಇದರ ಬೆಳವಣಿಗೆ ಹೀಗೆಯೇ ನಡೆಯುತ್ತಾ, ಒಂದು ಹಂತದಲ್ಲಿ ಸಂಸ್ಥೆ ಸರ್ಕಾರದ ಕಿಯೋನಿಕ್ಸ್ ಸಂಸ್ಥೆಗೆ ಒಳಪಟ್ಟು ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿತು. ಹೊಸ ತರಗತಿಗಳೊಂದಿಗೆ ಹೊಸ ಕೋರ್ಸ್‌ಗಳು, ರಾಜ್ಯ ಮಟ್ಟದ ಮಾನ್ಯತೆ, ಜತೆಗೆ ತಂತ್ರಜ್ಞಾನ ಶಿಬಿರಗಳು, ಮಹಿಳಾ ಶಕ್ತೀಕರಣ ಯೋಜನೆಗಳು, ಹಾಗೂ ವಯಸ್ಕರು, ವೃದ್ಧರಿಗೂ ಕಂಪ್ಯೂಟರ್ ಕಲಿಕೆಗೆ ಅವಕಾಶ. ಇವೆರಡನ್ನು ಸಂಯೋಜಿಸಿದ ಈ ಸಂಸ್ಥೆಯು ಎಲ್ಲ ಕಾಲಗತಿಗಳಿಗೂ ಹೊಂದುವ ಮಾದರಿಯಾಯಿತು.

ಪ್ರತಿಯೊಂದು ವರ್ಷದ ವಾರ್ಷಿಕೋತ್ಸವವೂ ಒಂದು ಸ್ಮರಣೀಯ ಸಂಗಮವಾಗಿತ್ತು. ಹಳೆಯ ವಿದ್ಯಾರ್ಥಿಗಳು ಬಂದು, ಹೊಸ ವಿದ್ಯಾರ್ಥಿಗಳಿಗೆ ತಮ್ಮ ಯಶೋಗಾಥೆ ಹಂಚಿಕೊಳ್ಳುವಾಗ, ಪ್ರಸಕ್ತವಾಗಿ ಕಲಿಕೆಯಲ್ಲಿದ್ದ ವಿದ್ಯಾರ್ಥಿಗಳ ಕಣ್ಣು ತೇವವಾಗುತ್ತಿತ್ತು. ಕೆಲವರು ಮೊದಲು ಸ್ಟುಡೆಂಟ್ ಆಗಿ ಬಂದಿದ್ದರು, ನಂತರ ಅಲ್ಲಿ ಇನ್‌ಸ್ಟ್ರಕ್ಟರ್ ಆಗಿದ್ದರು. ಸಂಸ್ಥೆಯ ಈ ಬದಲಾವಣೆಯು ಕೇವಲ ವೃತ್ತಿಪರ ಮಾತ್ರವಲ್ಲ, ಮಾನವೀಯ ಬೆಳವಣಿಗೆಯೂ ಆಗಿತ್ತು.
ಸಂಸ್ಥೆ ಕಟ್ಟುವಲ್ಲಿ ಸಹಚರರಾಗಿ ಸೇವೆ ಸಲ್ಲಿಸಿದವರು ಇದರ ಏಳಿಗೆಯ ಒಂದು ಭಾಗವೂ ಹೌದು. ಪ್ರಾರಂಭದಿಂದ ಇಲ್ಲಿವರೆಗೆ ತಮ್ಮದೇ ಅನುಭವದ ಕಲಿಕೆ ನೀಡಿದ ಆತ್ಮೀಯ ಸ್ನೇಹಿತ ಇರ್ಷಾದ್, ಆರಂಭದ ದಿನಗಳಲ್ಲಿ ಶಿಕ್ಷಕರಾಗಿದ್ದ ಲಕ್ಷ್ಮಿ, ಜಯಸಿಂಹ, ಶ್ರೀದೇವಿ, ಚೈತ್ರ ಲೋಕೇಶ್, ಗುಡಿಆನಂದ, ಹನುಮಂತು, ಹರೀಶ, ಚೈತ್ರ ಸೇರಿದಂತೆ ಈಗಿನ ಗಣೇಶ, ವಿಜಿ ಎಲ್ಲರೂ ಕೂಡ ಸಂಸ್ಥೆ ಇಷ್ಟು ದೂರ ಸಾಗಲು ಒಂದೊಂದು ರೀತಿಯ ಕೈ ಜೋಡಿಸಿದವರು. ಎಲ್ಲರೂ ಸಂಸ್ಥೆಗೆ ಪ್ರಾಥಸ್ಮರಣೀಯರೆ. ಅನೇಕ ಏಳು, ಬೀಳಿನ ನಡುವೆ ಸಂಸ್ಥೆಯನ್ನು 21 ವರ್ಷ ನಡೆಸಿಕೊಂಡು ಬರಲು ಸಹಕರಿಸಿದ ಪೋಷಕರು, ವಿದ್ಯಾರ್ಥಿಗಳು ಎಲ್ಲರೂ ಅಗಣಿತರೆ. ಅವರನ್ನೆಲ್ಲ ಒಮ್ಮೆ ಅಂತರಾಳದಲ್ಲಿ ಸ್ಮರಿಸಿದಾಗ ಏನೋ ಕೃತಜ್ಞ ಭಾವ.

ಇಲ್ಲಿಯ ಪ್ರತಿಯೊಬ್ಬ ನೌಕರ — ಕೇವಲ ಉದ್ಯೋಗಿಯಲ್ಲ, ಈ ಸಂಸ್ಥೆಯ ಸೇವಕ. ಈ ತತ್ವವೇ ಈ ಕೆದಳದ ಚರಿತ್ರೆಗೆ ಮೂಲಭೂತ.
2020ರ ಕೊರೋನಾ ಕಾಲ — ಇಡೀ ಜಗತ್ತು ಸ್ಥಬ್ಧವಾದಾಗ, ಈ ಸಂಸ್ಥೆಯ ಗೇಟು ಕೂಡ ಕೆಲ ತಿಂಗಳುಗಳು ಬಂದ್ ಆಗಿದ್ದವು. ಆದರೆ ಆ ಸ್ಥಬ್ಧತೆಯ ಮಧ್ಯೆ ಇನ್ನೇನು ಸಂಸ್ಥೆಯ ಕಥೆ ಕೂಡ ಇತಿಹಾಸ ಎಂದೆನಿಸ ತೊಡಗಿತ್ತು. ಮತ್ತೆ ಅದೆಲ್ಲದರಿಂದ ಹೊರಬಂದಾಗ ವಿದ್ಯಾರ್ಥಿ, ಪೋಷಕರಿಂದ ಸಿಕ್ಕ ಮತ್ತದೆ ಪ್ರೋತ್ಸಾಹ ನಮ್ಮಲ್ಲಿ ಮರು ಹುಟ್ಟು ತಂದಿತ್ತು. ಮರುಭೂಮಿಯಲ್ಲಿ ನೀರು ಕಂಡಷ್ಟೆ ಖುಷಿ. ಮತ್ತೇ ಏನೋ ಒಂದು ಆಶಾ ಭಾವದ ಬೆಳಕು ಮೂಡಿ ಮುನ್ನೆಡೆಸುವ ದಾರಿ ತೋರಿತು.

ಇಂದು, 22ನೇ ವರ್ಷದ ಹೆಜ್ಜೆ ಇಡುತ್ತಾ, ಸಂಸ್ಥೆ ತನ್ನ ಹಿಂದಿನ ಹಾದಿಯತ್ತ ಹಿಂತಿರುಗಿ ನೋಡುವಾಗ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ಅದರ ಮೆಡಲ್ಲಾಗಿ ಮಿನುಗುತ್ತದೆ. ಕೇವಲ ಟೈಪಿಂಗ್ ಕಲಿತ ವಿದ್ಯಾರ್ಥಿ ಇಂದು ಐಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್. ಒಂದು ಕಾಲದಲ್ಲಿ ಗ್ರಾಮೀಣ ಬಡ ಯುವತಿಯೊಬ್ಬಳು, ಈಗ ಆನ್‌ಲೈನ್ ತರಬೇತಿ ನೀಡುತ್ತಿರುವ ಸಂಸ್ಥೆ ಉದ್ಯೋಗಿ. ಹೀಗೆ ಅನೇಕ ವಿದ್ಯಾರ್ಥಿಗಳು ಇಲ್ಲಿಂದ ಬದುಕು ಕಟ್ಟಿಕೊಂಡ ಉದಾಹರಣೆ ಸಿಗುತ್ತವೆ.
‘ಶ್ರೀರಾಮ್ ಫ್ಯೂಚರ್ ಟೆಕ್’ ಎಂಬುದು ಕಂಪ್ಯೂಟರ್ ತರಬೇತಿ ಕೇಂದ್ರವಲ್ಲ. ಅದು ಕನಸುಗಳಿಗೆ ಆಕಾರ ಕೊಡುವ ಒಂದು ಜೀವಂತ ದೀಪ. ಗ್ರಾಮಾಂತರದ ಪುಟ್ಟ ಹಾದಿಗಳಲ್ಲಿ ಜ್ಞಾನ ಬೆಳೆದಿರುವ ಈ ಹಳ್ಳಿ ಐವರೆದ ಶಾಲೆಯ ಶಕ್ತಿಯು ಇನ್ನು ಅನೇಕ ಹೃದಯಗಳಲ್ಲಿ ಬೆಳಕಾಗಲಿದೆ.
ತುಳಸೀತನಯಚಿದು- ಲೇಖಕರು, ಸಂಸ್ಥೆಯ ಸಂಸ್ಥಾಪಕರು ಹಾಗೂ ಪತ್ರಕರ್ತರು.