ತುಮಕೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂವಹನ ಕೌಶಲ್ಯ ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳು ಸಂವಹನ ಕೌಶಲ್ಯಗಳನ್ನು ಕಲಿಯಬೇಕಾಗಿದೆ ಎಂದು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂಎಸ್ ರವಿಪ್ರಕಾಶ್ ತಿಳಿಸಿದರು.
ತುಮಕೂರಿನ ಎಸ್‍ಎಸ್‍ಐಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ ಏರ್ಪಡಿಸಿದ್ದ ಕಾರ್ಪೋರೇಟ್ ಅವಶ್ಯಕತೆಗಳು ಮತ್ತು ವೃತ್ತಿಪರ ಜೀವನಲ್ಲಿ ಸಂವಹನದ ಅಗತ್ಯತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾತನಾಡುವುದಕ್ಕಿಂತ ಮಾಡುವ ಕೆಲಸ ಮಾತನಾಡಬೇಕು. ಪ್ರತಿಯೊಬ್ಬರಿಗೂ ಒಂದೊಂದು ಕೌಶಲ್ಯವಿರುತ್ತದೆ. ಅದಕ್ಕೆ ಪೂರಕ ವಾತಾವರಣ ಗುರುತಿಕೊಂಡು ಹೆಚ್ಚಿನ ತರಬೇತಿ ಮತ್ತು ಕೌಶಲ್ಯ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅತಿ ಮುಖ್ಯವಾಗಿದ್ದು, ಯಾವುದೇ ಕಂಪನಿಗೆ ಹೋಗುವ ಮುನ್ನ ಯೋಜನೆಗಳ ಸಂವಹನ ಸಾಮಥ್ರ್ಯವನ್ನು ಅರಿತಿರಬೇಕು. ಮೊದಲಿಗೆ ಅಂದುಕೊಂಡಿದ್ದನ್ನು ಸಾಧಿಸುವ ಆತ್ಮವಿಶ್ವಾಸವಿರಬೇಕು ಎಂದರು.
ಸಾಹೇ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್ ವಿದ್ಯಾರ್ಥಿಗಳು ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡಲು ಶಿಸ್ತು ಮತ್ತು ತಾಳ್ಮೆ ಮುಖ್ಯ. ಓದಿನ ಹಸಿವು ಹೆಚ್ಚಿಸಿಕೊಂಡು ಕಲಿತರೆ ಉತ್ತಮಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಸಂತೋಷ ಮಾತನಾಡಿ, ವಿದ್ಯಾರ್ಥಿಗಳು ನೌಕರಿಗೆ ಹೋಗುವಾಗ ಅನುಸರಿಸಬೇಕಾದ ಮಾರ್ಗದರ್ಶಿ ನಿಯಮಗಳು ಮತ್ತು ಕಂಪನಿಗಳ ಅಗತ್ಯತೆ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಡೀನ್ ಡಾ.ಎಂ.ಸಿದ್ದಪ್ಪ, ಸಂಯೋಜಕ ಪ್ರವೀಣ್ ಸೇರಿ ಉಪನ್ಯಾಸಕರು ಹಾಜರಿದ್ದರು.