ತುಮಕೂರ್ ಲೈವ್

ಕುಣಿಗಲ್ ನ ಸ್ವಾಮಿ, ಗುಬ್ಬಿ, ಕೊರಟಗೆರೆ ಶ್ರೀನಿವಾಸ ಪದವಿ ಪೂರ್ವ ಕಾಲೇಜುಗಳ ಮಾನ್ಯತೆ ರದ್ದು: ಬೀದಿ ಪಾಲಾದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು, 35 ಮಂದಿ ಸಿಬ್ಬಂದಿ

ತುಮಕೂರು: ಪರಿಶಿಷ್ಟ ಜಾತಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಕಾಲೇಜುಗಳಿಗೆ ಮಾನ್ಯತೆ ಹಾಗೂ ಅನುದಾನ ಪಡೆಯಲಾಗಿದೆ ಎಂಬ ಆರೋಪದ ಕಾರಣ ಕುಣಿಗಲ್ ನ ಸ್ವಾಮಿ ಪದವಿ ಪೂರ್ವ ಕಾಲೇಜು ಹಾಗೂ ಗುಬ್ಬಿ, ಕೊರಟಗೆರೆಯ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಪಡಿಸಲಾಗಿದೆ. ಇದರಿಂದಾಗಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 35 ಜನ ಸಿಬ್ಬಂದಿ ಭವಿಷ್ಯ ಡೋಲಾಯಮಾನ ಸ್ಥಿತಿ ತಲುಪಿದೆ.

ಪರಿಶಿಷ್ಟ ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಶ್ರೀನಿವಾಸ ವಿದ್ಯಾಸಂಸ್ಥೆಯನ್ನು 1983ರಲ್ಲಿ ಪ್ರಾರಂಭಿಸಿ ಅಲ್ಲಿಂದ ನಂತರದಲ್ಲಿ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳನ್ನು ಪಡೆದಿದ್ದರು. 2012ರಲ್ಲಿ ಅವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆಪಾದನೆ ಬಂದ ಹಿನ್ನೆಯಲ್ಲಿ ತುಮಕೂರು ಉಪನಿರ್ದೇಶಕರ ನೇತೃತ್ವದಲ್ಲಿ ಪರಿಶೀಲನೆ ನಡೆಸಲು 2012ರಲ್ಲಿ ಸರ್ಕಾರ ಆದೇಶಿಸಿತ್ತು.

ತನಿಖೆ ನಡೆದು ಪರಿಶಿಷ್ಟ ಜಾತಿಗೆ ಸೇರಿದವರೆಂದು ನೀಡಿರುವ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಸಾಭೀತಾದ ಹಿನ್ನೆಯಲ್ಲಿ ಸರ್ಕಾರ ಶ್ರೀನಿವಾಸ ವಿದ್ಯಾಸಂಸ್ಥೆಗೆ ಸೇರಿದ ಕುಣಿಗಲ್ನ ಸ್ವಾಮಿ ಪದವಿ ಪೂರ್ವ ಕಾಲೇಜು, ಗುಬ್ಬಿಯ ಶ್ರೀನಿವಾಸ ಪದವಿ ಪೂರ್ವ ಕಾಲೇಜು ಹಾಗೂ ಕೊರಟಗೆರೆ ಶ್ರೀನಿವಾಸ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಪಡಿಸಿ ಆದೇಶಿಸಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇರೆ ಕಾಲೇಜಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕಿ ಟಿ.ಎ.ಲಲಿತ ಕುಮಾರಿ ಅವರು ಸೋಮವಾರ ಕೊರಟಗೆರೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಕಾಲೇಜಿಗೆ ಸ್ಥಳಾಂತರಿಸಲು ಮುಂದಾದರು.

ಆಡಳಿತ ಮಂಡಳಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರದಿಂದ ಎಲ್ಲಾ ಅನುದಾನ ಪಡೆದು ವಂಚಿಸಿದೆ. ಇದು ತನಿಖೆಯಿಂದ ಸಾಬೀತಾಗಿದೆ. ಈ ಹಿನ್ನೆಯಲ್ಲಿ ಶಿಕ್ಷಣ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಪಡಿಸಬೇಕೆಂಬ ಸರ್ಕಾರದ ಆದೇಶದ ಮೇರೆಗೆ ಕಾಲೇಜಿಗೆ ಭೇಟಿ ನೀಡಿ ಕ್ರಮ ವಹಿಸುತ್ತಿರುವುದಾಗಿ ಲಲಿತಾ ಕುಮಾರಿ ಅವರು ತಿಳಿಸಿದರು.

ಕಾಲೇಜು ಮುಚ್ಚಲಾಗುತ್ತಿದೆ. ನೀವು ಬೇರೆ ಕಾಲೇಜಿಗೆ ಹೋಗಿ ಪಾಠ ಕೇಳಿ ಎಂದು ಡಿಡಿಪಿಯು ಅವರು ವಿದ್ಯಾರ್ಥಿಗಳಿಗೆ ಧೀಡೀರ್ ಸೂಚನೆ ನೀಡಿದ ಮೇಲೆ ಕೊಂಚ ಶಾಕ್ ಆದಂತಾದ ವಿದ್ಯಾರ್ಥಿಗಳು ನಾವು ಕಾಲೇಜು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಪರೀಕ್ಷೆ ಕೇವಲ ಮೂರು ತಿಂಗಳು ಇದ್ದು, ಈಗ ಏಕಾಏಕಿ ಕಾಲೇಜು ಬದಲಾವಣೆ ಮಾಡಿ ಎಂದರೆ ನಮಗೆ ಶೈಕ್ಷಣಿಕವಾಗಿಚೈತ್ರ, ದ್ವಿತೀಯ ಪಿಯುಸಿ ತೊಂದರೆ ಉಂಟಾಗಲಿದೆ. ಇದರೊಂದಿಗೆ ಕಾಲೇಜಿನಲ್ಲಿರುವ ಭೂಗೋಳಶಾಸ್ತ್ರ, ಸಂಸ್ಕೃತ ಹಾಗೂ ಐಚ್ಚಿಕ ಕನ್ನಡ ವಿಷಯಗಳು ಹತ್ತಿರದ ಕಾಲೇಜಿನಲ್ಲಿ ಇಲ್ಲ. ಹೀಗಿರುವಾಗ ನಮಗೆ ಹೇಗೆ ಪಾಠಗಳು ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳು ಎಂದು ಉಪನಿರ್ದೇಶಕರೆದುರು ಅಲವತ್ತುಕೊಂಡರು.

ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಪಾಠ ಪ್ರವಚನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇಲ್ಲಿನ ಸಿಬ್ಬಂದಿ ಸಂಸ್ಥೆ ನಂಬಿಕೊಂಡು 30-35 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಳೆದ ಐದು ತಿಂಗಳಿಂದ ಸಂಬಳ ನಿಲ್ಲಿಸಲಾಗಿದೆ. ಸಿಬ್ಬಂಧಿಗೆ ಯಾವುದೇ ಪರ್ಯಾಯ ಒದಗಿಸಿಲ್ಲ. ಈಗ ಏಕಾಏಕಿ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಕಳುಹಿಸುವುದರಿಂದ ಇಲ್ಲಿನ ಸಿಬ್ಬಂದಿಗೆ ಇನ್ನಷ್ಟು ತೊಂದರೆಯಾಗಲಿದೆ. ಸಿಬ್ಬಂದಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಡಿಡಿ ಅವರನ್ನು ಕೋರಿಕೊಂಡರು.

ಇದೇ ವೇಳೆ ಪೋಷಕರು ವಿಷಯ ತಿಳಿದು ಕಾಲೇಜಿಗೆ ಓಡೋಡಿ ಬಂದು, ಡಿಡಿಪಿಯು ಅವರನ್ನು ಪರೀಕ್ಷೆ ಕೊನೆಗೊಳ್ಳುವವರೆಗೆ ಇದೇ ಜಾಗದಲ್ಲಿ ತರಗತಿಗಳು ಮುಂದುವರೆಯುವಂತೆ ಮನವಿ ಮಾಡಿದರಾದರೂ ಸರ್ಕಾರದ ಆದೇಶ ಇರುವ ಕಾರಣ ಯಾವುದೇ ಕಾರಣಕ್ಕೂ ನಾನು ಏನೂ ಮಾಡಲು ಬರುವುದಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೇರೆ ಕಾಲೇಜಿಗೆ ಸ್ಥಳಾಂತರಿಸಿ ಪಾಠ ಪ್ರವಚನಕ್ಕೆ ವ್ಯವಸ್ಥೆ ಮಾಡುವುದಾಗಿ ಲಲಿತ ಕುಮಾರಿ ತಿಳಿಸಿದರು.

ಕಾಲೇಜಿನ ವೇತನಾನುದಾನವನ್ನು ಹಿಂಪಡೆಯುವ ಬಗ್ಗೆ 2017ರಲ್ಲಿ ನೋಟೀಸ್ ನೀಡಿ ತನಿಖೆಗೆ ಆದೇಶಿಲಾಗಿತ್ತು. ಪ್ರಕರಣ ಸಾಬೀತಾಗಿರುವ ಹಿನ್ನೆಯಲ್ಲಿ ವಿದ್ಯಾಸಂಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕಾಲೇಜುಗಳ ಮಾನ್ಯತೆ ರದ್ದು ಮಾಡಿ ವೇತನ ಅನುದಾನ ಹಿಂಪಡೆಯಲು ಆದೇಶಿಸಿದೆ. ಈ ಹಿನ್ನೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೂ ಸಂಬಳ ತಡೆ ಹಿಡಿಯಲಾಗಿದೆ ಎಂದರು.

ಶಿಕ್ಷಣ ಇಲಾಖೆಯ ಈ ಕ್ರಮದಿಂದಾಗಿ ಕೊರಟಗೆರೆ ಶ್ರೀನಿವಾಸ ಕಾಲೇಜಿನ ಒಟ್ಟು 253 ವಿದ್ಯಾರ್ಥಿಗಳು ಹಾಗೂ 12 ಜನ ಸಿಬ್ಬಂದಿ, ಗುಬ್ಬಿ ಶ್ರೀನಿವಾಸ ಕಾಲೇಜಿನ 98 ವಿದ್ಯಾರ್ಥಿಗಳು, 13 ಜನ ಸಿಬ್ಬಂದಿ, ಕುಣಿಗಲ್ ಸ್ವಾಮಿ ಪದವಿ ಪೂರ್ವ ಕಾಲೇಜಿನ 98 ವಿದ್ಯಾರ್ಥಿಗಳು ಹಾಗೂ 12 ಜನ ಸಿಬ್ಬಂದಿ ಬೀದಿಪಾಲಾದಂತಾಗಿದೆ.

ಸರ್ಕಾರದ ಆದೇಶದ ಕಾರಣ ವಿದ್ಯಾರ್ಥಿಗಳನ್ನು ಬೇರೆ ಬೇರೆ ಕಾಲೇಜುಗಳಿಗೆ ಸ್ಥಳಾಂತರಿಸಲೇಬೇಕಾಗಿದೆ. ಇದಕ್ಕಾಗಿ ಅವರ ಮನವೊಲಿಸಲಾಗುವುದು. ವಿದ್ಯಾರ್ಥಿಗಳ ಶಿಕ್ಷಣ, ಅಧ್ಯಯನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

– ಲಲಿತಾ ಕುಮಾರಿ, ಪಿಯು ಡಿಡಿ


ನಮ್ಮ ಕಾಲೇಜಿನಲ್ಲಿ ಇರುವ ಐಚ್ಛಿಕ ವಿಷಯಗಳು ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಲ್ಲ. ಹಾಗಾಗಿ ಅಲ್ಲಿ ಆ ವಿಷಯದ ಉಪನ್ಯಾಸಕರೂ ಇಲ್ಲ. ನಾವಲ್ಲಿಗೆ ಹೋದಲ್ಲಿ ನಮ್ಮ ಪಾಠ ಪ್ರವಚನ ಇಲ್ಲದಂತಾಗುತ್ತದೆ.

ಚೈತ್ರ, ದ್ವಿತೀಯ ಪಿಯುಸಿ ವಿದ್ಯಾರ್ಥಿ.


ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವೆ ಏನೇ ಸಮಸ್ಯೆ ಇರಲಿ ಸದಸ್ಯಕ್ಕೆ ನಮ್ಮನ್ನು ಬೇರೆ ಕಾಲೇಜಿಗೆ ಸ್ಥಳಾಂತರ ಮಾಡದೇ ಇದೇ ಕಾಲೇಜಿನಲ್ಲಿ ಪಾಠ ಕೇಳಲು ಅವಕಾಶ ಮಾಡಿಕೊಡಬೇಕು.

ವಿದ್ಯಾ, ವಿದ್ಯಾರ್ಥಿನಿ


ಏಕಾಏಕಿ ಕಾಲೇಜಿನಿಂದ ಬೇರೆ ಕಾಲೇಜಿಗೆ ಸ್ಥಳಾಂತರದ ಸುದ್ಧಿ ಕೇಳಿ ನಮಗೆ ಆಶ್ಚರ್ಯ ಹಾಗೂ ಧಿಗ್ಬ್ರಾಂತಿಯಾಗಿದೆ. ಕೇವಲ ಮೂರು ತಿಂಗಳು ಪರೀಕ್ಷೆ ಇದ್ದು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಬಹಳಷ್ಟು ಜನ ಅನುತ್ತೀರ್ಣರಾದರೆ ಅದಕ್ಕ ಎಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.

ನವೀನ, ದ್ವಿತೀಯ ಪಿಯುಸಿ ವಿದ್ಯಾರ್ಥಿ


ಸಂಸ್ಥೆ ಮಾಡಿದ ತಪ್ಪಿಗೆ ಇದನ್ನೆ ನಂಬಿಕೊಂಡಿರುವ ನಾವು ಬೀದಿ ಪಾಲಾದಂತಾಗಿದೆ. ಈಗಾಗಲೇ ಐದು ತಿಂಗಳ ವೇತನ ನಿಲ್ಲಿಸಲಾಗಿದ್ದು, ಜೀವನ ತುಂಬಾ ದುಸ್ಥರವಾಗಿದೆ. ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸುವಂತೆ ನಮ್ಮನ್ನು ಬೇರೆ ಕಾಲೇಜಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ನಾವು, ನಮ್ಮ ಕುಟುಂಬ ವಿಷ ಸೇವಿಸಿ ಸಾಯಬೇಕಾಗುತ್ತೆ.

ಸಣ್ಣಸಿದ್ದಪ್ಪ, ಉಪನ್ಯಾಸಕ

ಈ ಬಗ್ಗೆ ಆಡಳಿತ ಮಂಡಳಿ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದರೂ ಲಭ್ಯವಾಗಲಿಲ್ಲ. ಆಡಳಿತ ಮಂಡಳಿ ಪ್ರತಿಕ್ರಿಯೆ ಕೊಟ್ಟರೆ ಅದನ್ನು ಈ ವರದಿಯೊಂದಿಗೆ ಪ್ರಕಟಿಸಲಾಗುವುದು.

Comment here