Tumkur: ಜಾತ್ರೆಗೆ ಬರುವ ರೈತರು ಮತ್ತು ಸಾಮಾನ್ಯ ಜನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಕೃಷಿ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿರುವ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮಾಧುಸ್ವಾಮಿ ಇಲ್ಲಿ 1964 ರಿಂದ ಪ್ರದರ್ಶನ ನಡೆದುಕೊಂಡು ಬರುತ್ತಿದೆ. ಜಾತ್ರೆಯೂ ಕೂಡ ನಡೆಯುತ್ತಿದೆ. ಜಾತ್ರೆಗೆ ಬರುವ ರೈತರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶ ವಸ್ತುಪ್ರದರ್ಶನದ ಹಿಂದೆ ಇದೆ ಎಂದರು.
ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂತಹ ವಸ್ತು ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಜಾತ್ರೆಗೆ ಬಂದ ಜನರಿಗೆ ಅರಿವು ಮೂಡಿಸುವುದು, ಈ ಕೃಷಿ ಮತ್ತು ವಸ್ತುಪ್ರದರ್ಶನ ನೋಡಿ ರೈತರು ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ರೈತರು ಕೃಷಿಯಲ್ಲಿ ವರಮಾನ ಹೇಗೆ ಪಡೆಯಬಹುದು. ಬೆಳೆಗಳ ಕುರಿತು ಮಾಹಿತಿ, ರೈತರಿಗೆ ಬೇಕಾಗಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಜನರನ್ನು ಸೇರಿಸುವುದು ಕಷ್ಟದ ಕೆಲಸ. ಹಾಗಾಗಿ ಈ ಜಾತ್ರೆಯ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.