ತುಮಕೂರು:
ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರು ಮೊದಲು ಹಣ ಗಳಿಕೆಗೆ ಆಸೆ ಪಡದೇ ತಮ್ಮ ವೃತ್ತಿಯ ಬಗ್ಗೆ ಗೌರವ ಹಾಗೂ ನೊಂದವರಿಗೆ ನ್ಯಾಯ ದೊರಕಿಸುವ ನಿಷ್ಠೆ ಹೊಂದಿದಾಗ ಮಾತ್ರ ವೃತ್ತಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಿ.ಜಯಂತ ಕುಮಾರ್ ತಿಳಿಸಿದರು.
ನಗರದ ಸೂಫಿಯಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಕೀಲ ವೃತ್ತಿ ಆಯ್ಕೆ ಮಾಡಿಕೊಳ್ಳುವಂತವರು ಮೊದಲು ಹಣದ ಹಿಂದೆ ಓಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇದು ವೃತ್ತಿಯಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಕೆಗೆ ಕುಂಠಿತ ಉಂಟಾಗಲಿದೆ. ಬಹುಬೇಗ ಹಣ ಮಾಡುವ ಉದ್ದೇಶವೇನೋ ಈಡೇರಬಹುದು ಆದರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಲು ಸಾಧ್ಯವಾಗುವುದಿಲ್ಲ ಎಂದರು.
ಹಣದ ಆಸೆಗೆ ಬಹಳಷ್ಟು ಜನ ಕ್ರಿಮಿನಲ್ ಕೇಸುಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಿರುವ ಕಾರಣದಿಂದಾಗಿ ಸಿವಿಲ್ ಕೇಸುಗಳನ್ನು ತೆಗೆದುಕೊಳ್ಳುವ ವಕೀಲರ ಸಂಖ್ಯೆಯೇ ಕಡಿಮೆಯಾಗಿದೆ. ಸಿವಿಲ್ ವ್ಯಾಜ್ಯಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು.

ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯ ಎ.ಎನ್.ಗೌರೀಶ್ ಮಾತನಾಡಿ, ಕಾನೂನು ಪದವಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಆ ಕಾರಣದಿಂದಾಗಿ ವಿಶ್ವವಿದ್ಯಾಲಯದಲ್ಲಿ ಅನೇಕ ಶೈಕ್ಷಣಿಕ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಈ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ವೃತ್ತಿ ಘನತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದ ಅವರು ಕಾಲೇಜಿನ ಶೈಕ್ಷಣಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ್ಸಾ ಮಾತನಾಡಿ, ವೃತ್ತಿಪರತೆ ಹಾಗೂ ಸತತ ಪ್ರಯತ್ನದಿಂದ ನಾವು ಮಾಡುವ ಕೆಲಸದಲ್ಲೆ ಉನ್ನತ ಸಾಧನೆ ಮಾಡಬಹುದು. ವಕೀಲ ವೃತ್ತಿ ವಿಶಾಲವಾಗಿದ್ದು, ಪದವಿ ಗಳಿಸಿದ ನಂತರವೂ ಸತತ ಓದು ಹಾಗೂ ಪ್ರಯತ್ನ, ಪರಿಶ್ರಮ ವಕೀಲ ವೃತ್ತಿಗೆ ಅತ್ಯಗತ್ಯ. ಈ ವೃತ್ತಿಯಲ್ಲಿ ಪ್ರತಿ ದಿನವೂ ಹೊಸತನ್ನು ಕಲಿಯಲು ಅವಕಾಶ ಇದೆ ಎಂದರು.
ಕಾಲೇಜು ಪ್ರಾಂಶುಪಾಲ ಎಸ್.ರಮೇಶ್ ಮಾತನಾಡಿ, ನಮ್ಮನ್ನು ನಾವು ಆಕಾಶದೆತ್ತರೆಕ್ಕೆ ಬೆಳೆಯಲು ವಿದ್ಯೆಯೊಂದೆ ಸೂಕ್ತ ದಾರಿ. ಪರಿಶ್ರಮ ಪಟ್ಟಂತ ವ್ಯಕ್ತಿಗಳು ಇಂದು ವಿಶ್ವದ ಅಗ್ರಗಣ್ಯ ನಾಯಕರಾಗಿ ಎಲ್ಲರಿಗೂ ಮಾದರಿ ಎನಿಸಿದ್ದಾರೆ ಎಂದು ಅಬ್ದುಲ್ ಕಲಾಂ ಹಾಗೂ ಮಾಜಿ ರಾಷ್ಟ್ರಪತಿ ನಾರಾಯಣ್ ಅವರ ಜೀವನ ಚರಿತ್ರೆಯನ್ನು ನೆನಪಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಕಾಲೇಜಿನ ಕಾರ್ಯದರ್ಶಿ ಶಫಿ ಅಹಮದ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.
ಕಾನೂನು ಪದವಿ ಮುಗಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಟಿ.ಓಬಯ್ಯ, ಪ್ರಾದ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಕಾಶಿಫ್, ತರನಂ, ಸವಿತಾ, ನರೇಶ್ ಬಾಬು, ಸುಬ್ರಮಣ್ಯ, ಜಗದೀಶ್ ಇತರರು ಇದ್ದರು.