ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ ದಾಸ್ತಾನು ಮಾಡಲಾಗಿದ್ದ ಸಾವಿರಾರು ಪಿವಿಸಿ ಪೈಪ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಸಂಭವಿಸಿದೆ.
ಸುಮಾರು ನಾಲ್ಕು ಲಾರಿ ಲೋಡ್ ಪಿವಿಸಿ ಪೈಪ್ ಗಳು ಬೆಂಕಿಯಲ್ಲಿ ಬೂದಿಯಾಗಿವೆ. ಯಾವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬುದು ತಿಳಿದು ಬಂದಿಲ್ಲ.
ಪಿವಿಸಿ ಪೈಪ್ ಗಳು ಹೊತ್ತಿಕೊಂಡು ಉರಿಯುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಒಂಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.
ತುಮಕೂರು ನಗರದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಮೀಪ ಉಪ್ಪಾರಹಳ್ಳಿ ಮೇಲ್ಸೇತು ಪಕ್ಕದಲ್ಲಿ ಪಿವಿಸಿ ಪೈಪ್ ಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಪೈಪ್ ಗಳು ಬೆಂಕಿಯಲ್ಲಿ ಹೊತ್ತಿ ಉರಿಯುವ ದೃಶ್ಯಗಳನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನೋಡ ನೋಡುತ್ತಿದ್ದಂತೆಯೇ ಎಲ್ಲಾ ನಾಲ್ಕು ಲೋಡು ಪೈಪ್ ಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಇಲ್ಲಿಯೇ ಸ್ಮಾರ್ಟ್ ಸಿಟಿ ಕಚೇರಿಯೂ ಇದೆ.