ತುಮಕೂರ್ ಲೈವ್

ಹಗುರವಾಗಿ ಮಾತನಾಡಿದರೆ ಸುಮ್ಮನಿರೋಲ್ಲ; ಕುರುಬರ ಎಚ್ಚರಿಕೆ

ತುಮಕೂರು; ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾ ಮಠದ ಮಠಾಧೀಶ ಈಶ್ವರಾನಂದಪುರಿ ಸ್ವಾಮಿಗಳನ್ನು ಅವಮಾನಿಸಿದ್ದಾರೆ ಎಂದು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಪುನರುಚ್ಚರಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುರುಬ ಮುಖಂಡರು ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಬಗ್ಗೆ ಯಾರೇ ಹಗರುವಾಗಿ, ಅವಹೇಳನಕಾರಿಯಾಗಿ ಮಾತನಾಡಿದರೂ ಅಂಥವರ ವಿರುದ್ದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರು ಕುರುಬ ಜನಾಂಗದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ಬಲವಾಗಿ ಖಂಡಿಸುತ್ತೇವೆ. ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ಚುನಾವಣೆಯಲ್ಲಿ ಕುರುಬರ ಮತಗಳೇ ಬೇಡ ಎಂದಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಹಗರುವಾಗಿ ಮಾತನಾಡಿದ್ದರು. ಇಂತಹ ನಡವಳಿಕೆಗಳನ್ನು ಸಮಾಜ ಸಹಿಸುವುದಿಲ್ಲ ಎಂದು ತಿಳಿಸಿದರು.
ಹುಳಿಯಾರು ಪಂಚಾಯ್ತಿಯ ಸಭೆಯಲ್ಲಿ ಕನಕ ವೃತ್ತ ನಾಮಫಲಕ ವಿಷಯವಾಗಿ ಚರ್ಚಿಸಿ, ಠರಾವು ಪಾಸು ಮಾಡಿ ನಾಮಕರಣ ಮಾಡಿರುವುದು ಕಾನೂನು ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

ಕಳೆದ 10 ದಿನಗಳಿಂದ ನಡೆದ ಹೋರಾಟದ ಫಲವಾಗಿ ಮತ್ತೆ ಸದರಿ ನಾಮಫಲಕದ ಪುನರ್ ಸ್ಥಾಪನೆ ಆಗಿರುವುದಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘ ಅಭಿನಂದನೆ ಸಲ್ಲಿಸುತ್ತಿದೆ ಎಂದರು.

ನಮ್ಮ ಹೋರಾಟಕ್ಕೆ ಸಹಕರಿಸಿದ ಎಲ್ಲ ಸಂಘಟನೆಗಳು, ಮಾಧ್ಯಮಗಳು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶಾಂತಿ ಸಭೆಯಲ್ಲಿ ಹಗುರವಾಗಿ ವರ್ತಿಸಿದ ಪರಿಣಾಮ ಇಡೀ ರಾಜ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕ್ಷಮಾಪಣೆ ಕೇಳಿ ಕನಕವೃತ್ತ ನಾಮಫಲಕ ಪ್ರತಿಷ್ಠಾಪನೆಗೆ ಸೂಚಿಸದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕುರುಬ ಸಮಾಜದ ಮುಖಂಡರಾದ ಸಿ.ಶಿವಮೂರ್ತಿ, ಚಿಕ್ಕವೆಂಕಟಯ್ಯ, ರಾಜು,ಎ.ಮಹಾಲಿಂಗಯ್ಯ, ಕೆಂಪರಾಜು, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.

Comment here